ಮೂಡುಬಿದಿರೆ: ಒಂದೆಡೆ ಮಳೆಯ ರಭಸ ದಿನೇ ದಿನೇ ಹೆಚ್ಚುತ್ತಾ ಮಳೆಗಾಲ ತನ್ನ ಅಬ್ಬರ ಹೆಚ್ಚಿಸುತ್ತಾ ಮುನ್ನಡೆದಿದ್ದರೆ ಇನ್ನೊಂದೆಡೆ ಇದೇ ಸಮಯದಲ್ಲಿ ರಾತ್ರಿ ವೇಳೆ ಮನೆಗಳ್ಳತನದ ಬಗ್ಗೆ ಹೊಂಚು ಹಾಕಿ ಕೆಲಸ ಮುಗಿಸುವವರ ಚಟುವಟಿಕೆಗಳೂ ಚುರುಕಾಗುತ್ತವೆ. ಇಂತಹ ಪ್ರಕರಣಗಳ ಬಗ್ಗೆ ವಿಶೇಷ ಕಾಳಜಿಯಿಂದ ಅಧ್ಯಯನ ನಡೆಸಿರುವ ಮೂಡುಬಿದಿರೆಯ ಪೋಲೀಸ್ ನಿರೀಕ್ಷಕ ಅನಂತ ಪದ್ಮನಾಭ ತನ್ನ ತಂಡದ ಜತೆಗೆ ಸಾರ್ವಜನಿಕರ ಮನೆಬಾಗಿಲಿಗೆ ತೆರಳಿ ಅವರಲ್ಲಿ ಜಾಗೃತಿ ಮೂಡಿಸುವ ವಿಶಿಷ್ಠ ಕೆಲಸಕ್ಕೆ ಮುಂದಾಗಿದ್ದಾರೆ.
ನಿರ್ಲಕ್ಷ್ಯ ಬೇಡ:
ಹೆಚ್ಚಿನವರಿಗೆ ಮನೆಯ ಮುಂಬಾಗಿಲು ದುಬಾರಿಯಾದರೂ ಪರವಾಗಿಲ್ಲ. ಆಕರ್ಷಕವಾಗಿರಬೇಕೆಂಬ ಆಸೆಯಿಂದ ಸಾಕಷ್ಟು ಖರ್ಚು ಮಾಡುತ್ತಾರೆ. ಆದರೆ ಹಿಂಬಾಗಿಲ ಬಗ್ಗೆ ಕಾಳಜಿ ಕಡಿಮೆ. ಅಲ್ಲಿ ಬರೇ ಚಿಲಕಗಳು ಮಾತ್ರ. ಹೆಚ್ಚಿನ ಕಳ್ಳತನ ಪ್ರಕರಣಗಳಲ್ಲಿ ಈ ಹಿಂಬಾಗಿಲನ್ನೇ ಅದರಲ್ಲೂ ರಸ್ತೆ ಪಕ್ಕದಲ್ಲಿರುವ ಮನೆಗಳನ್ನೇ ಟಾರ್ಗೆಟ್ ಮಾಡಲಾಗುತ್ತಿದೆ ಎನ್ನುತ್ತಾರೆ ನಿರೀಕ್ಷಕ ಅನಂತ ಪದ್ಮನಾಭ, ತಡರಾತ್ರಿ ಗಾಢ ನಿದ್ದೆಯಲ್ಲಿರುವಾಗ ಮನೆಯ ಹಿಂಭಾಗದಲ್ಲಿ ತೆರೆದ ಕಿಟಕಿಗಳ ಮೂಲಕ ಕೋಲು ತೂರಿಸಿ ಚಿಲಕ ತೆರೆಯುವ ಕಳ್ಳರು ಸುಲಭವಾಗಿ ಎಂಟ್ರಿಯಾಗುತ್ತಾರೆ ಎನ್ನುವುದನ್ನು ಗಮನಿಸಬೇಕಾಗಿದೆ. ಈ ಬಗ್ಗೆ ಅಲ್ಲಲ್ಲಿ ಮನೆಗಳಿಗೆ ತೆರಳಿ ಕಳ್ಳರ ಚಟುವಟಿಕೆಗಳ ಬಗ್ಗೆ ಮುನ್ನೆಚ್ಚರಿಕೆಯ ಕ್ರಮಗಳನ್ನು ವಿವರಿಸುತ್ತಿದೆ ಟೀಮ್ ಪೋಲೀಸ್. ಈಗಾಗಲೇ ಶಿರ್ತಾಡಿ, ಅಶ್ವತ್ಥಪುರ, ಬೆಳುವಾಯಿ ರಸ್ತೆಯಂಚಿನ ಮನೆಗಳಿಗೆ ಪೋಲೀಸರು ತೆರಳಿ ಅರಿವು ಮೂಡಿಸುವ ಕೆಲಸ ಮಾಡಿದ್ದಾರೆ.
ಗಮನಿಸಬೇಕಾದ ಅಂಶಗಳೆಂದರೆ…
* ಹಿಂಬಾಗಿಲಿನ ಭಧ್ರತೆಗೆ ಆದ್ಯತೆ ನೀಡಿ. ಕಬ್ಬಿಣದ ಪಟ್ಟಿ ಸಹಿತ ಲಾಕ್ ಇರಲಿ.
