ಬಂಟ್ವಾಳ: ” ನಿನ್ನ ಮಗನ ಭವಿಷ್ಯ ಚೆನ್ನಾಗಿಲ್ಲ..! ನಿನ್ನ ಮಗನಿಗೆ ಕಂಟಕವಿದೆ, ನಿನ್ನ ಕನಸುಗಳೆಲ್ಲಾ ನುಚ್ಚುನೂರು.. ನಿನ್ನ ಕಣ್ಣೆದುರೇ ನಿನ್ನ ಮಗ ಸಾವನ್ನಪ್ಪುತ್ತಾನೆ… ಜೂನ್ ..6 ನೆನಪಿನಲ್ಲಿರಲಿ….! ಎಂದು ಆ ಜ್ಯೋತಿಷಿ ವಿಕಾರವಾಗಿ ಹೇಳಿದ, ಅದನ್ನು ಈತ ನಂಬಿದ, ಕಂಗಾಲಾದ. ಆರು ಪುಟಗಳ ಡೆತ್ ನೋಟ್ ಬರೆದಿಟ್ಟು ತಾನೇ ಆತ್ಮಹತ್ಯೆ ಮಾಡಿಕೊಂಡ.
ಇದು ಬುದ್ದಿವಂತರ ಜಿಲ್ಲೆ ದಕ್ಷಿಣ ಕನ್ನಡದಲ್ಲಿ ನಡೆದ ಒಂದು ಮನಕಲಕುವ ಘಟನೆ. ತುಂಬೆ
ಗ್ರಾಮದ ಗ್ರಾಮಕರಣಿಕನಾಗಿದ್ದ ಚಿದಾನಂದ್ (33) ಜ್ಯೋತಿಷಿಯ ಮಾತು ಕೇಳಿ ಆತ್ಮಹತ್ಯೆ ಮಾಡಿಕೊಂಡ ದುರ್ದೇವಿ.
ಮೂಲತಃ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕು ನಿವಾಸಿಯಾಗಿದ್ದ ಇವರು 2006 ರ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ವಾಸ್ತವ್ಯವಿದ್ದು ವಿವಿಧ ಗ್ರಾಮಗಳಲ್ಲಿ ಗ್ರಾಮಕರಣಿಕರಾಗಿ ಸೇವೆಸಲ್ಲಿಸುತ್ತಿದ್ದರು.
ಮಂಗಳೂರಿನ ಲಾಡ್ಜ್ವೊಂದರಲ್ಲಿ ಭಾನುವಾರ ಇವರ ಮೃತದೇಹ ವಿಷ ಸೇವಿಸಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಜೊತೆಯಲ್ಲಿ ಸಿಕ್ಕ ಡೆತ್ ನೋಟ್ ಅವರ ಸಾವಿಗೆ ಕಾರಣವಾದ ಮೂಡನಂಬಿಕೆಯನ್ನು ಬಯಲು ಮಾಡಿದೆ.
ಸಾವಿಗೆ ಸ್ವಲ್ಪ ತಾಸು ಮುನ್ನ ಅವರು ಬರೆದಿಟ್ಟ 6 ಪುಟಗಳ ಡೆತ್ನೋಟ್ನಲ್ಲಿ ತಮ್ಮ ವೈಯಕ್ತಿಕ ವಿವರಗಳನ್ನು ಹೇಳಿಕೊಂಡಿದ್ದಾರೆ. ಒಂದೂವರೆ ವರ್ಷದ ಮಗ ಸಮೃದ್ಧ್ಗೆ ಕಂಟಕ ಇರುವುದಾಗಿ ಜ್ಯೋತಿಷಿಯೊಬ್ಬರು ಹೇಳಿದ್ದು, ತನ್ನನ್ನು ಮಾನಸಿಕ ಖಿನ್ನತೆಗೊಳಪಡಿಸಿದೆ. ಮಗನನ್ನು ಡಾಕ್ಟರ್ ಅಥವಾ ಎಂಜಿನಿಯರಿಂಗ್ ಓದಿಸಬೇಕೆಂದು ಆಸೆ ಇತ್ತು. ಆದರೆ ಆತನ ಬದುಕು ಕಣ್ಣೆದುರೇ ಅಂತ್ಯಗೊಳ್ಳುವುದನ್ನು ಹೇಗೆ ನೋಡಿಕೊಳ್ಳಲಿ ಎಂದು ಪತ್ರದಲ್ಲಿ ನೋವು ವ್ಯಕ್ತಪಡಿಸಿದ್ದು, ಚಿತೆಗೆ ಮಗನಿಂದಲೇ ಅಗ್ನಿ ಸ್ಪರ್ಶ ಮಾಡಬೇಕೆಂದು ಕೊನೆಯ ಆಸೆಯನ್ನು ಪತ್ರದಲ್ಲಿ ಹೇಳಿದ್ದಾರೆ.
10FChidananda1 (1)
ತನ್ನ ಕೈಯಲ್ಲಿದ್ದ ವಾಚ್ಅನ್ನು ಗೆಳೆಯ ಶಿವಣ್ಣನಿಗೆ ಕೊಡುವಂತೆ ಬರೆದ ಅವರು, ಆತ್ಮಹತ್ಯೆಗೆ ಸಹೋದ್ಯೋಗಿಗಳಾಗಲಿ, ಕುಟುಂಬದ ಸದಸ್ಯರಾಗಲಿ ಕಾರಣರಲ್ಲ. ತನ್ನ ಮಾನಸಿಕ ಖಿನ್ನತೆ ಹಾಗೂ ಜ್ಯೋತಿಷ್ಯರೊಬ್ಬರು ಹೇಳಿದ ಭವಿಷ್ಯ ನುಡಿ ಕಾರಣ ಎಂದು ಚಿದಾನಂದ ಪತ್ರದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ..
2006ರಂದು ಕಂದಾಯ ಇಲಾಖೆಯಲ್ಲಿ ಕರ್ತವ್ಯಕ್ಕೆ ನಿಯುಕ್ತಿಗೊಂಡ ಚಿದಾನಂದ, ಅಳಿಕೆ, ಬಿ.ಕಸ್ಬಾ ಗ್ರಾಮಗಳಲ್ಲಿ ಗ್ರಾಮಕರಣಿಕನಾಗಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ತುಂಬೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಈ ಮಧ್ಯೆ ಭೂಮಾಪನ ತರಬೇತಿ ಪಡೆಯಲು ಮೈಸೂರಿನಲ್ಲಿದ್ದರು. ಬಿ.ಮೂಡ ಗ್ರಾಮದ ಗೂಡಿನಬಳಿಯ ಬಾಡಿಗೆಯಲ್ಲಿ ಪತ್ನಿ ಚೈತ್ರ, ಒಂದೂವರೆ ವರ್ಷ ಮಗ ಸಮೃದ್ಧ್ ಅವರೊಂದಿಗೆ ವಾಸ್ತವ್ಯ ಹೊಂದಿದ್ದರು. ಶುಕ್ರವಾರ ಮಧ್ಯಾಹ್ನ ಕಡೇಶ್ವಾಲ್ಯ ಗ್ರಾಮಕರಣಿಕರಾದ ಗೆಳೆಯ ಶಿವಪ್ಪ ಅವರನ್ನು ಬಿ.ಸಿ.ರೋಡಿನಲ್ಲಿ ಭೇಟಿ ಮಾಡಿದ ಚಿದಾನಂದ, ಮೈಸೂರಿಗೆ ಹೋಗುವುದಾಗಿ ಹೇಳಿ ಹೋದವರು ಬಳಿಕ ಪತ್ತೆಯಾಗಿರಲಿಲ್ಲ.
ಲಾಡ್ಜ್ ಕೊಠಡಿಯಲ್ಲಿ ಆತ್ಯಹತ್ಯೆ ಮಾಡಿಕೊಂಡಿರುವುದಾಗಿ ಭಾನುವಾರ ತಡರಾತ್ರಿಗೆ ಮಂಗಳೂರು ಹೊಟೇಲ್ನಿಂದ ಮಾಹಿತಿ ಬಂದಿತ್ತು. ತಹಸೀಲ್ದಾರ್ ಪುರಂದರ ಹೆಗ್ಡೆ ಸಹಿತ, ಕಂದಾಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ತೆರಳಿ ಮೃತದೇಹವನ್ನು ಪತ್ತೆಹಚ್ಚಿದ್ದರು. ವೆನ್ಲಾಕ್ ಆಸ್ಪತ್ರೆಯಲ್ಲಿ ಮರಣೋತ್ತರ ನಡೆಸಿ ಮೃತದೇಹವನ್ನು ಅವರ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.

