ಮೂಡುಬಿದರೆ: ಕೇಂದ್ರ ಸರ್ಕಾರದಿಂದ ಕಾರ್ಕಳ-ಮೂಡುಬಿದರೆ -ಮಂಗಳೂರು ರಾಷ್ಟ್ರೀಯ ಹೆದ್ದಾರಿ ದ್ವಿಪಥಕ್ಕೆ ಅನುಮತಿ ಲಭಿಸಿದ್ದು, ಟೆಂಡರ್ ಪ್ರಕ್ರಿಯೆಯಲ್ಲಿದೆ ಎಂದು ಮೀನುಗಾರಿಕಾ ಸಚಿವ ಕೆ. ಅಭಯಚಂದ್ರ ಜೈನ್ ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಮಂಗಳವಾರ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳ ಕುರಿತು ಮಾಹಿತಿ ನೀಡಿದರು.
ಮೂಲ್ಕಿ-ಬಂಟ್ವಾಳ ದ್ವಿಪಥ:
ಮೂಲ್ಕಿ-ಮೂಡುಬಿದರೆ -ಬಂಟ್ವಾಳ ರಸ್ತೆಯನ್ನು ದ್ವಿಪಥಗೊಳಿಸಿ ಅಗಲೀಕರಿಸುವ ಯೋಜನೆಯ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಮೂಡುಬಿದರೆ – ಶಿರ್ತಾ ಡಿ ರಾಜ್ಯ ಹೆದ್ದಾರಿಗೆ ಮರುಡಾಮರೀಕರಣಕ್ಕೆ 4 ಕೋಟಿ ರೂ ಬಜೆಟ್ ಮಂಜೂರಾತಿ ದೊರೆತಿದೆ. ಮೂಡುಬಿದರೆ – ಹೊಸಬೆಟ್ಟು ರಸ್ತೆ ಅಗಲೀಕರಣ ಪ್ರಸ್ತಾವನೆಯ ಹಂತದಲ್ಲಿದೆ.
ಟ್ರಾಫಿಕ್ ಠಾಣೆ
ಮೂಡುಬಿದರೆಯಲ್ಲಿ ವಾಹನ ದಟ್ಟನೆ ಹೆಚ್ಚುತ್ತಿರುವುದರಿಂದ ಇಲ್ಲಿಗೆ ಪ್ರತ್ಯೇಕ ಟ್ರಾಫಿಕ್ ಪೊಲೀಸ್ ಠಾಣೆಗೆ ಬೇಡಿಕೆ ಸಲ್ಲಿಸಲಾಗಿದ್ದು ಮಂಜೂರಾತಿಯ ಹಂತದಲ್ಲಿದೆ. ಕಡಲಕೆರೆಯಲ್ಲಿ ಹೊಸ ಅಗ್ನಿಶಾಮಕ ಠಾಣೆಯನ್ನು ನಿರ್ಮಿಸಲಾಗಿದ್ದು ಸದ್ಯದಲ್ಲೇ ಸ್ಥಳಾಂತರಗೊಳ್ಳಲಿದೆ. ಘನತ್ಯಾಜ್ಯ ವಿಲೇವರಿ ಘಟಕದ ಸ್ಥಾಪನೆ ಮೂಲಕ ಕಸ ವಿಲೇವಾರಿಯಲ್ಲಿ ರಾಜ್ಯದಲ್ಲೇ ಉತ್ತಮ ಸಾಧನೆ ಮಾಡಿದ್ದು ಬಯೋಗ್ಯಾಸ್ ಪ್ಲಾಂಟ್ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.
ಮೂಡುಬಿದರೆಯ ಪೇಟೆಯಲ್ಲಿ ವಾಹನದಟ್ಟಣೆಯನ್ನು ಕಡಿಮೆಗಳಿಸುವ ನಿಟ್ಟಿನಲ್ಲಿ 5ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ವರ್ತುಲ ರಸ್ತೆ ಡಿಸೆಂಬರ್ ಒಳಗೆ ಪೂರ್ಣಗೊಳ್ಳಲಿದೆ.
ಸಿಎಂ ಶಿಲಾನ್ಯಾಸ:
ಮೂಡುಬಿದರೆಯಲ್ಲಿ 26ಕೋಟಿ ರೂಪಾಯಿ ವೆಚ್ಚದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಸುಸಜ್ಜಿತ ಮಾರ್ಕೆಟ್ ನಿರ್ಮಾಣವಾಗಲಿದ್ದು ಡಿಸೆಂಬರ್ನಲ್ಲಿ ಕೆಲಸ ಪ್ರಾರಂಭವಾಗಲಿದ್ದು ಮುಖ್ಯಮಂತ್ರಿಗಳು ಶಿಲಾನ್ಯಾಸ ನೆರವೇರಿಸಲಿದ್ದಾರೆ. 85ಕೋಟಿ ರೂ ವೆಚ್ಚದಲ್ಲಿ ಒಳಚರಂಡಿ ಯೋಜನೆ ಅನುಷ್ಟಾನವಾಗಲಿದ್ದು ಭೂಸ್ವಾಧೀನ ಪ್ರಕ್ರಿಯೆಯ ಹಂತದಲ್ಲಿದೆ. ಭವಿಷ್ಯದಲ್ಲಿ ಮೂಡುಬಿದಿರೆಯಲ್ಲಿ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆಯಿದ್ದು ಫಲ್ಗುಣಿ ನದಿಗೆ ಪುಚ್ಚಮೊಗರಿನಲ್ಲಿ ಪ್ರತ್ಯೇಕ ವೆಂಟೆಡ್ ಡ್ಯಾಂ ನಿರ್ಮಿ ಸುವುದು ಅಥವಾ ಪಶ್ಚಿಮವಾಹಿನಿ ಯೋಜನೆಯ ಮೂಲಕ ಆಣೆಕಟ್ಟು ನಿರ್ಮಿಸಲು ಪ್ರಯತ್ನಿಸಲಾಗುವುದು. ಈ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ ಎಂದು ಹೇಳಿದರು.
