ಉಳ್ಳಾಲ: ತಲಪಾಡಿ ಸಮೀಪದ ಕೆ.ಸಿರೋಡ್ ಎಂಬಲ್ಲಿ ಬ್ಯಾನರ್ ವಿವಾದ ಭುಗಿಲೆದಿದ್ದು ಉದ್ವಿಗ್ನ ಸ್ಥಿತಿ ನೆಲೆಗೊಂಡಿದೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು 144 ಸೆಕ್ಷನ್ ಜಾರಿಗೊಳಿಸಿದ್ದಾರೆಂದು ತಿಳಿದುಬಂದಿದೆ.

ಘಟನೆಯ ವಿವರ: ಫೆ.23ರಂದು ತಲಪಾಡಿ ಸಮೀಪದ ದೇವಿಪುರ ಎಂಬಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಸ್ಥಳೀಯ ಸಂಘಟನೆಯ ಯುವಕರು ಕೆ.ಸಿ.ರೋಡ್ ಸಮೀಪ ಹಲವಾರು ಬ್ಯಾನರ್, ಬಂಟಿಂಗ್ಸ್, ಫ್ಲೆಕ್ಸ್ಗಳನ್ನು ಅಳವಡಿಸಿದ್ದರು. ಇದನ್ನು ಮಂಗಳವಾರ ರಾತ್ರಿ ಕಿಡಿಗೇಡಿಗಳು ಧ್ವಂಸಗೊಳಿಸಿ ಹಾನಿಗೊಳಿಸಿದ್ದರು. ಇದರಿಂದ ವಿಚಲಿತರಾಗಿದ್ದ ಸ್ಥಳಿಯರು ಉಳ್ಳಾಲ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ತನಿಖೆ ನಡೆಸಿ ತೆರಳಿದ್ದರು.
ಬುಧವಾರ ರಾತ್ರಿ ಹಿಂದೂ ಸಂಘಟನೆಯ ಕಾರ್ಯಕತ್ರು ಹಾನಿಗೊಂಡ ಬ್ಯಾನರ್ಗಳನ್ನು ತೆರವುಗೊಳಿಸಿ ಹೊಸ ಬ್ಯಾನರ್ ಹಾಕಲು ಸಿದ್ದತೆ ನಡೆಸುತ್ತಿದ್ದಂತೆ ಇನ್ನೊಂದು ಕೋಮಿಗೆ ಸೇರಿದ ಕೆಲವು ಯುವಕರು ಹಿಂದೂ ಸಂಘಟನೆಯ ಕಾರ್ಯಕರ್ತರತ್ತ ಕಲ್ಲು ಹಾಗೂ ಸೋಡಾ ಬಾಟ್ಲಿಗಳನ್ನು ತೂರಿದರು ಎನ್ನಲಾಗಿದೆ. ಘಟನೆಯಲ್ಲಿ ದಿನೇಶ್ ಹಾಗೂ ಮಾಧವ ಎಂಬವರ ತಲೆಗೆ ಗಂಭೀರವಾದ ಏಟು ತಗುಲಿದ್ದು, ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಿಂದ ಪೊಲೀಸರಿಗೂ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಹಲ್ಲೆ ನಡೆಸಿದ ಅನ್ಯಕೋಮಿನ ಯುವಕರು ಸ್ಥಳದಿಂದ ಕಂಬಿಕಿತ್ತಿದ್ದು ಪೊಲೀಸರು ಹುಡುಕಾಟದಲ್ಲಿ ತೊಡಗಿದ್ದಾರೆ.
ಸ್ಥಳದಲ್ಲಿ ಉಳ್ಳಾಲ ಪೊಲೀಸರು ಬೀಡುಬಿಟ್ಟಿದ್ದು, ಸೆಕ್ಷನ್ 144 ಹೇರಲಾಗಿದೆ.
ಕೆ.ಸಿ.ರೋಡ್ನಲ್ಲಿ ಕೋಮುಗಲಭೆ ಸಾಮಾನ್ಯವಾಘಿದ್ದು ಈ ಹಿಂದೆಯೂ ಹಲವಾರು ಘಟನೆ ನಡೆದ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ. ಇದೀಗ ಮತ್ತೊಮ್ಮೆ ಕಿಡಿಗೇಡಿಗಳು ಅಟ್ಟಹಾಸ ಮೆರೆದಿದ್ದು, ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.




