ಮೊನ್ನೆ ದೇವಸ್ಥಾನವೊಂದರಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ ನಡೆಯುತ್ತಿತ್ತು. ಸಾಲಾಗಿ ವೃತಧಾರಿಗಳು ಕುಳಿತಿದ್ದರು. ಪೂಜೆಯ ಸಂದರ್ಭ ವೃತಧಾರಿಗಳ ಎದುರಿಗೆ ಬಾಳೆ ಎಲೆ ಹಾಕಿ ಅದರಲ್ಲಿ ಅಕ್ಕಿ, ತೆಂಗಿನಕಾಯಿ, ವೀಳ್ಯ, ಅಡಿಕೆ ಇಡಲಾಗಿತ್ತು. ಇದೆಲ್ಲಾ ಪರಿಸರಜನ್ಯ, ರೈತ ಪ್ರಿಯ ವಸ್ತುಗಳು. ಪೂಜೆಯ ಹೆಸರಿನಲ್ಲಾದರೂ ರೈತರು ಬೆಳೆಯುವ ಇಂತಹ ಕೃಷಿ ಉತ್ಪನ್ನಗಳು ಮಾನ್ಯತೆ ಪಡೆಯುತ್ತಿರುವುದು ಆಶಾದಾಯಕ ಬೆಳವಣಿಗೆ. ಆದರೆ ಇವೆಲ್ಲಾ ವಸ್ತುಗಳ ಸನಿಹದಲ್ಲೇ ಒಂದೊಂದು ಪ್ಲಾಸ್ಟಿಕ್ ಲೋಟವನ್ನು ಇಡಲಾಗಿತ್ತು. ಇದರಲ್ಲಿ ನೀರು ಹಾಕಲಾಗಿದ್ದು ಪೂಜೆಯ ಸಂದರ್ಭ ವೃತಧಾರಿಗಳು ಇದರೊಳಗಿನ ನೀರನ್ನು ತೀರ್ಥವಾಗಿ ಸೇವಿಸುತ್ತಿದ್ದರು.
ಭಕ್ತರು ತೀರ್ಥ ಎಂದು ಪದೇ ಪದೇ ಭಕ್ತಿಯಿಂದ ಕುಡಿಯುವುದು ಆ ಪ್ಲಾಸ್ಟಿಕ್ ಲೋಟದೊಳಗಿನ ನೀರನ್ನು, ಅರ್ಥಾತ್ ವಿಷವನ್ನು. ಪೂಜೆಯ ಬಳಿಕ ಪೂಜೆಗೆ ಬಳಸಲಾದ ಬಹುತೇಕ ವಸ್ತುಗಳು ಯಾರದೋ ಮನೆ ಸೇರುತ್ತದೆ. ಉಪಯೋಗಿಸಲ್ಪಡುತ್ತದೆ. ಆದರೆ ಈ ಸಹಸ್ರಾರು ಪ್ಲಾಸ್ಟಿಕ್ ಲೋಟಗಳು ದೇಗುಲದ ಸನಿಹದ ಗದ್ದೆಯ ಬದಿಯಲ್ಲಿ ಸೇರುತ್ತದೆ. ಪೂಜೆಯ ಹೆಸರಿನಲ್ಲಿ ಮಣ್ಣು, ನೀರು ಎಲ್ಲವೂ ವಿಷಮಯವಾಗುತ್ತದೆ. ಪರಿಸರವೂ ಮಲೀನವಾಗುತ್ತದೆ. ಆರೋಗ್ಯಕ್ಕಾಗಿ ಹರಕೆ ಸಲ್ಲಿಸಿ ಪೂಜೆಯ ವೃತದಾರಿಗಳಾಗುವವರಿಗೆ ಈ ಮೂಲಕ ಅನಾರೋಗ್ಯವೆಂಬ ಪ್ರಸಾದವನ್ನು ನೀಡಲಾಗುತ್ತದೆ.
