ಬಂಟ್ವಾಳ; ಸ್ನಾನಕ್ಕೆಂದು ನೇತ್ರಾವತಿ ನದಿಗೆ ಇಳಿದ ಸಹೋದರಿರಿಬ್ಬರು ನೀರಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ಪುದುಗ್ರಾದ ಸುಜೀರ್ ನಲ್ಲಿ ನಡೆದಿದೆ. ಮೃತರನ್ನು ಇಲ್ಲಿನ ಇಸಾಖ್ ಎಂಬವರ ಮಕ್ಕಳಾದ ಶಾಹಿಲ್(15) ಹಾಗೂ ಸುಹೈಲ್(12) ಎಂದು ಗುರುತಿಸಲಾಗಿದೆ.ಇವರಿಬ್ಬರೂ ಮೇರಮಜಲು ಹೋಲಿಫ್ಯಾಮಿಲಿ ಶಾಲೆಯ ವಿದ್ಯಾರ್ಥಿಗಳು.ಗುರುವಾರ ಸಂಜೆ ಇವರು ಸುಜೀರು ಬಳಿಯಲ್ಲಿ ಹಲವು ಮಕ್ಕಳ ಜೊತೆ ಕ್ರಿಕೆಟ್ ಆಡಿ, ಬಳಿಕ ಸ್ನಾನಕ್ಕೆಂದು ನದಿಗೆ ಇಳಿದಿದ್ದ ವೇಳೆ ಈ ಅವಘಡ ಸಂಭವಿಸಿದೆ.

shahil 1

suhail 2

ಘಟನೆ ವಿವರ;

ಸುಜೀರು ನದಿ ಕಿನಾರೆಯ ಬಳಿ ಇರುವ ವಿಶಾಲವಾದ ಮೈದಾನದಲ್ಲಿ ಹಲವು ಮಂದಿ ಮಕ್ಕಳ ಜೊತೆಗೆ ಶಾಹಿಲ್ ಮತ್ತು ಸುಹೈಲ್ ಕ್ರಿಕೆಟ್ ಆಡುತ್ತಿದ್ದರು, ಆಟದ ಬಳಿಕ 10-12 ಮಂದಿ ಮಕ್ಕಳು ನದಿಗೆ ಸ್ನಾನಕ್ಕೆಂದು ಇಳಿದಿದ್ದರು. ಇವರ ಪೈಕಿ ಸುಹೈಲ್ ಹೊಂಡವೊಂದರಲ್ಲಿ ಸಿಲುಕಿದ್ದು, ಆತನ ರಕ್ಷಣೆಗೆ ಅಣ್ಣ ಶಾಹಿಲ್ ತೆರಳಿದಾಗ ಸುಹೈಲ್ ಜೊತೆಗೆ ಆತನೂ ಮುಳುಗಿ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಬಂಟ್ವಾಳ ಗ್ರಾಮಾಂತರ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ. ಸಂಜೆ ವೇಳೆಯಲ್ಲಿ ನದಿಯಲ್ಲಿ ನೀರ ಹರಿವಿನ ಪ್ರಮಾಣವೂ ಏರಿದ್ದು ಅವಘಡಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಮೃತದೇಹಗಳನ್ನು ತುಂಬೆಯ ಖಾಸಗಿ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿ, ಮರಣೋತ್ತರ ಪರೀಕ್ಷೆಗಾಗಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ತಿಳಿದು ಬಂದಿದೆ. ಬಂಟ್ವಾಳ ವೃತ್ತನಿರೀಕ್ಷಕ ಕೆ.ಯು.ಬೆಳ್ಳಿಯಪ್ಪ, ಠಾಣಾಧಿಕಾರಿ ರಕ್ಷಿತ್ ಗೌಡ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಆರ್ಥಿಕವಾಗಿ ಹಿಂದುಳಿದ ಕುಟುಂಬ..
ಮೃತ ಶಾಹಿಲ್ ಮತ್ತು ಸುಹೈಲ್ ಸುಜೀರುವಿನ ಇಸಾಖ್ ಎಂಬವರ ಮಕ್ಕಳು. ಆರ್ಥಿಕವಾಗಿ ಹಿಂದುಳಿದ ಈ ಕುಟುಂಬಕ್ಕೆ ದುಬೈ ಯಲ್ಲಿ ಉದ್ಯೋಗದಲ್ಲಿರುವ ಇಸಾಖ್ ಎಂಬವರ ದುಡಿಮೆಯೊಂದೇ ಆಧಾರ. ಇಸಾಖ್ ದಂಪತಿಗೆ ಮೂರು ಗಂಡು ಒಂದು ಹೆಣ್ಣು ಸೇರಿದಂತೆ ನಾಲ್ಕು ಮಕ್ಕಳು. ಈ ಪೈಕಿ ದೊಡ್ಡವರಿಬ್ಬರು ಇಂದಿನ ದುರಂತದಲ್ಲಿ ಸಾವನ್ನಪ್ಪಿದ್ದಾರೆ. ವಿದೇಶದಲ್ಲಿರುವ ಇಸಾಖ್ ರವರಿಗೆ ಮಕ್ಕಳ ಮರಣ ವಾರ್ತೆ ತಲುಪಿಸಲಾಗಿದ್ದು, ಇನ್ನೆರಡು ದಿನದ ಒಳಗಾಗಿ ಅವರು ಊರಿಗೆ ಮರಳಲಿದ್ದಾರೆ ಎಂದು ಇಸಾಖ್ ಅವರ ಸ್ನೇಹಿತರು ತಿಳಿಸಿದ್ದಾರೆ. ಶಾಹಿಲ್ ಮೇರಮಜಲುವಿನ ಹೋಲಿಫ್ಯಾಮಿಲಿ ಶಾಲೆಯಲ್ಲಿ 9 ನೇ ಹಾಗೂ ಸುಹೈಲ್ 6 ನೇ ತರಗತಿಯಲ್ಲಿ ಕಲಿಯುತ್ತಿದ್ದರು. ಮಕ್ಕಳ ಮರಣವಾರ್ತೆ ಮನೆಮಂದಿಯನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ.

