ಸುದ್ದಿ9 ಬಂಟ್ವಾಳ: ಪುಂಜಾಲಕಟ್ಟೆಯ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ನ 30ನೇ ಸಂಭ್ರಮಾಚರಣೆಯ ಪ್ರಯುಕ್ತ ರವಿವಾರ ಬಂಗ್ಲೆ ಮೈದಾನದಲ್ಲಿ ನಡೆದ 6ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ 13 ಜೋಡಿ ವಧು-ವರರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.ಇದೇ ವೇಳೆ ರಾಜ್ಯ ಮಟ್ಟದ ಸ್ವಸ್ತಿಸಿರಿ ,ಸ್ವಸ್ತಿಕ್ ಸಂಭ್ರಮ ಪುರಸ್ಕಾರವನ್ನು ಪ್ರದಾನ ಮಾಡಲಾಯಿತು.
ವೇ| ಮೂ| ಕೃಷ್ಣಭಟ್ ಪೌರೋಹಿತ್ಯದಲ್ಲಿ 12.34ರ ಮಿಥುನ ಲಗ್ನದಲ್ಲಿ 13 ಜೋಡಿ ವಧು-ವರರು ನೆರೆದಿದ್ದ ಗಣ್ಯರ, ಬಂಧುಮಿತ್ರರ ಸಮ್ಮುಖದಲ್ಲಿ ಹಸೆಮಣೆಗೇರಿದರು. ಈ ಸಂದರ್ಭದಲ್ಲಿ ಬೆಂಗಳೂರಿನ ಹೈಕೋರ್ಟ್ ನ್ಯಾಯವಾದಿ ಸ್ವರ್ಣಲತಾ ವಸಂತ ಹೆಗ್ಡೆ ಅವರು ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಸಾಮಾಜಿಕ ಸ್ಪಂದನೆಯೊಂದಿಗೆ ಸ್ವಸ್ತಿಕ್ ಫ್ರೆಂಡ್ಸ್ ಮಾಡುತ್ತಿರುವ ಕಾರ್ಯ ಅಭಿನಂದನೀಯವಾಗಿದೆ ಎಂದು ಹೇಳಿದರು. ಮುಂಬೈ ಕಲಾಜಗತ್ತಿನ ತೋನ್ಸೆ ವಿಜಯಕುಮಾರ್ ಶೆಟ್ಟಿ ಅವರು ತೆಂಗಿನ ಸಿರಿ ಅರಳಿಸಿ ಎಲ್ಲಾ ಜಾತಿ, ಮತ, ಧರ್ಮದವರು ಸೇರಿಕೊಂಡು ಮಾಡುತ್ತಿರುವ ಈ ಸಾಮೂಹಿಕ ವಿವಾಹ ಕಾರ್ಯ ಶ್ಲಾಘನೀಯವಾಗಿದೆ ಎಂದರು
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರಗತಿಪರ ಕೃಷಿಕ ರಾಜೇಶ್ ನಾಯಕ್ ಉಳಿಪಾಡಿಗುತ್ತು ಅವರು ಮಾತನಾಡಿ ಸಾಮೂಹಿಕ ವಿವಾಹ ಹೃದಯ ಶ್ರೀಮಂತಿಕೆಯನ್ನು ಅರಳಿಸುವ ಕಾರ್ಯವಾಗಿದ್ದು ,ಇಂತಹ ಜನೋಪಯೋಗಿ ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಇದೇ ವೇಳೆ ವಿವಾಹ ಸಮಾರಂಭಕ್ಕೆ ಅನಿರೀಕ್ಷಿತ ಭೇಟಿ ನೀಡಿದ ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ ಆಶೀರ್ವದಿಸಿದರು. ಮಾಜಿ ಉಪಮುಖ್ಯ ಮಂತ್ರಿ ಕೆ.ಎಸ್.ಈಶ್ವರಪ್ಪ ಅವರು ಮಾತನಾಡಿ ಇಡೀ ಹಿಂದೂ ಸಮಾಜ ಮುಂದೆ ನಿಂತು ನಡೆಸುವಂತಹ ಈ ಸಾಮೂಹಿಕ ವಿವಾಹದಲ್ಲಿ ಹಸೆಮಣೆಗೇರಿದ ವಧುವರರು ಯಾವುದೋ ಜನ್ಮದಲ್ಲಿ ಮಾಡಿದ ಪುಣ್ಯದ ಫಲ ಎಂದರು.