ಪ್ಲಾಸ್ಟಿಕ್ ತೊಟ್ಟೆಯ ಬದಲಿಗೆ ಬಟ್ಟೆಯ ಚೀಲಗಳನ್ನೇ ಪ್ರಸಾದಕ್ಕಾಗಿ ಬಳಸುವ ಪದ್ಧತಿ ಕೆಲವು ದೇವಸ್ಥಾನಗಳಲ್ಲಿ ಜಾರಿಯಾಗಿದ್ದರೂ ಇನ್ನೂ ಬಹುತೇಕ ದೇವಸ್ಥಾನಗಳು ಈ ನಿಟ್ಟಿನಲ್ಲಿ ಎಚ್ಚೆತ್ತುಕೊಳ್ಳದಿರುವುದು ಧಾರ್ಮಿಕ ದುರಂತವೆಂದರೂ ತಪ್ಪಲ್ಲ. ಬಹುತೇಕ ದೇವಸ್ಥಾನಗಳಲ್ಲಿ ಪೂಜೆ, ಉತ್ಸವದ ಸಂದರ್ಭ ಶೃಂಗಾರ, ಅಲಂಕಾರ, ಧ್ವಾರ, ತೋರಣ, ಅತಿಥಿ ಸತ್ಕಾರ, ಪಾನೀಯ ವಿತರಣೆ, ಸಂತೆ-ಸಡಗರಗಳೆಂಬ ನೆಪದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಪ್ಲಾಸ್ಟಿಕ್ ಉತ್ಪನ್ನಗಳು, ಪ್ಲಾಸ್ಟಿಕ್ ಬಾಟಲಿಗಳು, ಪ್ಲಾಸ್ಟಿಕ್ ತೊಟ್ಟೆ ಇತ್ಯಾದಿ ವಸ್ತುಗಳು ಬಳಕೆಯಾಗುತ್ತಾ ಇದೆ. ಜಾತ್ರೆಯ ನಂತರ ದೇವಸ್ಥಾನದ ಪರಿಸರದಲ್ಲೆಲ್ಲಾ ರಾಶಿ ರಾಶಿ ಪ್ಲಾಸ್ಟಿಕ್ ವಸ್ತುಗಳೇ ಗಮನ ಸೆಳೆಯುತ್ತದೆ. ನಿಧಾನವಾಗಿ ಈ ವಸ್ತುಗಳೆಲ್ಲಾ ಮಣ್ಣಿನೊಳಗೆ ಸೇರಿ ಇಡೀ ಪರಿಸರದ ವಿನಾಶಕ್ಕೆ ಕಾರಣವಾಗುತ್ತಿದೆ.
ಈ ಬಗ್ಗೆ ಸಂಬಂಧಪಟ್ಟ ಇಲಾಖೆಗಳು ಗಮನಹರಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿದೆ. ಮನುಕುಲದ ಉದ್ಧಾರದ ಜವಾಬ್ದಾರಿ ಹೊತ್ತ ದೇವಾಲಯಗಳಲ್ಲಾದರೂ ಪ್ಲಾಸ್ಟಿಕ್ ನಿಷೇಧಿಸಬೇಕೆನ್ನುವ ಕನಿಷ್ಠ ಅರಿವು ಇರದಿದ್ದರೆ ಅದು ದೇವಾಲಯವಾಗುವುದು, ಮಾನವರ ಕಲ್ಯಾಣ ಕೇಂದ್ರವಾಗುವುದು ಹೇಗೆ ಎಂದು ಪ್ರತೀ ದೇವಸ್ಥಾನದ ಆಡಳಿತ ಮಂಡಳಿಯವರು ಗಂಭೀರವಾಗಿ ಯೋಚಿಸಬೇಕಾಗಿದೆ.