ಮರಳಹೊಂಡಗಳಿಲ್ಲಿ ಮರಣ ಗುಂಡಿಗಳು..
ನದಿಕಿನಾರೆಯಿಂದ ಮರಳು ತೆಗೆಯುವ ವೇಳೆ ಉಂಟಾದ ಹೊಂಡಗಳೇ ಮೃತ್ಯುಕೂಪಗಳಾಗುತ್ತಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇಬ್ಬರು ಬಾಲಕರು ನದಿ ಕಿನಾರೆಯಲ್ಲಿ ಸಾವನ್ನಪ್ಪಲು ಮರಳು ತೆಗೆದು ಉಂಟಾದ ಮರಣಗುಂಡಿಯೇ ಕಾರಣ ಎಂದು ಆರೋಪಿಸಿರುವ ಸ್ಥಳೀಯರು ಘಟನೆ ಕುರಿತಂತೆ ಮರಳುಮಾಫಿಯಾದ ವಿರುದ್ದ ಆಕ್ರೋಶವ್ಯಕ್ತಪಡಿಸಿದ್ದಾರೆ. ಜೆಸಿಬಿ ಯಿಂದ ಮರಳು ತೆಗೆಯುವ ವೇಳೆ ನದಿ ಕಿನಾರೆಯಲ್ಲಿ ಬೃಹತ್ ಹೊಂಡಗಳು ಉಂಟಾಗುತ್ತವೆ. ಕಳೆದ ಹತ್ತುದಿನಗಳಿಂದ ಸುರಿದ ಮಳೆಯಿಂದಾಗಿ ಈ ಹೊಂಡಗಳು ನೀರಿನಿಂದ ತುಂಬಿಕೊಂಡಿದ್ದು, ನದಿಗೆ ಸ್ನಾನಕ್ಕೆಂದು ಇಳಿದ ಮಕ್ಕಳು ಹೊಂಡದ ಅರಿವಿಲ್ಲದೇ ಮರಳಹೊಂಡದಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಗಣಿ ಇಲಾಖೆ ಹಾಗೂ ಜಿಲ್ಲಾಡಳಿತ ಈ ಕುರಿತಂತೆ ತಕ್ಷಣ ಗಮನಹರಿಸಬೇಕೆಂಬ ಒತ್ತಾಯ ಕೇಳಿಬಂದಿದೆ

By suddi9

Leave a Reply

Your email address will not be published. Required fields are marked *