ಕೇಂದ್ರ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ, ಆರೆಸ್ಸೆಸ್ ಪ್ರಮುಖ ಡಾ|ಪ್ರಭಾಕರ ಭಟ್ ಕಲ್ಲಡ್ಕ ,ಉದ್ಯಮಿ ಶ್ರೀಕರ ಪ್ರಭು ,ಮಾಜಿ ಸಚಿವನಾಗರಾಜ ಶೆಟ್ಟಿ , ರಾಜ್ಯ ಬಾಲಭವನ ಸೊಸೈಟಿ ಮಾಜಿ ಅಧ್ಯಕ್ಷೆ ಸುಲೋಚನಾ ಜಿ.ಕೆ.ಭಟ್,ಬಿಲ್ಲವ ಮಹಾಮಂಡಲ ವಕ್ತಾರ ಹರಿಕೃಷ್ಣ ಬಂಟ್ವಾಳ,ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಡಿ.ಎಂ.ಕುಲಾಲ್,ಮಾಜಿ ಶಾಸಕ ರುಕ್ಮಯ ಪೂಜಾರಿಅವರು ವಧುವರರಿಗೆ ಶುಭಹಾರೈಸಿದರು.
ಉದ್ಯಮಿಗಳಾದ ದಿನೇಶ್ ಅಮೀನ್ ,ಜಿತೇಂದ್ರ ಕೊಟ್ಟಾರಿ ,ಸುಂದರರಾಜ ಹೆಗ್ಡೆ ಮುಂಬೈ, ಹರೀಶ್ ಪೂಜಾರಿ ಮಂಗಳೂರು, ಮುರಲಿ ಎಚ್. ,ರೋಹಿನಾಥ್ ಪಾದೆ,ಬಿ.ಸಿ.ರೋಡ್ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಬಿ.ಸತೀಶ್ ಭಂಡಾರಿ, ಮುಂಬೈ ಚಾರ್ಕೋಪ್ ಕನ್ನಡಿಗರ ಬಳಗ ಅಧ್ಯಕ್ಷ ಮಂಜುನಾಥ್ ಬನ್ನೂರು,ಬಂಟ್ವಾಳ ವ್ಯ.ಸೇ.ಸ.ಸಂಘದ ಅಧ್ಯಕ್ಷ ಜಿ.ಆನಂದ , ತಾ.ಪಂ.ಸದಸ್ಯ ರಮೇಶ್ ಕುಡುಮೇರು,ಪಿಲಾತಬೆಟ್ಟು ಗ್ರಾ.ಪಂ.ಅಧ್ಯಕ್ಷೆ ಭಾರತಿ ಶೆಟ್ಟಿ ,ಉಪಾಧ್ಯಕ್ಷ ವಿಶ್ವನಾಥ ಕೋಟ್ಯಾನ್,ಪಿಲಾತಬೆಟ್ಟು ಸೇ.ಸ.ಬ್ಯಾಂಕ್ ಅಧ್ಯಕ್ಷ ಸುಂದರ ನಾಯ್ಕ ,ಜಿಲ್ಲಾ ಹಾಪ್ಕಾಮ್ಸ್ ಅಧ್ಯಕ್ಷ ಕೆ.ಲಕ್ಷ್ಮಿನಾರಾಯಣ ಉಡುಪ,ರಾಮದಾಸ್ ಬಂಟ್ವಾಳ,ಭಾರತ್ ಬ್ಯಾಂಕ್ ಪ್ರಬಂಧಕ ಭಾಸ್ಕರ ಸರಪಾಡಿ,ಪ್ರಮೋದ್ ಕುಮಾರ್,ಶ್ರೀ ಮುರುಘೇಂದ್ರ ಮಿತ್ರ ಮಂಡಳಿ ಗೌರವಾಧ್ಯಕ್ಷ ವಿಕ್ಟರ್ ಡಿಸೋಜ,ತುಳುನಾಡು ರಕ್ಷಣಾ ವೇದಿಕೆ ಅಧ್ಯಕ್ಷ ರಮೇಶ ಶೆಟ್ಟಿ ಮಜಲೋಡಿ,ಸಾಮಾಜಿಕ ಕಾರ್ಯಕರ್ತ ಪೃಥ್ವಿರಾಜ್ ಯು.ಬಿ.,ದೇವಪ್ಪ ಶೆಟ್ಟಿ ಕುಂಟಜಾಲ್,ಬೆಳ್ತಂಗಡಿ ನಲ್ಕೆ ಸಮಾಜದ ಅಧ್ಯಕ್ಷ ಸೇಸಪ್ಪ ನಲ್ಕೆ , ಕ್ಲಬ್ನ ಗೌರವಾಧ್ಯಕ್ಷ ಅಬ್ದುಲ್ಲಾ ಪಿ., ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ, ಮಾಜಿ ಅಧ್ಯಕ್ಷ ಮಾಧವ ಬಂಗೇರ ,ರಾಜೇಶ್ ಪುಳಿಮಜಲು ಮೊದಲಾದವರು ಉಪಸ್ಥಿತರಿದ್ದರು.
