ಹುಬ್ಬಳ್ಳಿ: ಶ್ರೀ ರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಬಿಜೆಪಿ ಸೇರಿದ ಎರಡು ಗಂಟೆಗಳಲ್ಲಿಯೇ ಪಕ್ಷದ ವರಿಷ್ಠರು ಅವರಿಗೆ ಸದಸ್ಯತ್ವ ನಿರಾಕರಿಸಿದ ಘಟನೆ ಭಾನುವಾರ ನಡೆಯಿತು. ಬಿಜೆಪಿ ಪರ ಹಾಗೂ ವಿರುದ್ಧ ಮಾತನಾಡುತ್ತಿದ್ದ ಮುತಾಲಿಕ್ ರನ್ನು ಭಾನುವಾರ ಬಿಜೆಪಿ ರಾಜ್ಯ ಘಟಕದ ವರಿಷ್ಠರಾದ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮತ್ತು ಮಾಜಿ ಡಿಸಿಎಂ ಈಶ್ವರಪ್ಪ ಉಪಸ್ಥಿತಿಯಲ್ಲಿ ಪಕ್ಷಕ್ಕೆ ಸೇರಿಸಿಕೊಳ್ಳಲಾಗಿತ್ತು. ಆದರೆ ರಾಜ್ಯದ ಮುಖಂಡರ ಈ ನಿರ್ಧಾರಕ್ಕೆ ಬಿಜೆಪಿ ಕೇಂದ್ರ ನಾಯಕತ್ವ ಅಸಮಾಧಾನ ವ್ಯಕ್ತಪಡಿಸಿತ್ತು.
ಪ್ರಮೋದ್ ಮುತಾಲಿಕ್ ಮಂಗಳೂರಿನಲ್ಲಿ 2009ರಲ್ಲಿ ನಡೆದ ಪಬ್ ದಾಳಿಯ ರೂವಾರಿಯಾಗಿದ್ದರು. ಅದಕ್ಕಾಗಿ ಅವರನ್ನು ಕಾನೂನು ಪ್ರಕಾರ ಶಿಕ್ಷೆಗೆ ಒಳಪಡಿಸಲಾಗಿತ್ತು. ಇದಲ್ಲದೆ ಅವರು ಎರಡು ಕೋಮುಗಳ ನಡುವೆ ವೈಷಮ್ಯ ಹರಡುತ್ತಿದ್ದಾರೆ ಎಂಬ ಆಪಾದನೆಯೂ ಅವರ ಮೇಲಿತ್ತು. ಬಿಜೆಪಿಯ ಸ್ಥಳೀಯ ಕೆಲವು ನಾಯಕರು ಕೂಡಾ ಮುತಾಲಿಕ್ ಸೇರ್ಪಡೆಗೆ ವಿರೋಧ ವ್ಯಕ್ತಪಡಿಸಿದ್ದರು. ಈ ಎಲ್ಲಾ ಬೆಳವಣಿಗೆಯನ್ನು ಮನಗಂಡ ರಾಜ್ಯ ಬಿಜೆಪಿ ವರಿಷ್ಠರು ಮುತಾಲಿಕ್ ಗೆ ಬಿಜೆಪಿ ಸದಸ್ಯತ್ವ ನೀಡಿದ ಎರಡು ಗಂಟೆಗಳಲ್ಲಿಯೇ ಅದನ್ನು ವಾಪಾಸು ಪಡೆದಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಬಿಜೆಪಿ ಮೇಲೆ ಹರಿಹಾಯ್ದಿದ್ದ ಮುತಾಲಿಕ್ ಮೋದಿ ಪ್ರಧಾನಿಯಾಗುವ ಸಲುವಾಗಿ ಬಿಜೆಪಿ ಸೇರುತ್ತಿರುವುದಾಗಿ ಹೇಳಿಕೊಂಡಿದ್ದರು.