.
ಮಗನನ್ನು ಇಂಜಿನಿಯರ್, ಡಾಕ್ಟರ್ ಮಾಡಿಕೊಳ್ಳಬೇಕೆಂದು ಕನಸು ಕಂಡಿದ್ದ ಚಿದಾನಂದ್ ಜ್ಯೋತಿಷಿ ಮಾತು ಕೇಳಿ ಹೆಣವಾಗಿದ್ದಾರೆ. ಮುದ್ದು ಮಗನಿಗಿನ್ನೂ ವರ್ಷ ಎರಡೂ ತುಂಬಿಲ್ಲ. ಆಗಲೇ ಅವನಬಗ್ಗೆ ಜ್ಯೋತಿಷಿ ಆಡಿದ ಮಾತುಗಳು ಚಿದಾನಂದ್ ಮನಸ್ಸು ಕೆಡಿಸಿದೆ, ಪ್ರತಿನಿತ್ಯವೂ ಜ್ಯೋತಿಷ್ಯ-ಭವಿಷ್ಯ ವನ್ನು ಇವರು ನಂಬಿಕೊಂಡಿದ್ದರು. ಮುಂದಿನ ಇವರು ನಂಬಿದ್ದ ಜ್ಯೋತಿಷಿಯೊಬ್ಬರು ಮಗನಿಗೆ ಕಂಟಕವಿದೆ ಎಂದು ಹೇಳಿದ್ದಲ್ಲದೆ ಮುಂದಿನ ಜೂ.6 ರ ಗಡು ನೀಡಿದ್ದರು. ಇದು ಚಿದಾನಂದರ ಚಿಂತೆ ಇಮ್ಮಡಿಗೊಳಿಸಿದೆ. ಮಗನಿಗಿಲ್ಲದ ಭವಿಷ್ಯ ತನಗೇಕೆ ಎಂಬ ಚಿದಾನಂದ್ ನಿಲುವು ಪತ್ನಿ ಮತ್ತು ಮಗನನ್ನು ಅನಾಥರನ್ನಾಗಿಸಿದೆ.

