ಮೂಡುಬಿದಿರೆ: ಸರ್ಕಾರದಿಂದ ಪದ್ಮವಿಭೂಷಣ ಪ್ರಶಸ್ತಿ ಪುರಸ್ಕøತರಾದ ಹಿನ್ನೆಲೆಯಲ್ಲಿ ಡಾ.ಡಿ ವೀರೇಂದ್ರ ಹೆಗ್ಗಡೆ ಅವರಿಗೆ ಅಭಿನಂದನ ಸಮಿತಿ ನೇತೃತ್ವದಲ್ಲಿ ರಾಜ್ಯಮಟ್ಟದ ಅಭಿನಂದನಾ ಸಮಾರಂಭ ಭಾನುವಾರ ಸಂಜೆ ಏರ್ಪಡಿಲಾಗಿತ್ತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪದ್ಮವಿಭೂಷಣ ಡಾ.ಡಿ. ಡಿ.ವೀರೇಂದ್ರ ಹೆಗ್ಗಡೆ ಧರ್ಮ ಎನ್ನುವುದು ಜನತೆಯನ್ನು ಭಯ ಮುಕ್ತರನ್ನಾಗಿಸಿ ಹೊಸ ಚೈತನ್ಯ ನೀಡುವ ಆತ್ಮ ಶಕ್ತಿಯನ್ನು ರೂಪಿಸುವಂತಾಗಬೇಕು. ಶ್ರೀಮಂತಿಕೆ ಮಾತ್ರವಲ್ಲ ಬಡತನ ಎನ್ನುವುದೂ ಶಾಶ್ವತವಲ್ಲ. ಇಂದು ಜನತೆಯ ಮನೋಧರ್ಮದಲ್ಲಿ ಬದಲಾವಣೆಯಾಗಬೇಕಾದ ಅಗತ್ಯವಿದೆ. ಈ ಬದಲಾವಣೆಯಿಂದ ಮಾತ್ರ ಸಮಾಜದಲ್ಲಿ ಪರಿವರ್ತನೆ ಕಾಣಲು ಸಾಧ್ಯವಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪರಮಪೂಜ್ಯ ಡಾ .ಡಿ.ವೀರೇಂದ್ರ ಹೆಗ್ಗಡೆಯವರು ನುಡಿದರು.ು.
ಧರ್ಮಾಧಿಕಾರಿಯಾಗಿ ಪೀಠವೇರಿದಾಗ ಕ್ಷೇತ್ರವನ್ನು ಆದರ್ಶವನ್ನಾಗಿಸಬೇಕೆಂಬ ಕನಸಿತ್ತು. ಮುಂದಿನ ದಿನಗಳಲ್ಲಿ ಆಗಿರುವ ಸಾಧನೆ ಎಲ್ಲವೂ ಪೀಠದ ಯೋಗ್ಯತೆ. ಧಾರ್ಮಿಕ ಪರಿಹಾರ ಸೂಚಿಸುವುದರ ಜತೆಗೆ ಲೌಕಿಕ ಪರಿಹಾರವನ್ನೂ ಸೂಚಿಸುವ ಪ್ರೇರಣೆಯಿಂದಾಗಿ ಸ್ವ ಉದ್ಯೋಗ ತರಬೇತಿ, ಗ್ರಾಮೀಣಾಭಿವೃದ್ಧಿ ಯೋಜನೆ, ಸಾಮೂಹಿಕ ವಿವಾಹದಂತಹ ಯೋಜನೆಗಳು ಕಾರ್ಯರೂಪಕ್ಕೆ ಬರಲು ಸಾಧ್ಯವಾಯಿತು ಎಂದ ಹೆಗ್ಗಡೆಯವರು ಕೇಂದ್ರ ಸರಕಾರವೂ ಶ್ರೀ ಕ್ಷೇತ್ರದ ಸ್ವ ಉದ್ಯೋಗದ ಮಾದರಿಯನ್ನು ಅನುಸರಿಸುತ್ತಿರುವ ಬೆಳವಣಿಗೆಯಿಂದಾಗಿ ಇಂದು 21 ¯ಕ್ಷ ಜನತೆಗೆ ಸ್ವಉದ್ಯೋಗ ತರಬೇತಿ ನೀಡುತ್ತಿರುವ ಸಾರ್ಥಕ ಭಾವನೆಯಿದೆ ಎಂದರು.

