ಮೂಡುಬಿದಿರೆ: ಕ್ರೀಡಾಪಟುಗಳಿಗಾಗಿ ರಾಜ್ಯ ಸರಕಾರದಿಂದ ಆರೋಗ್ಯ ವಿಮೆ, `ನಮ್ಮೂರ ಶಾಲೆ, ನಮ್ಮೂರ ಯುವಕರು’ ಎಂಬ ಎರಡು ಮಹಾತ್ವಕಾಂಕ್ಷೆಯ ಹೊಸ ಯೋಜನೆಗಳನ್ನು ಜಾರಿಗೊಳಿಸಿದ್ದೇವೆ. ಸ್ಪರ್ದಾತ್ಮಕ ಪರೀಕ್ಷೆಗಳಲ್ಲಿ ಕ್ರೀಡಾಪಟುಗಳಿಗೆ ಮೀಸಲಾತಿ ಪ್ರಯತ್ನಿಸಲಾಗುವುದು ಈ ಬಗ್ಗೆ ಕ್ರೀಡಾಪಟುಗಳನ್ನು ಒಳಗೊಂಡ ನಿಯೋಗದೊಂದಿಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿಸಲಾಗುವುದು ಎಂದು ಯುವ ಸಬಲೀಕರಣ ಮತ್ತು ಮೀನುಗಾರಿಕೆ ಸಚಿವ ಕೆ. ಅಭಯಚಂದ್ರ ಜೈನ್ ಹೇಳಿದರು.
* ಸಮಗ್ರ ಕ್ರೀಡಾ ನೀತಿ ರಚನೆ ಕುರಿತ ಸಮಾಲೋಚನಾ ಸಭೆಯಲ್ಲಿ ಅಭಯಚಂದ್ರ ಜೈನ್ ಮಾತನಾಡಿದರು.
* ಸಮಗ್ರ ಕ್ರೀಡಾ ನೀತಿ ರಚನೆ ಕುರಿತ ಸಮಾಲೋಚನಾ ಸಭೆಯಲ್ಲಿ ಡಾ.ಎಂ.ಮೋಹನ್ ಆಳ್ವ ಮಾತನಾಡಿದರು.
ರಾಜ್ಯ ಕ್ರೀಡಾ ನೀತಿಯ ಸಲಹಾ ಸಮಿತಿ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ರಾಜ್ಯ ಜ್ಞಾನ ಆಯೋಗದಿಂದ ರಚಿಸಲ್ಪಡುವ ಸಮಗ್ರ ಕ್ರೀಡಾ ನೀತಿ ಕುರಿತು ವಿದ್ಯಾಗಿರಿಯ ಡಾ.ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಮಾಲೋಚನಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ, ಕ್ರೀಡಾ ಪ್ರೋತ್ಸಾಹಕ ಡಾ.ಎಂ ಮೋಹನ್ ಆಳ್ವ ಮಾತನಾಡಿ ರಾಜ್ಯದಲ್ಲಿ ಉತ್ತಮ ಕ್ರೀಡಾ ನೀತಿ ಜಾರಿಯಾಗದಿರುವುದರಿಂದ ಕ್ರೀಡಾಪಟುಗಳಿಗೆ ಮತ್ತು ಕ್ರೀಡಾ ಪ್ರೋತ್ಸಾಹಕರಿಗೆ ತೊಂದರೆಯಾಗುತ್ತಿದೆ ಇದಕ್ಕಾಗಿ ಶಿಕ್ಷಣದಲ್ಲಿ ಸಮರ್ಪಕವಾಗಿ ಕ್ರೀಡೆಯನ್ನು ಅಳವಡಿಸುವ ಮೂಲಕ ಕ್ರೀಡೆ ಹಾಗೂ ಶಿಕ್ಷಣ ಎರಡೂ ಕ್ಷೇತ್ರಕ್ಕೆ ಪೂರಕವಾದ ನೀತಿ ಜಾರಿಗೊಳ್ಳಬೇಕಾಗಿದೆ.
