ಮೂಡುಬಿದಿರೆ. ಮಹಿಳೆಯರು ದೇಶದ ದೊಡ್ಡ ಶಕ್ತಿ. ಅಂದು ಪ್ರಧಾನ ಮಂತ್ರಿಯಾಗಿ ದೇಶವನ್ನು ಸದೃಢವಾಗಿ ಮುನ್ನಡೆಸಿದ ಧೀಮಂತ ನಾಯಕಿ ಇಂದಿರಾಗಾಂಧಿಯವರು ಓರ್ವ ಮಹಿಳೆಯಾಗಿ ಹೆಚ್ಚಿನ ಕರ್ತವ್ಯವನ್ನು ನಿರ್ವಹಿಸಿದ್ದರು. ಮಹಿಳೆಯರ ಸಬಲೀಕರಣ ದೇಶ ಅಭಿವೃದ್ಧಿಗೆ ಅಮೂಲ್ಯವಾದ ಕೊಡುಗೆ ನೀಡುತ್ತದೆ ಈ ನಿಟ್ಟಿನಲ್ಲಿ ಮಹಿಳೆಯರ ಸಬಲೀಕರಣಕ್ಕೆ ಆದರ್ಶ ಸಂಸ್ಥೆ ಹಮ್ಮಿಕೊಂಡಿರುವ ಕಾರ್ಯಕ್ರಮ ಶ್ಲಾಘನೀಯ ಎಂದು ಸಚಿವ ಕೆ.ಅಭಯಚಂದ್ರ ಜೈನ್ ಹೇಳಿದರು.

ಮೂಡುಬಿದಿರೆಯ ಆದರ್ಶ ಸಂಸ್ಥೆ ಹಾಗೂ ನವಚೇತನ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಆಶ್ರಯದಲ್ಲಿ ಭಾನುವಾರ ಪದ್ಮಾವತಿ ಕಲಾಮಂದಿರದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ 15ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಆಳ್ವಾಸ್ ಕಾಲೇಜಿನ ಉಪನ್ಯಾಸಕಿ ಸುಧಾರಾಣಿ ಅವರು ಮುಖ್ಯ ಭಾಷಣಕಾರರಾಗಿ ಮಾತನಾಡಿ ಇಂದು ಮಹಿಳೆಯರಿಗೆ ಹಲವಾರು ರೀತಿಯಲ್ಲಿ ಅವಕಾಶ, ಸ್ವಾತಂತ್ರ್ಯವಿದೆ. ಆದರೆ ತಮಗೆ ಗೌರವ ಸಿಕ್ಕಿದೆಯಾ? ಎನ್ನುವ ಪ್ರಶ್ನೆ ಹಲವಾರು ಸಂದರ್ಭದಲ್ಲಿ ಮೂಡುತ್ತಿದೆ. ಜಾಹೀರಾತು-ದಾರಾವಾಹಿಗಳಲ್ಲಿ ಮಹಿಳೆಯರ ವ್ಯಕ್ತಿತ್ವವನ್ನು ನಕಾರತ್ಮಕವಾಗಿ ಬಿಂಬಿಸುತ್ತಿವುದು ಹಾಗೂ ಮಹಿಳೆಯರು ಅವುಗಳನ್ನು ಪ್ರೋತ್ಸಾಹಿಸಿ ಅನುಸರಿಸುವುದು ಸರಿಯಲ್ಲ.
ಮಹಿಳೆಯ ವ್ಯಕ್ತಿತ್ವದ ಮಾನದಂಡವಲ್ಲ. ಆಕೆಗಿರುವ ಬುದ್ಧಿ,ವಿದ್ಯೆ, ಸಾಮಥ್ರ್ಯವನ್ನು ಅರಿತು ಗೌರವಿಸಬೇಕು. ಮಹಿಳೆಯರು ತಮಗೆ ರಾಜಕೀಯ, ಸಿನೆಮಾ ತಾರೆಗಳನ್ನು ಮಾದರಿಯಾಗಿ ತೆಗೆದುಕೊಳ್ಳದೆ ದೇಶಕ್ಕೆ ಕೀರ್ತಿಯನ್ನು ತರುವ ಗಣ್ಯರನ್ನು ಮಾದರಿಯಾಗಿ ತೆಗೆದುಕೊಂಡು ಸಾಧನೆಯನ್ನು ಮಾಡಬೇಕು. ಸಮಾಜದಲ್ಲಿ ಮಹಿಳೆಯರ ಬಗ್ಗೆ ಗೌರವ ಮನಸ್ಥಿತಿಯನ್ನು ಮಹಿಳೆಯರೇ ಸೃಷ್ಠಿಸಿದರೆ ಅತ್ಯಾಚಾರದಂತಹ ದೌಜನ್ರ್ಯಗಳು ತಡೆಯಬಹುದು ಎಂದು ಹೇಳಿದ ಅವರು ದಿನಾಚರಣೆಗಳು ಕೇವಲ ಒಂದು ದಿನಕ್ಕೆ ಸೀಮಿತವಾಗದೆ ಪ್ರತಿದಿನವೂ ನಿತ್ಯೋತ್ಸವವಾಗಬೇಕೆಂದು ಅಭಿಪ್ರಾಯಪಟ್ಟರು.