ಗ್ರಾಮೀಣಾಭಿವೃದ್ಧಿ ಯೋಜನೆ, ಧರ್ಮೋತ್ಥಾನ ಟ್ರಸ್ಟ್‍ನ ಸೇವಾ ಕಾರ್ಯದ ಕ್ಷೇತ್ರಗಳಲ್ಲಿ ಇನ್ನಷ್ಟು ಚಿಂತನೆಗಳು ಜಾರಿಗೊಳ್ಳಲಿವೆ ಎಂದ ಹೆಗ್ಗಡೆಯವರು ಇನ್ನಷ್ಟು ಯಾವುದೇ ಪ್ರಶಸ್ತಿಗಳ ಆಸೆಯಿಲ್ಲ. ಆದರೆ ಸೇವೆಗೆ ಇನ್ನಷ್ಟು ಅವಕಾಶಗಳು ಸಿಗಲಿ ಎಂದು ಆಶಯ ವ್ಯಕ್ತಪಡಿಸಿದರು. ಸಾಮಾಜಿಕ ಸೇವೆಯ ರಂಗದಲ್ಲಿ ಅಗ್ನಿ ಪರೀಕ್ಷೆಗಳು ಎದುರಾದರೂ ಕ್ಷೇತ್ರದ ಸ್ವಾಮಿಯ ಅನುಗ್ರಹ, ದೈವದ ಅಭಯದಿಂದಾಗಿ ಪರೀಕ್ಷೆಯನ್ನು ಗೆದ್ದು ಬಂದಿದ್ದು ಕ್ಷೇತ್ರದ ಅಸ್ತಿತ್ವ ಅಲ್ಲಾಡಿಸುವ ಪ್ರಯತ್ನಗಳು ವಿಫಲವಾಗಿವೆ. ಸೇವಾ ಚಟುವಟಿಕೆಗಳು ನಿರಂತರ ಮುನ್ನಡೆಯಲಿವೆ ಎಂದವರು ಹೇಳಿದರು.
ಡಾ.ವೀರೇಂದ್ರ ಹೆಗ್ಗಡೆ ದಂಪತಿಯನ್ನು ಶಾಲು,ಹಾರ, ಸಮ್ಮಾನ ಪತ್ರ, ವಿದ್ಯಾ ಸರಸ್ವತಿಯ ಮೂರ್ತಿ ಸಹಿತ ಗೌರವಾದರಗಳೊಂದಿಗೆ ಸಮ್ಮಾನಿಸಲಾಯಿತು.
ಪದ್ಮವಿಭೂಷಣ ಪ್ರಶಸ್ತಿ ಪುರಸ್ಕøತರಾದ ಡಾ|| ಡಿ.ವೀರೇಂದ್ರ ಹೆಗ್ಗಡೆಯವರು ಭಗವಂತನ ಮತ್ಸ್ಯಾವತಾರದಲ್ಲಿ ಬೆಳೆದಂತೆ ಧರ್ಮಸ್ಥಳ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗದೇ ವಿಶಾಲ ಸೇವಾ ಕಾರ್ಯದಲ್ಲಿ ವಿಶ್ವವ್ಯಾಪಿಯಾಗಿ ತೊಡಗಿಕೊಂಡವರು. ಶಿವನ ಜಟೆಯಿಂದ ಗಂಗೆ ಹರಿಸುವಲ್ಲಿ ಭಗೀರಥ ಶ್ರಮಿಸಿದರೆ ಹೆಗ್ಗಡೆಯವರು ಮಂಜುನಾಥನ ಜಟೆಯಿಂದ ದಾನಗಂಗೆಯನ್ನು ದೇಶಕ್ಕೆ ಪಸರಿಸಿದ ಭಗೀರಥ ಎಂದು ಉಡುಪಿ ಪೇಜಾವರ ಶ್ರೀ ಅಧೋಕ್ಷಜ ಮಠ, ಉಡುಪಿ ಪೂಜ್ಯಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರು ನುಡಿದರು. ತಮ್ಮ ಆಶೀರ್ವಚನದಲ್ಲಿ ಹೆಗ್ಗಡೆಯವರನ್ನು ಅಭಿನಂದಿಸಿದ ಅವರು ನಾಡಿನ ಜನತೆಯ ಹೃದಯ ಪದ್ಮದಲ್ಲಿ ನೆಲೆಸಿದ್ದಕ್ಕಾಗಿ ಹೆಗ್ಗಡೆಯವರಿಗೆ ಪದ್ಮವಿಭೂಷಣ ಲಭಿಸಿದೆ ಎಂದರು. ವಿಶ್ವದಲ್ಲಿ ಸೇವೆಯ ರೂಪ ತೋರಿಸಿದ ಅವರು ವಿಶ್ವರತ್ನ, ಕಲಿಯುಗದ ಧರ್ಮರಾಯ, ಅಜಾತ ಶತ್ರು, ಆದರ್ಶ ಧರ್ಮದರ್ಶಿ ಎಂದು ಶ್ಲಾಘಿಸಿದರು.