ಸುಡುಮದ್ದು ಸಂಘಟಕರ ಪ್ರತಿಷ್ಠೆಗಾಗಿಯೋ?:
ದೇವಸ್ಥಾನ, ಉತ್ಸವ, ಪೂಜಾಧಿ ಧಾರ್ಮಿಕ ಸಮಾರಂಭಗಳಲ್ಲಿ ಈಗೀಗ ಮತ್ತೊಂದು ಅನಾರೋಗ್ಯಕರ ಸ್ಪರ್ಧೆ ಆರಂಭವಾಗಿದೆ. ಇದು ಕೂಡ ಪರಿಸರ ಹಾಗೂ ಮನುಕುಲದ ಆರೋಗ್ಯದ ಮೇಲೆ ಮಾರಕ ಪರಿಣಾಮ ಬೀರುತ್ತಿದೆ. ಈಗೀಗ ಒಂದು ದೇವಸ್ಥಾನದಲ್ಲಿ ಇಪ್ಪತ್ತು ಸಾವಿರ ರೂಪಾಯಿಯ ಸುಡುಮದ್ದು ಪ್ರದರ್ಶನವಾದರೆ, ಇನ್ನೊಂದೆಡೆ 40 ಸಾವಿರದ್ದು, ಮಗದೊಂದೆಡೆ 60 ಸಾವಿರದ್ದು… ಹೀಗೆ ಅದು ಲಕ್ಷದವರೆಗೂ ಮುಂದುವರಿಯುತ್ತದೆ. ಸುಡುಮದ್ದಿಗಾಗಿಯೇ ಪ್ರತ್ಯೇಕ ಡೊನೇಶನ್ ಹಾವಳಿ ನಡೆಸಿಯೂ ಜನಸಾಮಾನ್ಯ ಭಕ್ತರನ್ನು ದೇವರ ಹೆಸರಿನಲ್ಲಿ ದೋಚಲಾಗುತ್ತಿದೆ. ಮೌನಪ್ರಿಯ ಭಗವಂತನಿಗೆ ಸುಡುಮದ್ದಿನ ಕರ್ಕಶ ಶಬ್ಧದ ಔತಣದಿಂದ ಶಬ್ಧ ಮಾಲಿನ್ಯ, ಪರಿಸರ ಮಾಲಿನ್ಯದೊಂದಿಗೆ ಊರಜನರ ಆರೋಗ್ಯದ ಮೇಲೆ ಮಾರಕ ಪರಿಣಾಮ ಬೀರುತ್ತದೆ.
ಊರಿಗೆ ಕ್ಷೇಮವಾಗಬೇಕೆಂಬ ಸದುದ್ಧೇಶದಿಂದ ನಡೆಯುವ ಉತ್ಸವಾಧಿಗಳು ಸುಡುಮದ್ದಿನ ಹಾವಳಿಯಿಂದ ಊರಿಗೆ ನಿಜಕ್ಕೂ ಕ್ಷಾಮವನ್ನೇ ತಂದೊಡ್ಡುತ್ತಿದೆ. ಜನಸಾಮಾನ್ಯರ ಆರೋಗ್ಯದ ಮೇಲೆ ಮಾರಕ ಪರಿಣಾಮ ಬೀರುವ ಸುಡುಮದ್ದು ಪ್ರದರ್ಶನ ದೇವರ ಪಾವಿತ್ರತೆಗಾಗಿಯೋ? ಸಂಘಟಕರ ಪ್ರತಿಷ್ಠೆಗಾಗಿಯೋ? ಎಂದು ದೇವಸ್ಥಾನದ ಪ್ರಮುಖರು ಯೋಚಿಸಬೇಕಾದ ಅಗತ್ಯವಿದೆ. ದೇವಸ್ಥಾನಗಳು ಪರಿಸರ ಪ್ರಿಯವಾಗುವಲ್ಲಿ ಎಲ್ಲಾ ರೀತಿಯ ಯೋಚನೆ-ಯೋಜನೆಗಳು ಅನುಷ್ಠಾನಕ್ಕೆ ಬರಬೇಕು. ಈ ನಿಟ್ಟಿನಲ್ಲಿ ದೇವಸ್ಥಾನದ ಸಮಿತಿಗಳು, ಸ್ಥಳೀಯಾಡಳಿತಗಳು ಹಾಗೂ ಭಕ್ತರು ಸಂಘಟಿತ ಪ್ರಯತ್ನ ನಡೆಸಿದರೆ ಒಳಿತು. ದೇವಸೃಷ್ಠಿಯ ಪೃಕೃತಿ ಸಹಜ ಪರಿಸರವನ್ನು ನಾಶಮಾಡಿ ಮಾಡುವ ಯಾವುದೇ ಆಡಂಬರದ ಸೇವೆಯನ್ನು ಭಗವಂತ ಖಂಡಿತ ಮೆಚ್ಚಲಾರ. ಪರಿಸರವನ್ನು ಉಳಿಸಿ ಬೆಳೆಸುವುದೂ ಒಂದು ಪೂಜೆಯೇ ಅಲ್ಲವೇ?
ಗೋಪಾಲ ಅಂಚನ್
