ಬಂಟ್ವಾಳ: ಪ್ರತಿಭಾ ಕಾರಂಜಿಯ ಅಂಗವಾಗಿ ನಡೆಯುತ್ತಿರುವ ವಾಲಿಬಾಲ್ ಕ್ರೀಡಾಕೂಟದಲ್ಲಿ ನಿಯಮವನ್ನು ಗಾಳಿಗೆ ತೂರಿ ಶಾಲೆಯೊಂದರ ತಂಡ ಆಟವಾಡಲು ಮುಂದಾಗಿರುವುದನ್ನು ಆಕ್ಷೇಪಿಸಿದ ಘಟನೆಯೊಂದು ಸಜೀಪಮೂಡ ಸರ್ಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ನಡೆದಿದೆ. ಇದರಿಂದಾಗಿ ಆಕ್ಷೇಪಿಸಿದ ದೈಹಿಕ ಶಿಕ್ಷಕ ಹಾಗೂ ದೈಹಿಕ ಕ್ರೀಡಾ ಪರಿವೀಕ್ಷಕರ ನಡುವೆ ಮಾತಿನ ಚಕಮಕಿಯೂ ನಡೆದಿದೆ.


ನಿಯಮವನ್ನು ಗಾಳಿಗೆ ತೂರಿ ತಂಡವನ್ನು ರಚಿಸಲಾಗಿದೆ ಅಲ್ಲದೆ ವಯೋಮಿತಿಯ ದಾಖಲೆಯನ್ನು ತಿದ್ದುಪಡಿ ಮಾಡಿ ನೀಡಲಾಗಿದೆ ಎಂದು ಆರೋಪಿಸಿ ಲೊರೆಟ್ಟೋ ಆಂಗ್ಲ ಮಾಧ್ಯಮ ಶಾಲೆಯ ದೈಹಿಕ ಶಿಕ್ಷಕರು ಎದುರಾಳಿ ತಂಡದೊಂದಿಗೆ ಆಟವಾಡಲು ಆಕ್ಷೇಪ ವ್ಯಕ್ತ ಪಡಿಸಿದರು. ಈ ಸಂದರ್ಭ ತಂಡದ ಸದಸ್ಯರ ವಯೋಮಿತಿಯ ಬಗ್ಗೆ ಸಂಶಯ ವ್ಯಕ್ತಪಡಿಸಿ ಪರಿಶೀಲನೆ ನಡೆಸುವಂತೆ ಆಗ್ರಹಿಸಿದರು. ಆದರೆ ನಿಮ್ಮ ಆಕ್ಷೇಪವನ್ನು ಲಿಖಿತವಾಗಿ ನೀಡಿ, ಕ್ರೀಡಾಕೂಟ ಮುಗಿದ ಬಳಿಕ ಪರಿಶೀಲನೆ ನಡೆಸುವುದಾಗಿ ಮೇಲಾಧಿಕಾರಿ ಉಡಾಫೆಯ ಉತ್ತರ ನೀಡಿರುವುದಾಗಿ ಆರೋಪಿಸಲಾಗಿದೆ. ಈ ಸಂದರ್ಭದಲ್ಲಿ ಆಕ್ಷೇಪ ವ್ಯಕ್ತಪಡಿಸಿದ ದೈಹಿಕ ಶಿಕ್ಷಕರ ತಂಡವನ್ನು ಗೈರು ಹಾಜರಿಯೆಂದು ಘೋಷಿಸಿ ಪಂದ್ಯಾ ನಡೆಸಲು ಮುಂದಾಗಿದ್ದು ಗೊಂದಲಕ್ಕೆ ಕಾರಣವಾಗಿತ್ತು. ವಿದ್ಯಾರ್ಥಿ ಗಳ ಕ್ರೀಡಾ ಭವಿಷ್ಯದ ಮೇಲೆ ಇಲಾಖೆಯ ಅಧಿಕಾರಿಗಳೇ ಸವಾರಿ ಮಾಡ ಹೊರಟಿರುವುದು ಸರಿಯಲ್ಲ ಎನ್ನುವ ದೂರುಗಳು ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ.
ಘಟನೆಯ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ತೆರಳಿದ್ದ ಪತ್ರಕರ್ತರೊಂದಿಗೆ ಶಾಲಾ ಶಿಕ್ಷಕಿಯೋರ್ವರು ಅನುಚಿತವಾಗಿ ವರ್ತಿಸಿದ ಘಟನೆಯೂ ನಡೆಯಿತು. ಈ ಬಗ್ಗೆ ಸುದೀರ್ಘ ಮಾತುಕತೆ ನಡೆದು ಲೊರೆಟ್ಟೋ ಶಾಲೆಯ ತಂಡಕ್ಕೆ ಆಟಕ್ಕೆ ಅವಕಾಶ ಮಾಡಿಕೊಡಲಾಯಿತು.