ಮೂಡುಬಿದಿರೆ ಶ್ರೀ ಜೈನ ಮಠದ ಸ್ವಸ್ತಿ ಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಯವರು ತಮ್ಮ ಆಶೀರ್ವಚನದಲ್ಲಿ ಹೆಗ್ಗಡೆಯವರಿಗೆ ಪ್ಮವಿಭೂಷಣ ಶ್ರೇಷ್ಠ ವ್ಯಕ್ತಿತ್ವದ ಕನ್ನಡ ಮನಸ್ಸಿನ ಸೇವೆಗೆ ಸಂದ ಗೌರವ ಎಂದರು.
ಡಾ.ಹೆಗ್ಗಡೆಯವರನ್ನು ಅಭಿನಂದಿಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೆಗ್ಗಡೆಯವರು ಪ್ರಶಸ್ತಿಗೆ ಭಾಜನರಾಗಿರುವುದು ಆರು ಕೋಟಿ ಕನ್ನಡಿಗರಿಗೇ ಗೌರವ ಸಂದಂತಾಗಿದೆ. ಆಶಕ್ತರ ಹಾಗೂ ಆರ್ಥಿಕವಾಗಿ ದುರ್ಬಲ ಕುಟುಂಬಗಳನ್ನು ಸ್ವಾವಲಂಬಿಂiÀiನ್ನಾಗಿಸಿ ಬೆಳೆಸಿದ ಹೆಗ್ಗಡೆಯವರ ಯೋಜನೆಗಳು ಸರಕಾರವೂ ಮಾಡಲಾಗದಂತಹ ಕೆಲಸಗಳನ್ನು ಮಾಡಿ ತೋರಿಸಿವೆ. ಬಡತನ ನಿರ್ಮೂಲನೆಗೆ ಹೆಗ್ಗಡೆಯವರು ಮಾಡಿರುವ ಕೆಲಸಗಳು ಮಾದರಿ ಮಾತ್ರವಲ್ಲ ಸರ್ಕಾರವನ್ನೂ ಕಣ್ತೆರೆಸುವಂತಹದ್ದು ಎಂದರು.
ಚಿಕ್ಕಬಳ್ಳಾಪುರ ಕ್ಷೇತ್ರ ಸಂಸದ ಡಾ. ಎಂ.ವೀರಪ್ಪ ಮೊೈಲಿ ಮಾತನಾಡಿ ಸಮಾಜ ಸೇವೆಯಲ್ಲಿ ಹೊಸತನದ ತಪಸ್ವಿ ಸಂಶೋಧಕರಾದ ಪಾರದರ್ಶಕ ಪರಿಶುದ್ಧತೆಯ ಜೀವನದ ಹೆಗ್ಗಡೆಯವರು ಜನತೆಯ ಜೀವನದಲ್ಲಿ ವಿಶ್ವಾಸದ ಸಾಗರವಾಗಿದ್ದಾರೆ ಎಂದರು. ಅವರು ಎಲ್ಲರ ಬಾಳಿಗೆ ಭರವಸೆಯ ಬೆಳಕಾಗಿರುವ ಸಮರ್ಪಣಾ ಭಾವದ ಸಮಾಜ ಸೇವಕ ಮಾತ್ರವಲ್ಲ ಅಪರೂಪದ ಸಾಧಕ ಎಂದರು.
