ಬಂಟ್ವಾಳ: ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿ ಸರ್ಕಾರದ ಪರವಾಗಿ ಹೈಕೋರ್ಟ್ ನೀಡಿರುವ ತೀರ್ಪಿನ ಬಗ್ಗೆ ಬೆಂಗಳೂರು ನಗರ ಜಿಲ್ಲಾ ಉಸ್ತುವಾರು ಸಚಿವ ರಾಮಲಿಂಗಾರೆಡ್ಡಿ ಸಂತಸ ವ್ಯಕ್ತಪಡಿಸಿದ್ದಾರೆ. ಸರ್ಕಾರ ಈಗಾಗಲೇ ಈ ಸಂಬಂಧವಾಗಿ ತೀರ್ಮಾನಿಸಿದಂತೆ ಮುನ್ನಡೆಯಲಿದೆ, ಈ ವಿಚಾರವಾಗಿ ತಾನು ಯಾವುದೇ ಹೆಚ್ಚು ಪ್ರತಿಕ್ರಿಯೆ ನೀಡಲಾರೆ ಎಂದು ಶುಕ್ರವಾರ ಬಿ.ಸಿ.ರೋಡಿನಲ್ಲಿ ಸುದ್ದಿಗಾರರ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು. ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿ ನ್ಯಾಯಾಲಯದ ತೀರ್ಪು ಹೊರಬೀಳುವ ಸಂದರ್ಭದಲ್ಲಿ ಸಾರಿಗೆ ಸಚಿವರೂ ಆದ ರಾಮಲಿಂಗಾರೆಡ್ಡಿಯವರು ಬಂಟ್ವಾಳ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಬಿ.ಸಿ.ರೋಡಿನಲ್ಲಿ ಕೆಎಸ್ಆರ್ಟಿಸಿ ಬಸ್ಸು ನಿಲ್ದಾಣದ ಶಂಕುಸ್ಥಾಪನೆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.


ನರ್ಮ್ ಪ್ರಾಯೋಗಿಕ ಆರಂಭ
ಮಂಗಳೂರು ಹಾಗೂ ಉಡುಪಿಗೆ ನರ್ಮ್ ಯೋಜನೆಯಡಿ ಮಂಜೂರುಗೊಂಡಿರುವ ಕೆಎಸ್ಆರ್ಟಿಸಿ ಬಸ್ ಸಂಚಾರವನ್ನು ಎರಡು ತಿಂಗಳುಗಳಾ ಕಾಲ ಪ್ರಯೋಗಿಕವಾಗಿ ಆರಂಭಿಸಿ ಬಳಿಕ ಮೂರು ತಿಂಗಳ ಒಳಗಾಗಿ ಅನುಷ್ಠಾನಕ್ಕೆ ತರಲಾಗುವುದು ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಸಚಿವ ರಾಮಲಿಂಗಾರೆಡ್ಡಿಯವರು ಉತ್ತರಿಸಿದರು.
ಮಾಸಿಕ ಪಾಸ್ ದರ ಇಳಿಕೆ ಮೌನ..
ಬಸ್ದರ ಇಳಿಕೆಯ ಸಂದರ್ಭದಲ್ಲಿ ನೀಡಿರುವ ಭರವಸೆಯಂತೆ ವಿದ್ಯಾರ್ಥಿಗಳ ಹಾಗೂ ಮಾಸಿಕ ಸೀಝನ್ ಪಾಸ್ ದರವನ್ನು ಮಾರ್ಚ್ ತಿಂಗಳಲ್ಲಿ ಇಳಿಸುವ ಕುರಿತಾದ ಪತ್ರಕರ್ತರ ಪ್ರಶ್ನೆಗೆ ಸಚಿವ ರಾಮಲಿಂಗಾರೆಡ್ಡಿಯವರು ಯಾವುದೇ ಪ್ರತಿಕ್ರಿಯೆ ನೀಡದೆ ನಸುನಗುತ್ತಲೇ ಮುಂದಕ್ಕೆ ಸಾಗಿದರು.
ಸಮಸ್ಯೆ ಬಗೆಹರಿಸಲು ಅಧಿಕಾರಿಗಳಿಗೆ ತಾಕೀತು..
ಮಂಗಳೂರು-ಧರ್ಮಸ್ಥಳ ರೂಟಿನಲ್ಲಿ ಪ್ರತಿನಿತ್ಯ ಬೆಳಿಗ್ಗೆ ಮತ್ತು ಸಂಜೆಯ ಪೀಕ್ ಅವರ್ ನಲ್ಲಿ ಬಸ್ಗಳು ಕೈಕೊಡುವ ಮೂಲಕ ಈ ರೂಟಿನ ಪ್ರಯಾಣಿಕರು ಅನುಭವಿಸುತ್ತಿರುವ ತೊಂದರೆಗಳ ಬಗ್ಗೆ ಗಮನೆ ಸೆಳೆದಾಗ, ತಕ್ಷಣ ಸ್ಪಂದಿಸಿದ ಸಚಿವರು, ಮಂಗಳೂರು ವಿಭಾಗದ ನಿಯಂತ್ರಣಾಧಿಕಾರಿಯನ್ನು ಕರೆದು ಈ ಸಮಸ್ಯೆಯನ್ನು ಬಗೆಹರಿಸಲು ಕ್ರಮ ಕೈಗೊಳ್ಳುವಂತೆ ಸ್ಥಳದಲ್ಲೇ ತಾಕೀತು ಮಾಡಿದರು.



