ಉಳ್ಳಾಲ: ಊಟದಲ್ಲಿ ಹಲ್ಲಿ ಇದೆ ಎಂದು ಆರೋಪಿಸಿ ಕೊಣಾಜೆ ನಡುಪದವು ಪಿ.ಎ ಕಾಲೇಜಿನ ವಿದ್ಯಾರ್ಥಿಗಳು ಹಾಸ್ಟೆಲ್ನ ಪೀಠೋಪಕರಣಗಳನ್ನು ಧ್ವಂಸಗೈದು ಪ್ರತಿಭಟಿಸಿದ ಘಟನೆ ಶುಕ್ರವಾರ ಸಂಭವಿಸಿದೆ.
ಕೊಣಾಜೆ ಪಿ.ಎ ಕಾಲೇಜಿನ ಪಾಲಿಟೆಕ್ನಿಕ್ ವಿದ್ಯಾರ್ಥಿಗಳ ಹುಡುಗರ ಹಾಸ್ಟೆಲ್ ನಲ್ಲಿ ಘಟನೆ ನಡೆದಿದೆ. ಗುರುವಾರ ರಾತ್ರಿಯೂಟದ ಪದಾರ್ಥದಲ್ಲಿ ಹಲ್ಲಿ ಕಂಡುಬಂದಿತ್ತು. ಇದರಿಂದ ರೊಚ್ಚಿಗೆದ್ದ ವಿದ್ಯಾರ್ಥಿಗಳು ನಾಲ್ಕು ಮಹಡಿ ಹಾಸ್ಟೆಲಿನ ಕಿಟಕಿ ಗಾಜುಗಳನ್ನು ಕಲ್ಲೆಸೆದು ಪುಡಿಗೈದು, ಸೋಡಾ ಬಾಟಲಿ ಎಸೆದು, ಟಿ.ವಿ, ಪೀಠೋಪಕರಣಗಳನ್ನು ಸಂಪೂರ್ಣ ಧ್ವಂಸಗೊಳಿಸಿದ್ದಾರೆ. ಘಟನೆಯಿಂದ ಸ್ಥಳದಲ್ಲಿ ಉದ್ರಿಕ್ತ ವಾತಾವರಣ ನಿರ್ಮಾಣಗೊಂಡಿತು.

ಸಾವಿರಾರು ರೂ. ಫೀಸು ನೀಡಿ ಕಾಲೇಜಿಗೆ ಸೇರ್ಪಡೆಗೊಂಡರೂ, ಹಾಸ್ಟೆಲ್ ಅವ್ಯವಸ್ಥೆಗಳಿಂದ ಕೂಡಿದೆ. ಆಡಳಿತ ಮಂಡಳಿಯಲ್ಲಿ ದೂರಿದರೂ, ವಿದ್ಯಾರ್ಥಿಗಳನ್ನು ವಿಶ್ವಾಸಕ್ಕೆ ಪಡೆದುಕೊಳ್ಳುವ ಕೆಲಸ ಅವರು ಮಾಡುತ್ತಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಇದರಿಂದ ರೊಚ್ಚಿಗೆದ್ದ ವಿದ್ಯಾರ್ಥಿಗಳು ಕೃತ್ಯ ಎಸಗಿದ್ದಾರೆ. ಕೊಣಾಜೆ ಪೊಲೀಸರು ಸ್ಥಳಕ್ಕಾಗಮಿಸಿದ್ದು, ಬಂದೋಬಸ್ತ್ ಏರ್ಪಡಿಸಿದ್ದಾರೆ. ಈ ಕುರಿತು ಕೊಣಾಜೆ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ.
ವಿದ್ಯಾರ್ಥಿಗಳು ಮನೆಗೆ : ಹಾಸ್ಟೆಲ್ ನಲ್ಲಿ ದಾಂಧಲೆ ನಡೆಸಿದ ವಿದ್ಯಾರ್ಥಿಗಳು ಎಲ್ಲರನ್ನೂ ಒಂದು ವಾರದ ರಜೆಯಲ್ಲಿ ಮನೆಗೆ ಕಳುಹಿಸಲಾಗಿದೆ. ಮನೆಯವರಿಗೆ ಮಾಹಿತಿ ನೀಡಿ ಕಳುಹಿಸಲಾಗಿದ್ದು, ಎಚ್ಚರಿಕೆ ನೋಟೀಸನ್ನು ನೀಡಲಾಗಿದೆ ಎಂದು ತಿಳಿದುಬಂದಿದೆ.