ದ.ಕ ಸಾಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ ವ್ಯಕ್ತಿ ನಿರ್ಮಾಣದಿಂದ ರಾಷ್ಟ್ರ ನಿರ್ಮಾಣದ ಕನಸು ಕಂಡ ಸಾಧಕ ಹೆಗ್ಗಡೆಯವರು ಮೇಕ್ ಇನ್ ಇಂಡಿಯಾದ ಕನಸಿಗೂ ಮೊದಲೇ ಸ್ವಾಬಿಮಾನದ ಸ್ವಾವಲಂಬಿ ಬದುಕು ರೂಪಿಸುವ ಯೋಜನೆಗಳನ್ನು ತಂದ ಭಾರತದ ರತ್ನ ಎಂದರು.
ಎತ್ತರಕ್ಕೆ ಏರಿದರೂ ಕೆಳಸ್ತರದ ಜನತೆಯ ಕೆಲಸ ಮಾಡುತ್ತಿರುವ ಖಾವಂದರು ಸಾಮಾಜಿಕ ನ್ಯಾಯಕ್ಕಾಗಿ ದುಡಿದವರು. ಮಧ್ಯಪಾನ ನಿಷೇಧಕ್ಕೆ ಅವರು ಮಾಡುತ್ತಿರುವ ಜನಜಾಗೃತಿ ವಿಶೇಷವಾದದ್ದು ಎಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ ರೈ ಶ್ಲಾಘಿಸಿದರು.
ಕೇಂದ್ರ ಹಣಕಾಸು ಮಾಜಿ ಸಚಿವ ಬಿ ಜನಾರ್ದನ ಪೂಜಾರಿ ಅಭಿನಂದನಾ ಮಾತುಗಳನ್ನಾಡಿ ಹೆಗ್ಗಡೆಯವರು ಶಾಂತಿ, ಅಹಿಂಸೆ ಸೌಹಾರ್ದತೆಯ ಕೊಡುಗೆ ನೀಡಿದ ವಿಶ್ವ ಮಾನವ ಎಂದರು. ಹೆಗ್ಗಡೆಯವರಿಗೆ ಭಾರತ ರತ್ನ ಸಿಗಲೇಬೇಕು. ಆದರೆ ಅವರಿಗೆ ನೊಬೆಲ್ ಅರ್ಹತೆ ಇದೆ ಎಂದರು.
ಅಭಿನಂದನ ಸಮಿತಿ ಗೌರವಾಧ್ಯಕ್ಷ, ನಿಟ್ಟೆ ವಿಶ್ವ ವಿದ್ಯಾನಿಲಯದ ಕುಲಾಧಿಪತಿ ಎನ್. ವಿನಯ ಹೆಗ್ಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಹೆಗ್ಗಡೆಯವರು ರಾಮನಂತೆ ಪುರುಷೋತ್ತಮ ಮಾತ್ರವಲ್ಲ ಸಮಾಜದ ರತ್ನ ಹಾಗೂ ರಾಷ್ಟ್ರಕ್ಕೆ ಆದರ್ಶ ಎಂದರು.
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಸಾಂಸದೆ ಕು| ಶೋಭಾ ಕರಂದ್ಲಾಜೆ, ರಾಜ್ಯ ಯುವಜನ ಸೇವೆ ಮತ್ತು ಮೀನುಗಾರಿಕೆ ಸಚಿವ ಕೆ.ಅಭಯಚಂದ್ರ ಜೈನ್, ಯೆನಪೋಯ ವಿಶ್ವವಿದ್ಯಾನಿಲಯ ಕುಲಾಧಿಪತಿ ಯೆನಪೋಯ ಅಬ್ದುಲ್ಲ ಕುಂಞ, ಶುಭಾಶಂಸನೆಗೈದರು.