ಬೆಳಗ್ಗೆ ಬಸವನಗುಡಿ ಶ್ರೀ ಬಸವೇಶ್ವರ ದೇವಾಲಯ ಬಳಿ ಉದ್ಯಮಿ ವಾಸುದೇವ ಭಟ್, ಕಟ್ಟೆಮನೆ ಉದಯ ಕುಮಾರ್ ಸಹೋದರರು, ಸಾರಿಗೆ ಇಲಾಖಾಧಿಕಾರಿ ಚರಣ್ ಕೆ.,ಉದ್ಯಮಿ ಮೋನಪ್ಪ ಪುಜಾರಿ ಅವರು ದಿಬ್ಬಣಕ್ಕೆ ಚಾಲನೆ ನೀಡಿದರು. ಬಳಿಕ ಪುಂಜಾಲಕಟ್ಟೆಯ ರಾಜ್ಯ ಹೆದ್ದಾರಿಯಲ್ಲಿ ಮದುವೆ ಮಂಟಪದವರೆಗೆ ವೈಭವ ಪೂರ್ಣವಾದ ವಧು-ವರರ ದಿಬ್ಬಣ ಮೆರವಣಿಗೆ ನಡೆಯಿತು.ಕೇರಳದ ಚೆಂಡೆ,ಗೊಂಬೆ ನೃತ್ಯ ,ಕೀಲು ಕುದುರೆ ಮೆರವಣಿಗೆಗೆ ಮೆರುಗು ನೀಡಿತ್ತು.ಸಭಾ ಮಂಟಪದ ಮುಂಭಾಗದಲ್ಲಿ ಮುತ್ತೈದೆಯರು ಆರತಿ ಬೆಳಗಿ ಎದುರು ಗೊಂಡರು.
ಕ್ಲಬ್ ನ ಸದಸ್ಯ ಪ್ರಭಾಕರ ಪಿ.ಎಂ. ಸ್ವಾಗತಿಸಿದರು. ಕ್ಲಬ್ ಸ್ಥಾಪಕಾಧ್ಯಕ್ಷ ಎಂ.ತುಂಗಪ್ಪ ಬಂಗೇರ ಅವರು ಪ್ರಸ್ತಾವಿಸಿ ಕಳೆದ ಆರು ವರ್ಷಗಳಲ್ಲಿ ಸುಮಾರು 400ಕ್ಕೂ ಮಿಕ್ಕಿ ಜೋಡಿಗಳಿಗೆ ವಿವಾಹ ಕಾರ್ಯ ನೆರವೇರಿಸಲಾಗಿದ್ದು ಈ ಬಾರಿ 16 ಜೋಡಿಗಳ ಪೈಕಿ ಮೂರು ಜೋಡಿಗಳು ಅನಿವಾರ್ಯ ಕಾರಣಗಳಿಂದ ಮದುವೆ ಕಾರ್ಯದಲ್ಲಿ ಭಾಗವಹಿಸಿಲ್ಲ .ಅವರಿಗೆ ಮುಂದಿನ ದಿನದಲ್ಲಿ ದೇವಸ್ಥಾನದಲ್ಲಿ ನೆರವೇರಿಸಲಾಗುವುದು ಎಂದರು .ಕಾರ್ಯದಶರ್ಿ ಜಯರಾಜ್ ಅತ್ತಾಜೆ ವಂದಿಸಿದರು.ರಂಗಭೂಮಿ ಕಲಾವಿದ ಎಚ್.ಕೆ ನಯನಾಡು,ಪರ್ತಕರ್ತ ಗೋಪಾಲ ಅಂಚನ್ ಕಾರ್ಯಕ್ರಮ ನಿರೂಪಿಸಿದರು.
