ಬೆಂಗಳೂರು: ಟ್ವಿಟ್ಟರ್ ಸೇರಿದಂತೆ ಸೋಷಿಯಲ್ ಮೀಡಿಯಾ ಭವಿಷ್ಯದ ಶಕ್ತಿ ಎಂದು ಮಂಡ್ಯ ಕಾಂಗ್ರೆಸ್ ಅಭ್ಯರ್ಥಿ ರಮ್ಯಾ ಟ್ವೀಟ್ ಮಾಡಿದ್ದಾರೆ. ಭವಿಷ್ಯದಲ್ಲಿ ತಂತ್ರಜ್ಞಾನವೇ ಪ್ರಧಾನ, ನೀವದರಲ್ಲಿಲ್ಲದಿದ್ದರೆ ಕಳೆದುಹೋಗುತ್ತೀರಿ ಎಂದು ಹಾಲಿ ಸಂಸದೆ ಎಚ್ಚರಿಸಿದ್ದಾರೆ. ನಿನ್ನೆ ರೆಬೆಲ್ ಸ್ಟಾರ್ ಅಂಬರೀಷ್ ಅವರು ಟ್ವಿಟ್ಟರ್, ಫೇಸ್’ಬುಕ್’ನಿಂದ ಮಂಡ್ಯ ಜನರನ್ನ ತಲುಪಲು ಸಾಧ್ಯವಿಲ್ಲ ಎಂದು ರಮ್ಯಾಗೆ ಬುದ್ಧಿ ಹೇಳಿದ ಹಿನ್ನೆಲೆಯಲ್ಲಿ ನಟಿ ತನ್ನ ವರಸೆ ತೋರಿದ್ದಾರೆನ್ನಲಾಗಿದೆ.

ramya1

ಮಂಡ್ಯದ ಅಭಿವೃದ್ಧಿ ಬಗ್ಗೆ ತಮಗಿರುವ ಕಲ್ಪನೆ ಬಗ್ಗೆ ಶನಿವಾರ ಬೆಳಗ್ಗೆ ಟ್ವೀಟ್ ಆರಂಭಿಸಿದ ರಮ್ಯಾ, ಮಂಡ್ಯದ ಪ್ರತಿಯೊಂದು ಹಳ್ಳಿಹಳ್ಳಿಯ ಜನರಿಗೆ ಇಂಟರ್ನೆಟ್ ಸೌಲಭ್ಯ ಸಿಕ್ಕು ಎಲ್ಲರೂ ಟ್ವಿಟ್ಟರ್’ನಲ್ಲಿ ತನ್ನೊಂದಿಗೆ ಕನೆಕ್ಟ್ ಆಗುವುದು ತನ್ನಾಸೆ ಎಂದು ಹೇಳಿದ್ದಾರೆ. ಹಾಗೆಯೇ, ಸೋಷಿಯಲ್ ಮೀಡಿಯಾದಲ್ಲಿರುವವರಿಗೆ ತಾನಲ್ಲಿಯೇ ಕನೆಕ್ಟ್ ಆಗುವುದಾಗಿಯೂ, ಅದರಲ್ಲಿಲ್ಲದವರನ್ನ ತಲುಪಲು ಬಿಸಿಲಿಗೆ ಹೋಗುವುದಾಗಿಯೂ ರಮ್ಯಾ ಟ್ವೀಟ್ ಮಾಡಿರುವುದು ಕುತೂಹಲ ಮೂಡಿಸಿದೆ. ಅಂಬರೀಷ್ ಅವರ ನಿನ್ನೆಯ ಟೀಕೆ ಮತ್ತು ಬುದ್ಧಿಮಾತಿಗೆ ಇದು ರಮ್ಯಾ ಅವರ ನೇರ ಪ್ರತಿಕ್ರಿಯೆಯಂತಿದೆ.
ತಾನು ಸೋಷಿಯಲ್ ಮೀಡಿಯಾ ಬಗ್ಗೆ ಟ್ವೀಟ್ ಮಾಡಿದ್ದನ್ನು ಮಾಧ್ಯಮಗಳು ದೊಡ್ಡ ಸುದ್ದಿ ಮಾಡಿದ್ದಕ್ಕೆ ಪ್ರತಿಕ್ರಿಯಿಸಿರುವ ರಮ್ಯಾ, ಮಾಧ್ಯಮಗಳು ಈ ವಿಷಯವನ್ನ ಯಾಕಿಷ್ಟು ಗಂಭೀರವಾಗಿ ತೆಗೆದುಕೊಳ್ಳುತ್ತವೆ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಮಲೇಷ್ಯಾದಿಂದ ಬೆಂಗಳೂರಿಗೆ ಬಂದ ರೆಬೆಲ್ ಸ್ಟಾರ್ ಅಂಬರೀಷ್ ನಿನ್ನೆ ಸಂಜೆ ಪತ್ರಿಕಾಗೋಷ್ಠಿ ವೇಳೆ ಮಾತನಾಡುವಾಗ ರಮ್ಯಾ ಮತ್ತು ಸೋಷಿಯಲ್ ಮೀಡಿಯಾ ವಿಷಯವನ್ನೂ ಪ್ರಸ್ತಾಪಿಸಿದ್ದರು. ರಮ್ಯಾ ಒಳ್ಳೆಯ ಕೆಲಸ ಮಾಡಬೇಕೆಂದಿರುವ ಹುಡುಗಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದ ಅಂಬರೀಷ್, ಮಂಡ್ಯ ಕ್ಷೇತ್ರದ ಜನರನ್ನ ತಲುಪಲು ಒಂದಷ್ಟು ಸಲಹೆ ನೀಡಿದ್ದರು.
ಬಾಯಿತುಂಬಾ ಮಾತನಾಡಿದರೆ ಮಂಡ್ಯದ ಜನರಿಗೆ ಇಷ್ಟವಾಗುತ್ತದೆ, ಗದರಿದರೆ ಇನ್ನೂ ಇನ್ನೂ ಇಷ್ಟವಾಗುತ್ತದೆ. ಅದು ಬಿಟ್ಟು ಟ್ವಿಟ್ಟರ್, ಫೇಸ್’ಬುಕ್, ವಾಟ್ಸ್’ಅಪ್’ನಲ್ಲಿ ಮೆಸೇಜ್ ಕಳುಹಿಸಿದರೆ ಏನ್ ಪ್ರಯೋಜನ. ಮಂಡ್ಯದಲ್ಲಿ ಸೋಷಿಯಲ್ ಮೀಡಿಯಾ ನಡೆಯೊಲ್ಲ ಎಂದು ರಮ್ಯಾಗೆ ತಿಳಿಹೇಳಿದ್ದರು.

By suddi9

Leave a Reply

Your email address will not be published. Required fields are marked *