ಒಡಿಯೂರು ಕ್ಷೇತ್ರದ ಸಾದ್ವಿ ಮಾತಾನಂದಮಯಿ, ಮಾಣಿಲ ಶ್ರೀ ಮೋಹನದಾಸ ಸ್ವಾಮೀಜಿ, ವಿಶ್ವ ಸಂತೋಷ ಸ್ವಾಮೀಜಿ, ಕಟೀಲಿನ ವೇದ ಮೂರ್ತಿ ಲಕ್ಷ್ಮೀನಾರಾಯಣ ಆಸ್ರಣ್ಣ, ಆತ್ಮಾನಂದ ಸ್ವಾಮೀಜಿ ಕೊಪ್ಪಳ ರಾಜ್ಯ ಸರ್ಕಾರದ ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ, ಯುವಜನ ಸೇವೆ ಮತ್ತು ಮೀನುಗಾರಿಕೆ ಸಚಿವ ಕೆ.ಅಭಯಚಂದ್ರ ಜೈನ್, ಆರೋಗ್ಯ ಸಚಿವ ಯು.ಟಿ.ಖಾದರ್, ಮಿಲಾಗ್ರಿಸ್ ಕಾಲೇಜು ಮಂಗಳೂರು ಪ್ರಾಂಶುಪಾಲ ರೆ.ಫಾ. ಕ್ಸೇವಿಯರ್ ಗೋಮ್ಸ್, ಚಿನ್ನೇಗೌಡ, ನಟಿ ಜಯಮಾಲ, ನಟ ವಿಜಯ ರಾಘವೇಂದ್ರ, ವಿದ್ವಾಂಸ ಮೈಸೂರಿನ ವಿ.ಸುಬ್ರಹ್ಮಣ್ಯ ಮತ್ತಿತರರು ಉಪಸ್ಥಿತರಿದ್ದರು. .
ಪ್ರೊ.ಎಂ.ರಾಮಚಂದ್ರ ಕಾರ್ಕಳ ಸಮ್ಮಾನ ಪತ್ರ ವಾಚಿಸಿದರು. ಅಭಿನಂದನ ಸಮಿತಿ ಕಾರ್ಯಾಧ್ಯಕ್ಷ ಎಂ.ಎನ್. ರಾಜೇಂದ್ರ ಕುಮಾರ್ ಸ್ವಾಗತಿಸಿದರು. ಉದ್ಯಮಿ ನಾರಾಯಣ ಪಿ.ಎಂ ವಂದಿಸಿದರು. ಅಭಿನಂದನ ಸಮಿತಿ ಸಂಚಾಲಕ, ಕಾರ್ಯಕ್ರಮದ ರೂವಾರಿ ಡಾ.ಎಂ. ಮೋಹನ ಆಳ್ವ ಗಣ್ಯರನ್ನು ಗೌರವಿಸಿದರು.
ಈ ಟೀವಿ ಕಲಾವಿದ ಶ್ರೀನಿವಾಸ ಪ್ರಭು ಕಾರ್ಯಕ್ರಮ ನಿರ್ವಹಿಸಿದರು.
ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿಯರಿಂದ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿತ್ತು.
…….
ಸಾಕ್ಷತ್ಕಾರಗೊಂಡ ಅಭಿಮಾನ
ಮೂಡುಬಿದಿರೆ: ವಿದ್ಯಾಗಿರಿಯ ಎಲ್ಲೆಲ್ಲೂ ಜನಸ್ತೋಮ, ಮನಮೋಹಕ ಸಂಪ್ರಾದಯಿಕ ಅಲಂಕಾರ, ವರ್ಣರಂಜಿತ ಮೆರವಣಿಗೆ ಇದು ಆಳ್ವಾಸ್ ವಿದ್ಯಾಗಿರಿಯಲ್ಲಿ ಭಾನುವಾರ ಸಂಜೆ ಕಂಡುಬಂದ ದೃಶ್ಯ. 80 ಸಾವಿರದಷ್ಟು ಜನರ ಅಭಿಮಾನ ವಿದ್ಯಾಗಿರಿಯ ಪ್ಯಾಲೇಸ್ ಗ್ರೌಂಡ್‍ನಲ್ಲಿ ಸಾಕ್ಷಾತ್ಕರಗೊಂಡಿತು.