ಕಪಟ ಜೋತಿಷ್ಯನ ಮಾತು ನಂಬಿ ಸಾವನ್ನಪ್ಪಿದ ಈ ಒಂದು ಘಟನೆ ಬಯಲಾಗಿದೆ, ಇಂತಹುದನ್ನು ನಂಬಿ ದಿನಾಲೂ ಸಾಯುವವರು ಎಷ್ಟು ಮಂದಿಇದ್ದಾರೋ, ಏನೋ..?
.

ಆ ಜ್ಯೋತಿಷಿಯ ಮೇಲೆ ಆತ್ಮಹತ್ಯೆಗೆ ಪ್ರಚೋದನೆಯಡಿ ಕೇಸು ದಾಖಲಿಸಬೇಕು, ಕರ್ನಾಟಕದಲ್ಲಿ ಮೂಡನಂಬಿಕೆ ನಿಷೇಧ ಕಾಯ್ದೆ ಜಾರಿಯಾದಲ್ಲಿ ಇಂತಹಾ ಕಪಟಿ ಗಳಿಗೆ ಕಡಿವಾಣ ಹಾಕಬಹುದು, ಯಾವುದೇ ಜ್ಯೋತಿಷಿಗಳಿಗೆ ನನ್ನ ಸವಾಲಿದೆ, ಹುಟ್ಟಿದ ತಾರೀಕು, ಸಮಯ, ಸ್ಥಳದ ಹೆಸರು ಕೊಡುತ್ತೇವೆ, ಅವರೇ ಜಾತಕ ರೆಡಿಮಾಡಿಕೊಂಡು ಯಾರು ಗಂಡು ಯಾರು ಹೆಣ್ಣು, ಬದುಕಿದ್ದಾರೋ ಇಲ್ಲವೋ ಎಂದು ಸತ್ಯ ಹೇಳಲಿ, ಅವರು ಠೇವಣಿ ಇಟ್ಟ ಹತ್ತರಷ್ಟು ಹಣ ಕೊಡುತ್ತೇನೆ.

– ನರೇಂದ್ರನಾಯಕ್
ಅಧ್ಯಕ್ಷರು,
ಅಖಿಲ ಭಾರತ ವಿಚಾರವಾದಿಗಳ ಒಕ್ಕೂಟ

By suddi9

Leave a Reply

Your email address will not be published. Required fields are marked *