‘ಉಳಿತಾಯ ಜೊತೆಗೆ ವಿಮಾ ರಕ್ಷಣೆ ಎಲ್ಲೈಸಿ ವೈಶಿಷ್ಟ್ಯ’
ಬಂಟ್ವಾಳ: ದೇಶದೆಲ್ಲೆಡೆ ಕಳೆದ 1956ರಿಂದ ಜನತೆಗೆ ಉಳಿತಾಯ ಜೊತೆಗೆ ವಿಮಾ ರಕ್ಷಣೆ ಒದಗಿಸುವ ಮೂಲಕ ವೈಶಿಷ್ಟ್ಯತೆ ಹೊಂದಿರುವ ಭಾರತೀಯ ಜೀವ ವಿಮಾ ನಿಗಮ ಸಂಸ್ಥೆಯು ಜನರ ಮೂಲಭೂತ ಸೌಲಭ್ಯಕ್ಕಾಗಿ ಕಳೆದ ಸಾಲಿನಲ್ಲಿ ಒಟ್ಟು ರೂ 12,86,770 ಕೋಟಿ ಮೊತ್ತವನ್ನು ಧನಪತ್ರ ಮೂಲಕ ಹೂಡಿಕೆ ಮಾಡಿದೆ ಎಂದು ಬಂಟ್ವಾಳ ಶಾಖಾಧಿಕಾರಿ ಡಿ.ಬಾಲಕೃಷ್ಣ ಹೇಳಿದ್ದಾರೆ.
ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ಎಲ್ಲೈಸಿ ಶಾಖೆಯಲ್ಲಿ ಮಂಗಳವಾರ ಆರಂಭಗೊಂಡ ‘ವಿಮಾ ಸಪ್ತಾಹ’ ಕಾರ್ಯಕ್ರಮ ಉದ್ಘಾಟನಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಸಕ್ತ 1.18ಲಕ್ಷ ಸಿಬ್ಬಂದಿ ಮತ್ತು 11.63ಲಕ್ಷ ಸಮರ್ಥ ಪ್ರತಿನಿಧಿಗಳನ್ನು ಹೊಂದಿರುವ ಸಂಸ್ಥೆಯು, ಪುಟ್ಟ ಮಗುವಿನಿಂದ ವಯೋವೃದ್ಧರತನಕ ಗ್ರಾಹಕರಿಗಾಗಿ ಸುಮಾರು 20ರಷ್ಟು ವಿನೂತನ ಪಾಲಿಸಿಗಳನ್ನು ಬಿಡುಗಡೆಗೊಳಿಸಿದೆ ಎಂದು ಅವರು ವಿವರಿಸಿದರು.
’59ನೇ ವರ್ಷದ ವಿಮಾ ಸಪ್ತಾಹ’ ಕಾರ್ಯಕ್ರಮವನ್ನು ಇಲ್ಲಿನ ಪ್ರಥಮ ಗ್ರಾಹಕ ದೀಪಕ್ ವಿ.ಆಚಾರ್ಯ ಮತ್ತು ನಿವೃತ್ತ ಅಭಿವೃದ್ಧಿ ಅಧಿಕಾರಿ ಎಂ.ಜಿ.ಶೆಟ್ಟಿ ಉದ್ಘಾಟಿಸಿದರು.
ಸಹಾಯಕ ಆಡಳಿತಾಧಿಕಾರಿ ಬಿ.ಎಸ್.ನಾಯ್ಕ್ ಮಾತನಾಡಿ, ವಿಮಾ ಸಪ್ತಾಹ ಪ್ರಯುಕ್ತ ಗ್ರಾಹಕರು ಮಾತ್ರವಲ್ಲದೆ ಪ್ರತಿನಿಧಿಗಳು ಮತ್ತು ಅಭಿವೃದ್ಧಿ ಅಧಿಕಾರಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಸ್ಥಳೀಯ ಅನಾಥಾಶ್ರಮಕ್ಕೆ ಭೇಟಿ ನೀಡಿ ವಿಶೇಷ ಕೊಡುಗೆ ಸಲ್ಲಿಸಲಾಗುವುದು ಎಂದರು.
ಸಹಾಯಕ ಶಾಖಾಧಿಕಾರಿ ಮಧುಸೂಧನ್, ಅಭಿವೃದ್ಧಿ ಅಧಿಕಾರಿಗಳಾದ ಗೋಕುಲ್ ಶೇಠ್, ಮಧ್ವರಾಜ್ ಬಿ.ಕಲ್ಮಾಡಿ, ಸತೀಶ್, ದಿನೇಶ ಮಾಮೇಶ್ವರ, ಸೌಂದರ್ಯರಾಜ್ ಮತ್ತಿತರರು ಇದ್ದರು.
ಎಲ್ಲೈಸಿ ತರಬೇತಿ ಕೇಂದ್ರ ಪ್ರಾಂಶುಪಾಲ ಎಸ್.ಗೋಪಾಲಕೃಷ್ಣ ಭಟ್ ಸ್ವಾಗತಿಸಿದರು. ಹಿರಿಯ ಅಧಿಕಾರಿ ರಾಮಯ್ಯ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಎಚ್.ಜಿ.ಸುರೇಶ್ ವಂದಿಸಿದರು.