ಮಧ್ಯಾಹ್ನದ ಬಳಿಕ ಮುಂಬೆ ಯ ಅಮಿತ ಕಲಾಸಂಘದ ಸದಸ್ಯರಿಂದ ವಿವಿಧ ನೃತ್ಯ ಕಾರ್ಯಕ್ರಮ ನಡೆಯಿತು.
ಪೂಜಾರಿ-ಭಟ್ ಕುಶಲೋಪಚಾರ
ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಹಾಗೂ ಆರೆಸ್ಸೆಸ್ ಪ್ರಮುಖ ಡಾ|ಪ್ರಭಾಕರ ಭಟ್ ಕಲ್ಲಡ್ಕ ಅವರು ಪರಸ್ಪರ ಮುಖಾಮುಖಿಯಾಗಿ ಕುಶಲೋಪಚರಿಗೈದರು. ಕಲ್ಲಡ್ಕದ ಘಟನೆ ಬಳಿಕ ಇದೇ ಮೊದಲ ಬಾರಿಗೆ ಈ ಇಬ್ಬರೂ ನಾಯಕರು ಮುಖಾಮುಖಿಯಾಗಲು ಸಾಮೂಹಿಕ ವಿವಾಹ ವೇದಿಕೆಯಾಗಿದ್ದು ಇಬ್ಬರೂ ಹಸನ್ಮುಖರಾಗಿ ಕೈಮುಗಿದು ಮಾತನಾಡಿಕೊಂಡರು.

ವಿವಾಹಕ್ಕೂ ತಟ್ಟಿದ ನೀತಿ ಸಂಹಿತೆ ಬಿಸಿ
ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಜಾರಿಯಾಗಿರುವನೀತಿ ಸಂಹಿತೆಯ ಬಿಸಿ ಪುಂಜಾಲಕಟ್ಟೆಯ ಸಾಮೂಹಿಕ ವಿವಾಹಕ್ಕೂ ತಟ್ಟಿತ್ತು.ತಾಲುಕು ಚುನಾವಣಾಧಿಕಾರಿಗಳು ತಮ್ಮ ದಂಡಿನೊಂದಿಗೆ ವೀಡಿಯೋ ಕ್ಯಾಮರ ಸಹಿತ ವಿವಾಹ ಸಮಾರಂಭದಲ್ಲಿ ಭಾಗವಹಿಸಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಹದ್ದಿನ ಕಣ್ಣು ಇರಿಸಿದ್ದರು.ಕಾಂಗ್ರೆಸ್ ಅಭ್ಯರ್ಥಿ ಬಿ.ಜನಾರ್ದನ ಪೂಜಾರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರೂ ವೇದಿಕೆ ಮಾತ್ರ ಹತ್ತಲಿಲ್ಲ.ಮಾಜಿ ಉಪಮುಖ್ಯ ಮಂತ್ರಿ ಕೆ.ಎಸ್ ಈಶ್ವರಪ್ಪ ಅವರು ವೇದಿಕೆ ಹತ್ತಿದ್ದರೂ ವಧುವರರಿಗೆ ಶುಭಹಾರೈಕೆಗಷ್ಟೆ ತಮ್ಮ ಭಾಷಣವನ್ನು ಸೀಮಿತಗೊಳಿಸಿದ್ದರು. ಉದ್ಯಮಿಗಳು ,ಸಾಮಾಜಿಕ ಧುರೀಣರು,ಸಹಕಾರಿಗಳಷ್ಟೆ ವೇದಿಕೆಯಲ್ಲಿ ರಾರಾಜಿಸಿದರು. ಕ್ಲಬ್ ನ ಸ್ಥಾಪಕಾಧ್ಯಕ್ಷ್ಷ ಎಂ.ತುಂಗಪ್ಪ ಬಂಗೇರ ಅವರು ಸಾಮೂಹಿಕ ವಿವಾಹದಂತಹ ಕಾರ್ಯಕ್ರಮ ಚುನಾವಣಾಕಾರಿಗಳಿಂದ ಅನುಮತಿ ಪಡೆಯಲು ಹರಸಾಹಸ ಪಡೆಯಬೇಕಾಯಿತು. ಈ ಸಂದರ್ಭದಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕಾರ್ಯಕ್ರಮ ಮುಗಿಯುವವರೆಗೂ ಚುನಾವಣಾಧಿಕಾರಿಗಳು ಹಾಜರಿದ್ದರು.

