
ಸುದ್ದಿ9 ಬಂಟ್ವಾಳ: ಜಿಲ್ಲಾ ಉಸ್ತುವಾರಿ ಸಚಿವರ ವೈಫಲ್ಯದಿಂದ ಜಿಲ್ಲೆಯಲ್ಲಿ ಸಾಮಾಜಿಕ ಸಾಮರಸ್ಯ ಕದಡಿಸುವ ಅಹಿತಕರ ಘಟನೆಗಳು ನಡೆಯುತ್ತಿದೆ ಎಂದು ಜಿಲ್ಲಾ ಬಿಜೆಪಿ ವಕ್ತಾರ ಉಮಾನಾಥ ಕೋಟ್ಯಾನ್ ಆರೋಪಿಸಿದ್ದಾರೆ.
ಬಿ.ಸಿ.ರೋಡಿನ ಬಿಜೆಪಿ ಚುನಾವಣಾ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಘರ್ಷಣೆ ನಡೆಸುವ ಉದ್ದೇಶದಿಂದಲೇ ಕಲ್ಲಡ್ಕದಲ್ಲಿ ಸಾಮಾಜಿಕ ಸಾಮರಸ್ಯ ಸಭೆ ಹಮ್ಮಿಕೊಳ್ಳಲಾಗಿತ್ತು, ಕೈಗೊಂಬೆಯಂತಿರುವ ಪೊಲೀಸ್ ಅಧಿಕಾರಿಗಳನ್ನು ಬಳಸಿಕೊಂಡು ಕಲ್ಲಡ್ಕದ ಅಮಾಯಕ ಹಿಂದೂ ಯುವಕರ ಮೇಲೆ ಕೇಸುದಾಖಲಿಸಿರುವುದರ ಹಿಂದೆ ಚುನಾವಣಾ ಷಡ್ಯಂತ್ರವಿದೆ ಎಂದವರು ಟೀಕಿಸಿದರು.
ರಾಜೇಶ್ ನಾಯಕ್ರವರ ನಾಯಕತ್ವದಲ್ಲಿ ಬಂಟ್ವಾಳ ಕ್ಷೇತ್ರದಲ್ಲಿ ಬಿಜೆಪಿ ಮತ್ತೆ ಬಲಿಷ್ಠವಾಗಿದ್ದು, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 10 ಸಾವಿರ ಮತಗಳ ಮುನ್ನಡೆ ದೊರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಈಗಾಗಲೇ ಮೊದಲ ಸುತ್ತಿನ ಮನೆಭೇಟಿ ಕಾರ್ಯ ಮುಗಿದಿದ್ದು, 2 ನೇ ಹಂತದ ಮನೆಭೇಟಿ ಕಾರ್ಯ ನಡೆಯುತ್ತಿದೆ ಎಂದರು. ಕಳೆದ ಚುನಾವಣೆಯಲ್ಲಿ ನಳಿನ್ ಕುಮಾರ್ ವಿರುದ್ದ ಸೋತ ಕಾಂಗ್ರೇಸ್ ಅಭ್ಯರ್ಥಿ ಜನಾರ್ಧನ ಪೂಜಾರಿಯವರು,ತನ್ನ ಸೋಲಿನ ಭಯ ಹಾಗೂ ಮುಜುಗರವನ್ನು ತಪ್ಪಿಸಲು ಮೋದಿ ವಿರುದ್ದ ತಮ್ಮ ಸ್ಫರ್ಧೆ ಎನ್ನುತ್ತಿದ್ದಾರೆ, ಮೋದಿ ವಿರುದ್ದವೇ ಸ್ಫರ್ಧಿಸಬೇಕೆಂದಿದ್ದರೆ, ವಡೋಧರಕ್ಕೋ, ವಾರಣಾಸಿಯಲ್ಲೋ ಸ್ಪರ್ಧಿಸಲಿ ಎಂದರು.
ಭಾರತ ಗೆಲ್ಲಬೇಕೆಂದಿದ್ದರೆ, ಮೋದಿ ಪ್ರಧಾನಿಯಾಗಬೇಕು ಎಂದು ದೇಶದ ಜನತೆ ಕಾತರದಿಂದ ಕಾಯುತ್ತಿದ್ದು, ಈ ಬಾರಿಯ ಲೋಕಸಭಾ ಚುನಾವಣೆ ದೇಶದ ಭವಿಷ್ಯಕ್ಕೆ ಹೊಸಮುನ್ನುಡಿ ಬರೆಯಲಿದೆ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಜಿಲ್ಲಾ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ರುಕ್ಮಯ ಪೂಜಾರಿ, ಪಕ್ಷದ ಪ್ರಮುಖರಾದ ಉಳಿಪಾಡಿಗುತ್ತು ರಾಜೇಶ್ ನಾಯಕ್, ಪುರುಷ ಸಾಲ್ಯಾನ್, ಪುಷ್ಪರಾಜ ಶೆಟ್ಟಿ, ಆನಂದ ಕುಲಾಲ್, ಕೃಷ್ಣಪ್ಪ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು

