ಮೂಡುಬಿದಿರೆ:ಜ್ಯೋತಿನಗರದ ಹಿಂದೂ ರುದ್ರಭೂಮಿಯ ಅವ್ಯವಸ್ಥೆ ವಿರುದ್ಧ ಸಾರ್ವಜನಿಕ ದೂರುಗಳು ಕೇಳಿಬಂದಿರುವುದರಿಂದ ಪುರಸಭೆ ಅಧ್ಯಕ್ಷರು ಹಾಗೂ ಅಧಿಕಾರಿಗಳು ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.


ಹಿಂದೂ ರುದ್ರಭೂಮಿಯಲ್ಲಿ ಶವ ಸಂಸ್ಕಾರಕ್ಕೆ ಎರಡು ಪ್ರತ್ಯೇಕ ವ್ಯವಸ್ಥೆಗಳಿವೆ.ಈ ಪೈಕಿ ವರ್ಷದ ಹಿಂದೆ ನಿರ್ಮಾಣಗೊಂಡ ಸಿಲಿಕಾನ್ ಚೇಂಬರನ್ನು ಸಾರ್ವಜನಿಕ ಉಪಯೋಗಕ್ಕೆ ನೀಡದೆ ಬೀಗ ಹಾಕಿಟ್ಟಿರುವುದು ಜನರ ಅಸಮಧಾನಕ್ಕೆ ಕಾರಣವಾಗಿದೆ. ಗುರುವಾರ ರುದ್ರಭೂಮಿಯಲ್ಲಿ ಎರಡು ಶವಗಳ ಅಂತ್ಯಕ್ರಿಯೆ ನಡೆಯುತ್ತಿದ್ದರೆ ಇನ್ನೊಂದು ವ್ಯಕ್ತಿಯ ಶವ ಸಂಸ್ಕಾರಕ್ಕೆ ಜಾಗವಿಲ್ಲದೆ ಶವವನ್ನು ಹೊರಗಡೆ ಇಟ್ಟು ಕಾಯುವಂತ್ತಾಗಿದ್ದು ಇದು ಮೃತರ ಕಡೆಯವರ ಅಸಮಧಾನಕ್ಕೆ ಕಾರಣವಾಗಿ ಈ ಬಗ್ಗೆ ಪುರಸಭೆಗೆ ದೂರು ನೀಡಲಾಗಿತ್ತು.
ಇದಲ್ಲದೆ ರುದ್ರಭೂಮಿಯಲ್ಲಿ ವಿದ್ಯುತ್ ಸೌಲಭ್ಯ ಇರಲಿಲ್ಲ,ಸುತ್ತಲು ಗಿಡಗಂಟೆಗಳು, ಹುಲ್ಲು ಬೆಳೆದು ಒಳಗಡೆ ಹೋಗಲು ಸಮಸ್ಯೆಯಾಗಿತ್ತು.
ಸಮಸ್ಯೆಯ ಮಾಹಿತಿ ತಿಳಿದ ಪುರಸಭೆ ಅಧ್ಯಕ್ಷೆ ರೂಪಾ ಎಸ್. ಶೆಟ್ಟಿ, ಮೂಡಾ ಅಧ್ಯಕ್ಷ ಸುರೇಶ್ ಕೋಟ್ಯಾನ್, ಸದಸ್ಯ ಸುರೇಶ್ ಪ್ರಭು, ಆರೋಗ್ಯ ನಿರೀಕ್ಷಕ ಸಾಜಿತ್, ಪರಿಸರ ಅಭಿಯಂತರ ಶಿಲ್ಪಾ ಎಸ್., ಶುಕ್ರವಾರ ಭೇಟಿ ನಿಡಿ ಪರಿಶೀಲನೆ ನಡೆಸಿದರು. ಸ್ಥಳದಲ್ಲಿ ಹಾಜರಿದ್ದ ರಾಜೇಂದ್ರ ಪೈ ಮತ್ತು ರಘುವೀರ್ ಶೆಣೈ ರುದ್ರಭೂಮಿ ನಿರ್ವಹಣೆಗೆ ವೆಂಕಟರಮಣ ಮತ್ತು ಹನುಂತ ದೇವಸ್ಥಾನದ ಆಡಳಿತ ಮಂಡಳಿ ಉತ್ಸುಕವಾಗಿರುವುದರಿಂದ ಅವರಿಗೆ ಅವಕಾಶ ಕೊಡಬೇಕೆಂಬ ಮೌಖಿಕ ಪ್ರಸ್ತಾಪವನ್ನಿಟ್ಟರು. ಬಳಿಕ ಮಾಧ್ಯಮ ಜತೆ ಮಾತನಾಡಿದ ಪುರಸಭಾಧ್ಯಕ್ಷೆ ರೂಪಾ ಶೆಟ್ಟಿ ರುದ್ರಭೂಮಿ ಸ್ವಚ್ಛತೆ ಹಾಗೂ ದಾರಿದೀಪ ಅಳವಡಿಕೆಗೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು. ರುದ್ರಭೂಮಿ ನಿರ್ವಹಣೆ ಖಾಸಗಿಯವರಿಗೆ ನೀಡುವ ಬೇಡಿಕೆಯನ್ನು ಪುರಸಭೆಯ ಸಾಮಾನ್ಯಯಲ್ಲಿಟ್ಟು ನಿರ್ಧಾರ ಕೈಗೊಳ್ಳಲಾಗುವುದು ಎಂದರು.