*ಅಡುಗೆ ಮನೆ ಕಿಟಕಿಗಳನ್ನು ಗ್ಯಾಸ್ ಸೋರಿಕೆ ಭೀತಿಯಿಂದ ತೆರೆದಿಡಬೇಡಿ. ಲಾಕ್ ಮಾಡಿ
* ಮನೆಯ ಸುತ್ತಲೂ,ವಿಶೇಷವಾಗಿ ಹಿಂಭಾಗದಲ್ಲಿ ಲೈಟಿಂಗ್ ವ್ಯವಸ್ಥೆ ಮಾಡಿಕೊಳ್ಳಿ. ಅನುಕೂಲವಿದ್ದವರು ಸಿಸಿ ಕ್ಯಾಮರಾ ಅಳವಡಿಸಿಕೊಳ್ಳಿ.
*ಮನೆಯ ನಾಯಿಯನ್ನು ರಾತ್ರಿಗೂಡಿನೊಳಗೆ ಕಟ್ಟಿ ಹಾಕುವ ಬದಲು ಕರ್ತವ್ಯ ನಿರ್ವಹಿಸಲು ಅವಕಾಶ ಕಲ್ಪಿಸಿ.
* ಮನೆ,ಮನೆಗೆ ಹಗಲಲ್ಲಿ ವಸ್ತು ಸೇವೆ ಮಾರಾಟಕ್ಕೆ ಬರುವವರ ಬಗ್ಗೆ ಗಮನವಿರಲಿ. ಅವರಿಗೆ ನೀರು ಉಪಚಾರದ ಬಗ್ಗೆ ಅತಿಯಾದ ಕಾಳಜಿ ಬೇಡ, ಹೀಗೆ ವಾಹನಗಳಲ್ಲಿ ಬರುವವರ ವಾಹನ ನಂಬ್ರವನ್ನು ಅವರಿಗೆ ಅರಿವಿಲ್ಲದೇ ದಾಖಲಿಸಿಕೊಳ್ಳಿ.
* ನೆರೆ ಹೊರೆಯವರ ದೂರವಾಣಿ/ ಮೊಬೈಲ್ ಸಂಖ್ಯೆಗಳು ಜತೆಗಿರಲಿ.
* ಸಂಶಯಾಸ್ಪದವೆನಿಸುವ ಬೆಳವಣಿಗೆಗಳು, ವ್ಯಕ್ತಿಗಳ ಬಗ್ಗೆ ನಿಮ್ಮ ಪರಿಸರದಲ್ಲಿ ಕಂಡು ಬಂದಾಗ ಅದನ್ನು ಪೋಲೀಸರೊಂದಿಗೆ ಶೇರ್ ಮಾಡಿಕೊಳ್ಳಿ.
* ತಡರಾತ್ರಿವರೆಗೆ ಮೊಬೈಲ್, ಟೀವಿಯಲ್ಲಿ ಮೈಮರೆಯುವುದನ್ನು ನಿಲ್ಲಿಸಿ.
* ಬಾಡಿಗೆಗೆ ಬರುವವರ ವಿವರಗಳನ್ನು ಠಾಣೆಗೆ ತಪ್ಪದೇ ನೀಡಿ.
* ಮನೆಯಂಗಳದಲ್ಲಿ ನಿಲ್ಲಿಸಿರುವ ವಾಹನಗಳಿಗೆ ಲಾಕ್ ಭದ್ರತೆ ತಪ್ಪಿಸಬೇಡಿ.
* ಗ್ರಾಮಾಂತರ ಮಟ್ಟದಲ್ಲಿ ಹತ್ತಾರು ಉತ್ಸಾಹಿ ಯುವಕರ ರಾತ್ರಿ ಕಾವಲು ಪಡೆ ರಚಿಸಿ ಪೋಲೀಸರೊಂದಿಗೆ ಸಹಕರಿಸಿ.
ಪೋಲೀಸರು ರಕ್ಷಣಾ ಕಾರ್ಯದಲ್ಲಿ ಸದಾ ನಿರತರಾಗಿರುತ್ತಾರೆ. ಆದರೆ ಸಾರ್ವಜನಿಕರು ತಮ್ಮ ಕರ್ತವ್ಯದಲ್ಲಿ ಲೋಪ ಎಸಗಬಾರದು. ಸೂಕ್ತ ಮುನ್ನೆಚ್ಚರಿಕೆಯೊಂದಿಗೆ ಸಹಕರಿಸಿದಾಗ ಅಪರಾಧ ಪ್ರಕರಣಗಳಿಗೆ ಆಸ್ಪದ ದೊರೆಯುವುದಿಲ್ಲ ಎನ್ನುತ್ತಾರೆ ಪೋಲೀಸ್ ನಿರೀಕ್ಷಕ ಅನಂತ ಪದ್ಮನಾಭ. ಪೋಲೀಸ್ ಅಧಿಕಾರಿಗಳ ಸಾರ್ವಜನಿಕ ಕಾಳಜಿಯ ಉತ್ಸಾಹಕ್ಕೆ ನಮ್ಮ ಪ್ರೋತ್ಸಾಹ ಅಗತ್ಯವಲ್ಲವೆ?


