ಬಂಟ್ವಾಳ: ಪ್ರತಿಯೊಬ್ಬ ವ್ಯಕ್ತಿಯೂ ಆರ್ಥಿಕವಾಗಿ ಅಭಿವೃದ್ದಿ ಕಂಡಾಗ ಮಾತ್ರ ದೇಶವೂ ಕೂಡ ಸಮಗ್ರವಾಗಿ ಅಭಿವೃದ್ದಿ ಕಾಣಲು ಸಾಧ್ಯ. ಸಚಿವ, ಸಂಸದರಿಗಿಂತಲೂ ಹೆಚ್ಚಾಗಿ ಗ್ರಾಮೀಣ ಬಾಗದ ಜನರು ಜನಪ್ರತಿನಿಧಿಗಳಂತೆ ಸ್ಥಳೀಯ ಸಹಕಾರಿ ಸಂಘಗಳ ನಿರ್ದೇಶಕರ ಮೇಲೂ ಹೆಚ್ಚಿನ ವಿಶ್ವಾಸ ಇಟ್ಟುಕೊಂಡಿರುತ್ತಾರೆ ಎಂದು ಪ್ರಗತಿಪರ ಕೃಷಿಕ ರಾಜೇಶ್ ನಾಕ್ ಉಳಿಪಾಡಿಗುತ್ತು ಹೇಳಿದರು.


ಸಹಕಾರಿ ಭಾರತಿ ಬಂಟ್ವಾಳ ತಾಲೂಕು ಹಾಗೂ ಬಿಜೆಪಿ ಸಹಕಾರಿ ಪ್ರಕೋಷ್ಠ ಬಂಟ್ವಾಳ ಇದರ ವತಿಯಿಂದ ಮಂಗಳವಾರ ಬಿ.ಸಿ.ರೋಡಿನ ಲಯನ್ಸ್ ಸೇವಾಮಂದಿರದಲ್ಲಿ ನಡೆದ ಸಹಕಾರಿಗಳ ಸಮಾವೇಶದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಿಕ್ಕಿರುವ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳವ ಮೂಲಕ ಈ ಕ್ಷೇತ್ರದಲ್ಲಿ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದು ಸಹಕಾರಿ ಸಂಸ್ಥೆಗಳಿಗೆ ನೂತನವಾಗಿ ಆಯ್ಕೆಯಾದ ನಿರ್ದೇಶಕರುಗಳಿಗೆ ಅವರು ಕರೆ ನೀಡಿದರು.
ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಸದಸ್ಯರು ನಿರ್ದೇಶಕರಾಗಿ ಆಯ್ಕೆಗೊಂಡಿದ್ದು ಸಂತಸ ತಂದಿದೆ ಇವರೆಲ್ಲರೂ ಮುಂದಿನ ದಿನಗಳಲ್ಲಿ ಸಹಕಾರಿ ಸಂಸ್ಥೆ ಬೆಳವಣಿಗೆ ಜೊತೆಗೆ ನಿಸ್ವಾರ್ಥ ಸಮಾಜ ಸೇವೆಯೊಂದಿಗೆ ಮತದಾರರಿಗೆ ಸ್ಪಂದಿಸಬೇಕು. ಆ ಮೂಲಕ ಗೆಲುವಿಗೆ ಸ್ಪಂದಿಸಿದ ಸಂಘ ಪರಿವಾರ ಮತ್ತು ಬಿಜೆಪಿಗೆ ಶಕ್ತಿ ತುಂಬುವುದನ್ನು ಮರೆಯಬಾರದು ಎಂದು ಆರ್ ಎಸ್ಎಸ್ ಮುಖಂಡ ಡಾ.ಕೆ.ಪ್ರಭಾಕರ ಭಟ್ ಕಲ್ಲಡ್ಕ ಹೇಳಿದ್ದಾರೆ.
ಸಹಕಾರಿ ಸಂಸ್ಥೆಗಳನ್ನು ಪರಸ್ಪರ ಸಹಕಾರ ತತ್ವದಡಿ ಮುನ್ನಡೆಸಿ ಅವುಗಳನ್ನು ಜನರೆಡೆಗೆ ಕೊಂಡೊಯ್ಯಲು ಸಹಕಾರಿ ವಿಷಯಕ್ಕೆ ಸಂಬಂಧಿಸಿದಂತೆ ನಿರ್ದೇಶಕರು ಸಮಗ್ರ ಅಧ್ಯಯನ ನಡೆಸಬೇಕು. ಆ ಮೂಲಕ ಗ್ರಾಮೀಣ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಹೈನುಗಾರರಿಗೆ ಪ್ರೋತ್ಸಾಹ, ಹೆಣ್ಮಕ್ಕಳಿಗೆ ಕಂಪ್ಯೂಟರ್, ಟೈಲರಿಂಗ್ ತರಬೇತಿ ನೀಡಿ ಸ್ವಾವಲಂಬಿ ಬದುಕಿಗೆ ಸಹಕರಿಸಬೇಕು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಮಾಜಿ ಶಾಸಕ ರುಕ್ಮಯ ಪೂಜಾರಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಕಾರ್ಯಕರ್ತರ ತಳಮಟ್ಟದ ಪ್ರಯತ್ನದಿಂದಾಗಿ ಸಹಕಾರಿ ಸಂಸ್ಥೆಗಳ ಚುನಾವಣೆಯಲ್ಲಿ ಸಹಕಾರಿ ಭಾರತಿಯ ಅಭ್ಯರ್ಥಿಗಳು ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸಲು ಸಾಧ್ಯವಾಯಿತು ಎಂದರು. ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ ಕಾರ್ಯಕ್ರಮ ಉದ್ಘಾಟಿಸಿದರು. ಬಂಟ್ವಾಳ ಸಹಕಾರ ಭಾರತಿ ಅಧ್ಯಕ್ಷ ಜಯಶಂಕರ ಬಾಸ್ರಿತ್ತಾಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಬಿಜೆಪಿ ಕ್ಷೇತ್ರ ಸಮಿತಿ ಅಧ್ಯಕ್ಷ ಜಿ.ಆನಂದ, ಪ್ರಮುಖರಾದ ರವೀಂದ್ರ ಕಂಬಳಿ ವೇದಿಕೆಯಲ್ಲಿದ್ದರು. ಬಿಜೆಪಿ ಸಹಕಾರಿ ಪ್ರಕೋಷ್ಠ ಬಂಟ್ವಾಳ ಘಟಕದ ಸಂಚಾಲಕ ಪುರುಷೋತ್ತಮ ಸಾಲ್ಯಾನ್ ಶಂಭೂರು ಸ್ವಾಗತಿಸಿ, ಕಾರ್ಯದರ್ಶಿ ಪ್ರಮೋದ್ ಕುಮಾರ್ ರೈ ವಂದಿಸಿದರು. ಬಿಜೆಪಿ ಕ್ಷೇತ್ರ ಸಮಿತಿ ಕಾರ್ಯದರ್ಶಿ ದೇವಪ್ಪ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು.

