ಬೆಂಗಳೂರು: ಡಿಕೆ ರವಿ ನಿಗೂಢ ಸಾವು ಪ್ರಕರಣದ ತನಿಖೆ ಸರಿಯಾಗಿ ನಡೆದು ಕುಟುಂಬಕ್ಕೆ ನ್ಯಾಯ ಸಿಗುವಂತಾಗಲು ರವಿ ಅವರ ಕುಟುಂಬ ಅಂತ್ಯ ಸಂಸ್ಕಾರದ ವಿಧಾನ ಬದಲಾಯಿಸಿದ ಮಾಹಿತಿ ಈಗ ಲಭ್ಯವಾಗಿದೆ.
ಒಕ್ಕಲಿಗರಲ್ಲಿ ವಿವಾಹಿತರ ಅಂತ್ಯಸಂಸ್ಕಾರ ಸುಡುವ ಮೂಲಕ ಆಗುತ್ತದೆ. ಒಂದು ವೇಳೆ ಸಿಬಿಐ ತನಿಖೆಗೆ ಆದೇಶ ಸಿಕ್ಕಿದ್ದರೆ ಮತ್ತೆ ಶವವನ್ನು ತೆಗೆಯುವ ಸಾಧ್ಯತೆ ಇದೆ. ಹೀಗಾಗಿ ಡಿ.ಕೆ. ರವಿ ಅವರ ಶವವನ್ನು ಮಣ್ಣಿನಲ್ಲಿ ಹೂಳಲು ಪೋಷಕರು ಅನುಮತಿ ನೀಡಿದ್ದರು.
ಈಗಾಗಲೇ ಮರಣೋತ್ತರ ಪರೀಕ್ಷೆಯನ್ನು ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರು ನಡೆಸಿದರೂ ಒಂದು ವೇಳೆ ಸಿಬಿಐ ತನಿಖೆ ಅನುಮತಿ ಸಿಕ್ಕಿದ್ದಲ್ಲಿ, ಮತ್ತೆ ಪೋಸ್ಟ್ ಮಾರ್ಟಂ ಮಾಡುವ ಸಾಧ್ಯತೆ ಇದೆ. ಹೀಗಾಗಿ ಪೋಸ್ಟ್‍ಮಾರ್ಟಂ ಮಾಡಿದರೆ ಅನುಕೂಲ ಆಗಲಿ ಎಂದು ಹೂಳುವಾಗ ಉಪ್ಪು ಬಳಕೆ ಮಾಡಿದ್ದಾರೆ.
ಸಾಧಾರಣವಾಗಿ ಶವಗಳನ್ನು ಹೂಳುವಾಗ ಜಾಸ್ತಿ ಉಪ್ಪು ಹಾಕಿದರೆ ಅದು ಬಹುತೇಕ ವರ್ಷದ ವರೆಗೂ ಕೊಳೆಯದೇ ಇರುತ್ತದೆ. ಹೀಗಾಗಿ ಮತ್ತೆ ಮರಣೋತ್ತರ ಪರೀಕ್ಷೆ ನಡೆಸಿದರೂ ಡಿಎನ್‍ಎ ಮೂಲಕ ವ್ಯಕ್ತಿ ಮೃತಪಡುವ ಮೊದಲು ದೇಹಕ್ಕೆ ಏನು ಹೋಗಿತ್ತು ಎನ್ನುವುದನ್ನು ಪತ್ತೆ ಹಚ್ಚಬಹುದಾಗಿದೆ.
