ಮೂಡುಬಿದರೆ: ಮಸ್ದೀದ್-ಏ-ಅಬೂಬಕ್ಕರ್ ಸಿದ್ದೀಕ್ ತೌಹೀದ್ ನಗರ ಇದರ ಆಶ್ರಯದಲ್ಲಿ ಬೆಳುವಾಯಿಯಲ್ಲಿ ಶನಿವಾರ ಸಂಜೆ ಸಲಫಿ ಸಮಾವೇಶ ನಡೆಯಿತು.
ಮಂಗಳೂರು ಸಲಫಿ ಎಜುಕೇಶನ್ ಬೋರ್ಡ್ ಕಾರ್ಯದರ್ಶಿ ಜಾಖುಭ್ ಕಲ್ಲಾಪ್ ಪ್ರವಚನಕಾರರಾಗಿ ಮಾತನಾಡಿ, ಜಾತಿ, ಧರ್ಮಗಳ ನಡುವಿನ ವೈಷಮ್ಯ, ಅಸ್ಪಶ್ಯತೆಯಿಂದಾಗಿ ಸಮಾಜದಲ್ಲಿ ಮಾನವೀಯ ಸಂಬಂಧಗಳು ದೂರವಾಗುತ್ತಿದೆ. ಮನುಷ್ಯ ಸಂಬಂಧಗಳು ಗಟ್ಟಿಯಾಗಿ, ಪ್ರೀತಿ, ಸಹಬಾಳ್ವೆಯ ಜೀವನ ನಮ್ಮದಾಗಬೇಕಾದರೆ ಮತೀಯ ಸಾಮರಸ್ಯಕ್ಕಿಂತಲೂ ಮಾನವೀಯ ಸಾಮರಸ್ಯ ಇಂದು ಅಗತ್ಯವಿದೆ ಎಂದರು. ಸಾಮರಸ್ಯ, ಸಹೋದರತೆಯನ್ನು ಬೋಧಿಸುವ ಇಸ್ಲಾಂನ ಧೇಯವನ್ನು ಜೀವನದಲ್ಲಿ ಯಾರು ಅಳವಡಿಸಿಕೊಳ್ಳುತ್ತಾನೆಯೊ ಅಂತವರು ಮಾತ್ರ ನೈಜ ಮುಸ್ಲಿಂನಾಗಲು ಸಾಧ್ಯ ಎಂದರು.

ಭಯೋತ್ಪಾದಕ ಲಾಡೆನ್ ಮಾಡಿದ ತಪ್ಪಿಗೆ ಎಲ್ಲಾ ಮುಸ್ಲಿಂನರನ್ನು ತಪ್ಪಿತಸ್ಥರೆಂದು ಹೇಳಲಾಗದು. ಗಾಂಧೀಜಿಯನ್ನು ಕೊಂದ ಗೋಡ್ಸೆ ಹಿಂದೂವಾಗಿದ್ದರೂ ಎಲ್ಲಾ ಹಿಂದೂಗಳನ್ನು ಗೋಡ್ಸೆಗೆ ಹೋಲಿಸುವುದು ಮೂರ್ಖತನವಾದೀತು. ಇಸ್ಲಾಂ ಧರ್ಮದ ತತ್ವಗಳನ್ನು ಕೆಲವರು ತಮಗೆ ಬೇಕಾದಂತೆ ಬದಲಾಯಿಸಿಕೊಂಡು ಜನರಿಗೆ ವಿಕೃತವಾದದನ್ನು ಬೋಧಿಸಿ ತಪ್ಪು ದಾರಿಗೆಳೆಯುವುದು ನಿಲ್ಲಬೇಕು ಎಂದರು.
ಶೇಖ್ ಇಸ್ಮಾಯಿಲ್ ಜಾಮೀಯ, ಗುಲ್ಬರ್ಗ, ಅಬ್ದುಲ್ಲಾ ಮೊಹಮ್ಮದಿ ಬೆಂಗಳೂರು ಮತ್ತಿತರರು ಇದ್ದರು
