ಬಂಟ್ವಾಳ, ಫೆ. 15: ಪಾಣೆಮಂಗಳೂರು ಗ್ರಾಮ ವ್ಯಾಪ್ತಿಯ ಬಂಟ್ವಾಳ ಪುರಸಭೆಯಿಂದ 2013-14 ಸಾಲಿನ ಹಣಕಾಸು ಯೋಜನೆಯ ಅಡಿಯಲ್ಲಿ ಬೊಂಡಾಲ-ಶಾಂತಿಗುಡ್ಡೆ- ಗುಂಡೂರು ಪ್ರದೇಶದ ಕುಡಿಯುವ ನೀರಿನ ಯೋಜನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಫೆ. 15ರಂದು ಚಾಲನೆ ಮಾಡಿದರು.
ಕುಡಿಯುವ ನೀರಿನ ಕೊಳವೆ ಬಾವಿಗೆ ಅಳವಡಿಸಿದ ವಿದ್ಯುತ್ ಪಂಪ್ ಮುಖ್ಯ ಸ್ವಿಚ್ಚನ್ನು ಅದುಮಿ ಪಂಪ್ ಚಾಲನೆ ಮಾಡಿ ನೀರು ಹರಿದು ಬರುವಂತೆ ಮಾಡುವ ಮೂಲಕ ಅಕೃತ ಉದ್ಘಾಟನೆ ನೆರವೇರಿಸಿದರು.


ಬಳಿಕ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಬಂಟ್ವಾಳ ಪುರಸಭೆಯ ಎರಡನೇ ಹಂತದ ಕುಡಿಯುವ ನೀರಿನ ಯೋಜನೆ 40 ಕೋಟಿ ರೂ.ಮಂಜೂರಾತಿ ಆಗಿದ್ದು ಹಂತಹಂತದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆ ಹರಿಸುವುದಾಗಿ ವಿವರಿಸಿದರು.
ಒಳ ಚರಂಡಿ ಯೋಜನೆಗೆ 60 ಕೋಟಿಯ ಹೆಚ್ಚುವರಿ ಅನುದಾನ ಮಂಜೂರಾತಿ ದೊರೆತಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು. ಬಂಟ್ವಾಳ ಪುರಸಭೆಯನ್ನು ಮುಂಭಡ್ತಿ ನೀಡಿ ನಗರ ಸಭೆಯಾಗಿ ಮೇಲ್ದರ್ಜೆಗೆ ಏರಿಸುವ ಉದ್ದೇಶ ಹೊಂದಿದ್ದು ಇದರಿಂದ ಹೆಚ್ಚುವರಿ ಅನುದಾನ ಈ ಪ್ರದೇಶಕ್ಕೆ ಸಿಗುವುದು ಎಂದು ಹೇಳಿದರು.
ಪುರಸಭಾ ವ್ಯಾಪ್ತಿಯ ಪರಿಸರ ಸ್ವಚ್ಚತೆ ಉದ್ದೇಶಕ್ಕೆ ಹೆಚ್ಚುವರಿ 2 ಕೋಟಿ ರೂ. ನೀಡಿದ್ದು ಅದರ ಮೂಲಕ ಸೂಕ್ತವಾದಷ್ಟು ವಾಹನಗಳ ಖರೀದಿ, ಇನ್ನಿತರ ಪರಿಕರಗಳನ್ನು ಹೊಂದುವ ವ್ಯವಸ್ಥೆಗಾಗಿ ಒದಗಿಸುವುದಾಗಿ ನುಡಿದರು.
ಪುರಸಭೆಯ ಸಮಗ್ರ ಅಭಿವೃದ್ದಿ ಉದ್ದೇಶಕ್ಕೆ ಮುಖ್ಯಮಂತ್ರಿಗಳ ನಿಯಿಂದ ಹೆಚ್ಚುವರಿ 5 ಕೋಟಿ ರೂ.ಎಸ್ಟಿಮೇಟ್ ಆಗುತ್ತಿದೆ. ಇದನ್ನು ರಾಜ್ಯದಲ್ಲಿ ಬಂಟ್ವಾಳ ಕ್ಷೇತ್ರದಲ್ಲಿ ಮಾತ್ರ ಯೋಜಿಸಿದೆ ಎಂದರು.
ವೇದಿಕೆಯಿಂದ ಪುರಸಭಾ ಮಾಜಿ ಸದಸ್ಯ ಮಹಮ್ಮದ್ ರಫೀಕ್ ಪ್ರಸ್ತಾವನೆ ನೀಡಿದರು. ಬಂಟ್ವಾಳ ಪುರಸಭಾ ಅಧ್ಯಕ್ಷೆ ವಸಂತಿ ಚಂದಪ್ಪ, ಸದಸ್ಯೆ ಜಸಿಂತ ಡಿ’ಸೋಜ, ಸಾಮಾಜಿಕ ಸೇವಾಕರ್ತ, ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷ ಯನ್. ಪ್ರಕಾಶ ಕಾರಂತ, ಸ್ಥಳೀಯ ಗಣ್ಯರಾದ ಶ್ರೀಪತಿ ಭಟ್ ವೇದಿಕೆಯಲ್ಲಿ ಇದ್ದರು.
ಇದೇ ಸಂದರ್ಭ ಕುಡಿಯುವ ನೀರಿನ ಯೋಜನೆ ರೂಪಿಸಲು ಸ್ಥಳದಾನ ನೀಡಿದ ಕುಂಞಣ್ಣ ನಾಯ್ಕರನ್ನು ಸಚಿವರು ಸಮ್ಮಾನಿಸಿದರು. ಕುಡಿಯುವ ನೀರು ಒದಗಿಸುವ ಕಾಮಗಾರಿಗೆ ಅನುದಾನ ನೀಡಿ ಅನುಷ್ಠಾನಿಸಿದ್ದಕ್ಕಾಗಿ ಓಂಕಾರ ಫ್ರೆಂಡ್ಸ್ ಸದಸ್ಯರಿಂದ ಸಚಿವರನ್ನು ಸಮ್ಮಾನಿಸಲಾಯಿತು.
ಸ್ಥಳೀಯ ಜನನಾಯಕ ಚಿತ್ತರಂಜನ್ ಶೆಟ್ಟಿ ಸ್ವಾಗತಿಸಿ, ಶರತ್ ವಂದಿಸಿದರು. ಗೋಳ್ತಮಜಲು ಹಮೀದ್ ಕಾರ್ಯಕ್ರಮ ನಿರ್ವಹಿಸಿದರು.