ರಾಜ್ಯ ಸಿಲೆಬಸ್ ಹಾಗೂ ಸಿಬಿಎಸ್ಇಯಲ್ಲಿ ಕ್ರೀಡಾಪಟುಗಳನ್ನೊಳಗೊಂಡ ಕ್ರೀಡಾಕೂಟ ನಡೆಸಿ ಆ ಮೂಲಕ ಆಯ್ಕೆಯಾದ ಅರ್ಹರಿಗೆ ಸ್ಪರ್ಧಾ ತ್ಮಕ ಪರೀಕ್ಷೆಗಳಲ್ಲಿ ಮೀಸಲಾತಿ ಇಡುವುದು ಉತ್ತಮ. ಇಲ್ಲವಾದಲ್ಲಿ ರಾಜ್ಯ ಸಿಲೆಬಸ್ನ ಕನ್ನಡ, ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳು ಇಂತಹ ಸವಲತ್ತುಗಳಿಂದ ವಂಚಿತರಾಗುತ್ತಾರೆ.
ಕ್ರೀಡಾ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಅಂಕ, ಕ್ರೀಡಾಪಟುಗಳಿಗೆ ಉದ್ಯೋಗ ಭದ್ರತೆ, ಖಾಸಗಿ ಹಾಗೂ ಸರ್ಕಾರಿ ಕ್ಷೇತ್ರಗಳಿರುವಂತಹ ಅವಕಾಶಗಳನ್ನು ಕ್ರೀಡಾಪಟುಗಳಿಗಳಿಗೆ ಮಾಡಿಕೊಡಬೇಕು. ಮುಖ್ಯವಾಗಿ ಬಜೆಟ್ ಕ್ರೀಡೆ ಹಾಗೂ ಅದರ ಆಭಿವೃದ್ಧಿಗಾಗಿ ಕನಿಷ್ಠ 500 ಕೋಟಿಯನ್ನಾದರೂ ಮೀಸಲಿಡಬೇಕು ಕ್ರೀಡಾಪಟುಗಳ ಆರೋಗ್ಯ ಕಾಪಾಡುವ ನಿಟ್ಟಿನಲ್ಲೂ ಕ್ರೀಡಾ ನೀತಿಯನ್ನು ರೂಪುಗೊಳಿಸಬೇಕು. ಕ್ರೀಡಾಕೂಟಗಳ ಸಂಖ್ಯೆ ಹೆಚ್ಚಾಗಬೇಕು. ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನಗದು ಬಹುಮಾನ ಘೋಷಿಸಿ. ತಾವು ಜಾರಿಗೊಳಿಸುವ ಕರ್ನಾಟಕದ ಕ್ರೀಡಾ ನೀತಿ ರಾಷ್ಟ್ರಕ್ಕೆ ಮಾದರಿಯಾಗಬೇಕು ಎಂದು ಡಾ.ಎಂ ಮೋಹನ್ ಆಳ್ವ ಸಲಹೆ ನೀಡಿದರು.
ಅಜರ್ುನ ಪ್ರಶಸ್ತಿ ಪುರಸ್ಕೃತ ಕ್ರೀಡಾಪಟುಗಳಾದ ರೀತ್ ಅಬ್ರಹಾಂ, ಅಶ್ವಿನಿ ನಾಚಪ್ಪ, ಯುವಜನ ಕ್ರೀಡಾ ಇಲಾಖೆಯ ಉಪನಿರ್ದೇಶಕ ಸತೀಶ್ ಸಜ್ಜನ್, ಜೈನ ವಿ.ವಿ ಕ್ರೀಡಾ ನಿರ್ದೇಶಕ ಡಾ.ಶಂಕರ್, ಜ್ಞಾನ ಆಯೋಗದ ಸದಸ್ಯ ದೀಪಕ್ ಉಪಸ್ಥಿತರಿದ್ದರು.
ದೈಹಿಕ ಶಿಕ್ಷಣ ನಿರ್ದೇಶಕ ಪ್ರವೀಣ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಡಾ.ಎಂ.ಮೋಹನ್ ಆಳ್ವ ವಂದಿಸಿದರು.

