ಬಂಟ್ವಾಳ: ಕಾವಳಮೂಡೂರು ಗ್ರಾಮದ ಮಧ್ವ ಎಂಬಲ್ಲಿ ಬುಧವಾರ ಸಂಜೆ ನಡೆದ ರಸ್ತೆ ಅಪಘಾತದಲ್ಲಿ ಡಿಪ್ಲೊಮ ವಿದ್ಯಾರ್ಥಿಯೊಬ್ಬ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ. ಇಲ್ಲಿನ ಕೆದ್ದಳಿಕೆ, ಪೆಜತ್ರೋಡಿ ನಿವಾಸಿ, ಕ್ಷೇತ್ರ ಸಂಪನ್ಮೂಲ ಅಧಿಕಾರಿ ನಿತ್ಯಾನಂದ ಪೂಜಾರಿಯವರ ಏಕೈಕ ಪುತ್ರ ಧನುಷ್ (24) ಮೃತ ಪಟ್ಟ ದುರ್ದೇವಿ.
ಧನುಷ್, ಸಂಜೆ ಬಂಟ್ವಾಳದ ಸಂಬಂಧಿಕರೊಬ್ಬರ ಮನೆಯಿಂದ ವಾಪಾಸ್ ತನ್ನ ಮನೆಗೆ ಬೈಕ್ನಲ್ಲಿ ತೆರಳುತ್ತಿದ್ದಾಗ, ಎದುರುಗಡೆಯಿಂದ ಅತೀ ವೇಗವಾಗಿ ಅಜಾಗರೂಕತೆಯಿಂದ ಧಾವಿಸಿ ಬಂದ ಲಾರಿ ಡಿಕ್ಕಿ ಹೊಡೆದಿದೆ. ಪರಿಣಾಮ ರಸ್ತೆಗೆ ಬಿದ್ದ ಧನುಷ್, ಗಂಭೀರ ಸ್ವರೂಪದ ಗಾಯಗೊಂಡು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತಕ್ಷಣ ಸ್ಥಳೀಯರು ಧಾವಿಸಿ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಿದ್ದಾರಾದರೂ, ಅದಾಗಲೇ ಧನುಷ್, ಕೊನೆಯುಸಿರು ಎಳೆದಿದ್ದಾನೆ ಎಂದು ತಿಳಿದು ಬಂದಿದೆ.

ಧನುಷ್, ಪುತ್ತೂರು ವಿವೇಕಾನಂದ ಕಾಲೇಜಿನ ದ್ವಿತೀಯ ಡಿಪ್ಲೊಮ ವಿದ್ಯಾರ್ಥಿಯಾಗಿದ್ದಾನೆ. ಈತ ನಿತ್ಯಾನಂದ ಪೂಜಾರಿಯವರಿಗೆ ಏಕಮಾತ್ರ ಪುತ್ರನಾಗಿದ್ದಾನೆ. ಅವರು ಕ್ಷೇತ್ರ ಸಂಪನ್ಮೂಲ ಅಧಿಕಾರಿಯಾಗಿದ್ದರೆ, ಈತನ ತಾಯಿ ಮಂಗಳೂರಿನ ರಾಮಕೃಷ್ಣ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಾರೆ. ಸುದ್ದಿ ತಿಳಿದು ಪೂಂಜಾಲಕಟ್ಟೆ ಹಾಗೂ ಬಂಟ್ವಾಳ ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಘಟನೆಯ ಬೆನ್ನಲ್ಲೇ ನೂರಾರು ಸಂಖ್ಯೆಯಲ್ಲಿ ಜನರು ಆಸ್ಪತ್ರೆಯ ಮುಂದೆ ಸೇರಿದ್ದಾರೆ. ಏಕೈಕ ಕರುಳಕುಡಿಯನ್ನು ಕಳೆದುಕೊಂಡ ಹೆತ್ತವರು ಕಂಗಾಲಾಗಿದ್ದಾರೆ. ಘಟನೆಯಿಂದ ಪರಿಸರದಲ್ಲಿ ಸ್ಮಶಾನ ಮೌನ ಆವರಿಸಿದೆ.