ಶೋಭಾಯಾತ್ರೆ:
ಡಾ. ಡಿ.ವೀರೇಂದ್ರ ಹೆಗ್ಗಡೆ ಪದ್ಮವಿಭೂಷಣ ಅಭಿವಂದನ ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ರಾಜ್ಯದ ವಿವಿಧ ಜಿಲ್ಲೆಗಳ ಕಲಾ ತಂಡಗಳವರು ನಡೆಸಿಕೊಟ್ಟ ವರ್ಣಮಯ ಶೋಭಾಯಾತ್ರೆ ಪೂಜ್ಯ ಹೆಗ್ಗಡೆಯವರಿಗೆ ಸಾಂಸ್ಕøತಿಕ ಗೌರವ ಅರ್ಪಿಸಿದಂತಿತ್ತು. ರಾಜ್ಯ, ಹೊರರಾಜ್ಯ ಸಹಿತ ಜಿಲ್ಲೆಯ ಗಮನಾರ್ಹ ಕಲಾ ಪ್ರಕಾರಗಳು, ಜಾನಪದ, ಪ್ರದರ್ಶನ ಕಲಾ ವೈವಿಧ್ಯತೆ, ಗಾನ ನಾದ ಮೇಳವೃಂದ ವಿದ್ಯಾಗಿರಿಯಲ್ಲಿ ಗಮನ ಸೆಳೆದವು. ಆಕರ್ಷಕ ತಟ್ಟಿರಾಯ, ಕೀಲು ಕುದುರೆಗಳು, ಶ್ರೀನಿವಾಸ್ ಪುಂಜಾಲ್‍ಕಟ್ಟೆ ತಂಡದ ಶಂಖ ನಾದ , ಮೂಡುಬಿದಿರೆ ಕೊಂಬು ವಾದನ,ಮೂಡುಬಿದಿರೆಯವರ ಚೆಂಡೆ ವಾದನ , ವರ್ಣಮಯ ರಾಜ ಛತ್ರಿಗಳು, ಕರುಣಾಕರ್‍ಗುತ್ತಿಗಾರ್ ಸುಳ್ಯದ ತುಳುವರ ಆಟಿ ಕಳಂಜ,ಕುಂದಾಪುರದ ಕೊರಗರಡೋಲು, ದೇವರಾಜ್ ಮಂಡ್ಯ ಬಳಗದ ,ಪೂಜಾ ಕುಣಿತ, ಮೈಸೂರಿನ ಪೊಲೀಸ್ ಬ್ಯಾಂಡ್, ಕೇರಳದ ತೈಯ್ಯಂ ,ದೇವರ ವೇಷ, ಲೋಕೇಶ್ ಚಿತ್ರದುರ್ಗ ತಂಡದ ಚಿತ್ರದುರ್ಗ ಬ್ಯಾಂಡ್ ಸೆಟ್ ,ಮಂಡ್ಯದ ಮಂಜು ಅವರ ನಗಾರಿ ,ರಮೇಶ್ ಬಳಗದ ಕಲ್ಲಡ್ಕದ ಗೊಂಬೆ, ಕೇರಳದ ಪುರುಲಿಯ ಸಿಂಹ, ಜನಾರ್ಧನ್ ಅವರ ಕೇರಳದ ಚೆಂಡೆ ,ಮಂದಾರ್ತಿಯ ಗುಮ್ಟೆ ಕುಣಿತ , ಬೂದಿಯಪ್ಪ ಅವರ ಡೊಳ್ಳು ಕುಣಿತ ಮಂಗಳೂರಿನ ,ಪೊಲೀಸ್ ಬ್ಯಾಂಡ್ , ಮಿಜಾರಿನ ಪ್ರಸಾದ್ ಅವರ ತುಳುನಾಡ ವಾದ್ಯ ,ಪೂರ್ಣಕುಂಭ, ಸೆಕ್ಸೋಫೋನ್, ಕಥಕಳಿ, ಮೆರವಣಿಗೆಯ ರಂಗೇರಿಸಿದವು.





