ಮೂಡುಬಿದಿರೆ ಪುರಸಭಾಧ್ಯಕ್ಷೆ ಸುಪ್ರಿಯಾ ಡಿ.ಶೆಟ್ಟಿ ಸಮಾರಂಭ ಉದ್ಘಾಟಿಸಿ, ದೇಶದ ಪರಂಪರೆಯಲ್ಲಿ ಮಹಿಳೆಯರಿಗೆ ನೀಡಿದ ಪ್ರಾಶಸ್ತ್ಯ, ಸಂವಿಧಾನದಲ್ಲಿ ಮಹಿಳೆಯರ ರಕ್ಷಣೆಗೋಸ್ಕರ ಇರುವ ಕಾನೂನುಗಳು ಮಹಿಳೆಯರನ್ನು ಇಂದು ಸಬಲಗೊಳಿಸಿವೆ. ಸಾಮಾಜಿಕ ಕ್ಷೇತ್ರದಲ್ಲಿ ಮಹಿಳೆಯರು ಸಕ್ರಿಯರಾಗಿ ತೊಡಗಿಸಿಕೊಂಡರೆ ಜೀವನಮಟ್ಟವನ್ನು ಮತ್ತಷ್ಟು ಸುಧಾರಿಸಬಹುದು ಎಂದರು.
ಇದೇ ಸಂದರ್ಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ನಿತ್ಯಾನಂದ, ಸಂತೋಷ್ ಶೆಟ್ಟಿ, ಪ್ರಜ್ವಲ್ ಮೋನಿಸ್, ದೀಕ್ಷಾ, ಸ್ವಾತಿ ಸನ್ಮಾನಿಸಲಾಯಿತು. ಸೂರಜ್ ಎಸ್. ಅಂಚನ್, ಸ್ವಾತಿ, ಅಶ್ವಿತಾ, ಗೌತಮ್, ಗಣೇಶ್ ಪೂಜಾರಿ ಅವರನ್ನು ಪುರಸ್ಕರಿಸಲಾಯಿತು.
ಎನ್ಎಂಎಸ್ಸಿ ಅಧ್ಯಕ್ಷೆ ಶೋಭಾ ಭಾಸ್ಕರ ಅಧ್ಯಕ್ಷತೆ ವಹಿಸಿದ್ದರು. ಬನ್ನಡ್ಕ ಸೋನ್ಸ್ ಫಾರ್ಮ್ ನ ಪ್ರಗತಿಪರ ಕೃಷಿಕ ಡಾ.ಎಲ್.ಸಿ ಸೋನ್ಸ್, ಆಳ್ವಾಸ್ ಫಿಸಿಯೋಥೆರಪಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ವಾಟ್ಸನ್ ಅರುಲ್ ಸಿಂಗ್,ಅಂಧೇರಿ ಹಿಲ್ಫೆ ಮಂಗಳೂರು ಪ್ರಾದೇಶಿಕ ಕಚೇರಿಯ ಯೋಜನಾಧಿಕಾರಿ ಇಮ್ಯಾನುವೆಲ್ ಮೊನೀಸ್, ಅದರ್ಶ ಸಂಸ್ಥೆ ಉಪಾಧ್ಯಕ್ಷ ಹಸ್ದುಲ್ಲಾ ಇಸ್ಮಾಯಿಲ್ ಉಪಸ್ಥಿತರಿದ್ದರು.
ಆದರ್ಶ ಅಧ್ಯಕ್ಷ, ಎನ್ಎಂಎಸ್ಸಿ ಕಾರ್ಯನಿರ್ವಹಣಾಧಿಕಾರಿ ಜೆಕಾಬ್ ವರ್ಗಾಸ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸಿಂಥಿಯಾ ಹಾಗೂ ಉಮೇಶ್ ಕುಲಾಲ್ ಸನ್ಮಾನ ಪತ್ರ ವಾಚಿಸಿದರು. ಜಯಂತಿ ಕಾರ್ಯಕ್ರಮ ನಿರೂಪಿಸಿದರು. ಗಣೇಶ್ ವಂದಿಸಿದರು.

