ಮೂಡುಬಿದಿರೆ: ಖ್ಯಾತ ಮಕ್ಕಳ ತಜ್ಞ ಡಾ. ಪಿ. ಎನ್. ಕೃಷ್ಣಮೂರ್ತಿ (85 ವ.) ಅಲ್ಪಕಾಲದ ಅಸೌಖ್ಯದಿಂದ ಸೋಮವಾರ ರಾತ್ರಿ ನಿಧನ ಹೊಂದಿದರು. ಅವರು ಪತ್ನಿ ಅನ್ನಪೂರ್ಣ, ಮಗಳು ಮಕ್ಕಳತಜ್ಞೆ ಡಾ. ಮೀರಾ ಅರುಣ್ ಹಾಗೂ ಈರ್ವರು ಇಂಜಿನಿಯರ್ ಪುತ್ರರನ್ನು ಅಗಲಿದ್ದಾರೆ.
Dr P.N. Krishnamoorthy
ಮೂಲತಃ ಅಶ್ವತ್ಥಪುರದವರಾದ ಡಾ. ಪಿ. ಎನ್. ಕೃಷ್ಣಮೂರ್ತಿ ಮಂಗಳೂರಿನಲ್ಲಿ ಮಕ್ಕಳತಜ್ಞರಾಗಿದ್ದರು. ಸುಮಾರು 3 ದಶಕಗಳ ಕಾಲ ಮಂಗಳೂರು ಕೆಎಂಸಿ ಆಸ್ಪತ್ರೆಯಲ್ಲಿ ಮಕ್ಕಳ ವಿಭಾಗದ ವೈದ್ಯರಾಗಿ ಸೇವೆ ಸಲ್ಲಿಸಿದ್ದರು. ಬೆಂಗಳೂರಿನಲ್ಲಿ ಬಿಎಸ್‍ಸಿ, ಮದ್ರಾಸ್‍ನಲ್ಲಿ ಎಂಬಿಬಿಎಸ್ ಶಿಕ್ಷಣ ಪೂರೈಸಿದ ಅವರು, ಉನ್ನತ ಶಿಕ್ಷಣವನ್ನು ಇಂಗ್ಲೆಂಡ್‍ನಲ್ಲಿ ಪೂರೈಸಿದ್ದರು.
1961ರಲ್ಲಿ ಮಂಗಳೂರು ಕೆಎಂಸಿಯಲ್ಲಿ ಸಹಾಯಕ ಪ್ರಧ್ಯಾಪಕರಾಗಿ ಸೇವೆಗೆ ಸೇರಿದ್ದ ಅವರು, 1978-90ರ ವರೆಗೆ ಮಕ್ಕಳ ವಿಭಾಗ ಮುಖ್ಯಸ್ಥರಾಗಿದ್ದರು. ವೆನ್‍ಲಾಕ್ ಜಿಲ್ಲಾಸ್ಪತ್ರೆಯಲ್ಲೂ ಸೇವೆ ಸಲ್ಲಿಸಿದ್ದರು. 1990ರಲ್ಲಿ ಸೇವಾ ನಿವೃತ್ತರಾದ ಬಳಿಕವೂ ಸುಮಾರು 20 ವರ್ಷ ಕಾಲ ಉಚಿತವಾಗಿ ಕೆಎಂಸಿಯಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ಅಶ್ವತ್ಥಪುರ ಮತ್ತು ಶೃಂಗೇರಿಗಳಲ್ಲಿ ಸುಮಾರು 8 ವರ್ಷ ಕಾಲ ಪ್ರತೀ ಶನಿವಾರ ಉಚಿತ ಮಕ್ಕಳ ತಪಾಸಣೆ ನಡೆಸುತ್ತಿದ್ದರು.
ದ. ಕ. ಜಿಲ್ಲಾ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಅಧ್ಯಕ್ಷರಾಗಿ, ಮಲ್ಲಿಕಟ್ಟೆ ಲಯನ್ಸ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಅವರು, ಅಶ್ವತ್ಥಪುರ ದೇಶಸ್ಥ ಬ್ರಾಹ್ಮಣ ಪರಿಷತ್ ಅಧ್ಯಕ್ಷರೂ ಆಗಿದ್ದರು. ಅಶ್ವತ್ಥಪುರದಲ್ಲಿ ಶ್ರೀ ಮಹಾಗಣಪತಿ ದೇವಸ್ಥಾನ ಸ್ಥಾಪಿಸಿದ್ದ ಅವರು, ಶೃಂಗೇರಿ ಜಗದ್ಗುರು ಶ್ರೀ ಭಾರತೀತೀರ್ಥಮಹಾಸ್ವಾಮಿಗಳಿಂದ `ಸಮಾಜರತ್ನ’ ಪ್ರಶಸ್ತಿ ಪಡೆದಿದ್ದರು.
ದ. ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಮೂಡುಬಿದಿರೆ ಆಳ್ವಾಸ್ ಶಿಕ್ಷಕರ ದಿನಾಚರಣೆ ಪ್ರಶಸ್ತಿ ಸೇರಿದಂತೆ ಅನೇಕ ಸನ್ಮಾನಗಳಿಗೆ ಪಾತ್ರರಾಗಿದ್ದ ಅವರು ಅಶ್ವತ್ಥಪುರದಲ್ಲಿ ‘ಕಿಟ್ಟು ಡಾಕ್ಟ್ರು’ಎಂದೇ ಪರಿಚಿತರಾಗಿದ್ದರು.

ಸಂತಾಪ
ಡಾ. ಪಿ. ಎನ್. ಕೃಷ್ಣಮೂರ್ತಿ ನಿಧನಕ್ಕೆ ಮಣಿಪಾಲ ವಿ. ವಿ. ಕುಲಾಧಿಪತಿ ಡಾ. ರಾಮದಾಸ ಪೈ, ಸಹಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್, ಮಾಜಿ ಕುಲಪತಿ ಡಾ. ಬಿ. ಎಂ. ಹೆಗ್ಡೆ, ಶಾಸಕ ಅಭಯಚಂದ್ರ, ಮಾಜಿ ಸಚಿವ ಅಮರನಾಥ ಶೆಟ್ಟಿ, ಡಾ. ಎಂ. ಮೋಹನ ಆಳ್ವ, ವಕೀಲ ಕಾರ್ಕಳ ರಾಜಗೋಪಾಲಾಚಾರ್, ಶೃಂಗೇರಿ ಮಠ ಮುದ್ರಾಧಿಕಾರಿ ಕೆ. ಪ್ರಭಾಕರ ಭಟ್, ಅಶ್ವತ್ಥಪುರ ದೇವಸ್ಥಾನ ಆಡಳ್ತೆ ಮೊಕ್ತೇಸರ ಪಿ. ಎನ್. ರಾಜಾರಾಮ, ಮಾಜಿ ಮೊಕ್ತೇಸರ ಅಶ್ವತ್ಥಾಮ ಭಟ್, ಕಲಾನಿಧಿ ಸಹಕಾರ ಸಂಘ ಅಧ್ಯಕ್ಷ ವಸಂತಕುಮಾರ್, ಪುರೋಹಿತ ಯಜ್ಞೇಶ್ವರ ಭಟ್, ಪತ್ರಕರ್ತ ಕಿರಣ್ ಮಂಜನಬೈಲು ಮೊದಲಾದವರು ಸಂತಾಪ ವ್ಯಕ್ತಪಡಿಸಿದ್ದಾರೆ.

By Suddi9

Leave a Reply

Your email address will not be published. Required fields are marked *