ಬಂಟ್ವಾಳ: ಕೆದ್ದಳಿಕೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಯಕ್ಷಲೋಕ ಸಾಂಸ್ಕ್ರತಿಕ ಸಂಗಮ ಸಹಯೋಗದೊಂದಿಗೆ 6ದಿನಗಳ ಕಾಲ ನಡೆದ ಮಗು ನೀ ನಗು ವಿಶೇಷ ಕಲಿಕಾ ಲೋಕದ ಸಮಾರೋಪ ಸಮಾರಂಭ ಮತ್ತು ಬಂಟ್ವಾಳ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ವತಿಯಿಂದ ದೈವಾರಾದನೆ ಸುತ್ತ ಮುತ್ತ ವಿಶೇಷ ಉಪನ್ಯಾಸ ಕಾರ್ಯಕ್ರಮ ಶನಿವಾರ ನಡೆಯಿತು.

ಬಂಟ್ವಾಳ ಎಸ್.ವಿ.ಎಸ್.ಕಾಲೇಜಿನ ಉಪನ್ಯಾಸಕ ಚೇತನ್ ಮುಂಡಾಜೆ ದೈವಾರಾದನೆ ಸುತ್ತ ಮುತ್ತ ವಿಷಯದಲ್ಲಿ ವಿಶೇಷ ಉಪನ್ಯಾಸ ನೀಡಿ ತುಳುನಾಡಿನ ಕೃಷಿ ಸಂಸ್ಕ್ರತಿ, ದೈವರಾದನೆ, ನಾಗಾರಾದನೆಗಳು ಒಂದಕ್ಕೊಂದು ಪೂರಕವಾಗಿದ್ದು ತುಳು ಭಾಷೆ, ಸಂಸ್ಕ್ರತಿಯ ಪ್ರತೀಕಗಳಾಗಿದೆ. ಇಂತಹ ಸಂಸ್ಕ್ರತಿ, ಪರಂಪರೆಯ ಬಗ್ಗೆ ಇಂದಿನ ಮಕ್ಕಳಿಗೆ ಅರಿವು ಮೂಡಿಸಿದಾಗ ಅದು ಮುಂದೆಯೂ ಉಳಿದು ಬೆಳೆಯಲು ಸಾಧ್ಯವಾಗುತ್ತದೆ ಎಂದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಡಿ.ಎಂ.ಕುಲಾಲ್ ಸಮಾರೋಪ ಭಾಷಣ ಮಾಡಿ, ಮಕ್ಕಳಿಗೆ ಶಾಲೆಯ ಆಟ ಪಾಠದಿಂದ ಹೊರೆತುಪಡಿಸಿದ ಇತರ ಸೃಜನಾತ್ಮಕ ಚಟುವಟಿಕೆಗಳನ್ನು ಇಂತಹ ಶಿಬಿರಗಳಿಂದ ಕಲಿಸುವಂತಾದಾಗ ಅವರ ಸಮಗ್ರ ವ್ಯಕ್ತಿತ್ವ ವಿಕಸನ ಸಾಧ್ಯವಾಗುತ್ತದೆ ಎಂದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ದಿವಾಕರ ದಾಸ್ ಅಧ್ಯಕ್ಷತೆ ವಹಿಸಿದ್ದರು. ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಕಾರ್ಯದರ್ಶಿ ಪ್ರೋ. ಆಶಾಲತಾ ಸುವರ್ಣ, ತಾಲೂಕು ಪತ್ರಕರ್ತರ ಸಂಘದ ಅದ್ಯಕ್ಷ ಮೌನೇಶ ವಿಶ್ವಕರ್ಮ, ಯಕ್ಷಲೋಕ ನಿರ್ದೇಶಕ ಗೋಪಾಲ ಅಂಚನ್ ಉಪಸ್ಥಿತರಿದ್ದರು.
ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೋ.ತುಕಾರಾಂ ಪೂಜಾರಿ ಪ್ರ್ರಾಸ್ತಾವಿಕ ಮಾತುಗಳನ್ನಾಡಿದರು. ಶಾಲಾ ಮುಖ್ಯ ಶಿಕ್ಷಕ ರಮೇಶ ನಾಯಕ್ ರಾಯಿ ಸ್ವಾಗತಿಸಿದರು. ಸಹಸ್ರನಾಮ ವಂದಿಸಿದರು. ಶಿಕ್ಷಕ ಚಂದಪ್ಪ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.
