ಬೆಳ್ತಂಗಡಿ: ಗೆಳೆಯರಿಬ್ಬರು ಪ್ರಯಾಣಿಸುತ್ತಿದ್ದ ಬೈಕ್ ಪಲ್ಟಿಯಾಗಿ ಕೆರೆಗೆ ಎಸೆಯಲ್ಪಟ್ಟು ನೀರಿನಲ್ಲಿ ಮುಳುಗಿ ಯುವಕರಿಬ್ಬರು ಮೃತಪಟ್ಟ ಘಟನೆ ಮಂಗಳವಾರ ತಡರಾತ್ರಿ ಕುವೆಟ್ಟು ಗ್ರಾಮದ ಓಡೀಲು ಶ್ರೀ ಮಹಾಲಿಂಗೇ ಶ್ವರ ದೇವಸ್ಥಾನದ ಬಳಿಯ ದೇರೆಮಾರು ಎಂಬಲ್ಲಿ ನಡೆದಿದೆ. ಮಂಗಳೂರು ತಾಲೂಕು ತೆಂಕ ಎಡಪದವು ನಿವಾಸಿ ದೋಗು ನಾಯ್ಕ ಎಂಬವರ ಪುತ್ರ ಸುಂದರ ನಾಯ್ಕ (21) ಹಾಗೂ ಬೆಳ್ತಂಗಡಿ ತಾಲೂಕು ಕಣಿಯೂರು ಗ್ರಾಮದ ಪಿಲಿಗೂಡು ನಿವಾಸಿ ಕೊರಗಪ್ಪ ನಾಯ್ಕ ಎಂಬವರ ಪುತ್ರ ಮಧುಸೂಧನ (24) ಎಂಬವರು ಮೃತಪಟ್ಟ ದುರ್ದೈವಿಗಳು.

ಮಧುಸೂಧನ ಉಜಿರೆ ಎಸ್.ಡಿ. ಎಂ. ಕಾಲೇಜಿನ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಯಾಗಿದ್ದಾರೆ. ತಂದೆ ತಾಯಿಗೆ ಏಕೈಕ ಪುತ್ರ. ಮೃತ ಸುಂದರ ನಾಯ್ಕ ಕೂಲಿ ಕಾರ್ಮಿಕನಾಗಿದ್ದು, ಮಂಗಳವಾರ ಸಂಜೆ ಕೆಲಸ ಮುಗಿಸಿಕೊಂಡು ಮನೆಗೆ ಹೋದವನು ತನ್ನ ಸ್ನೇಹಿತನ ಬೈಕ್ ತೆಗೆದುಕೊಂಡು ಅಣ್ಣನ ಹೆಂಡತಿಯ ಮನೆಯಾದ ಪಿಲಿಗೂಡಿಗೆ ಬಂದಿದ್ದರು. ಆಗ ಸಂಬಂಧಿಯಾಗಿರುವ ಮಧುಸೂಧನ ಓಡೀಲು ಜಾತ್ರಾ ಮಹೋತ್ಸವಕ್ಕೆ ಹೋಗುವ ಎಂದಿದ್ದ, ಅದರಂತೆ ಬೈಕಿನಲ್ಲಿ ಮಧುಸೂಧನನನ್ನು ಕುಳ್ಳಿರಿಸಿಕೊಂಡು ಓಡೀಲು ದೇವಸ್ಥಾನಕ್ಕೆ ಬರುವಾಗ ಮದ್ದಡ್ಕ ಕಿನ್ನಿಗೋಳಿ ಓಡೀಲು ರಸ್ತೆಯಲ್ಲಿ ದೇರೆಮಾರು ಎಂಬಲ್ಲಿ ಬರುತ್ತಿದ್ದಂತೆ ತಿರುವಿನಲ್ಲಿ ಬೈಕ್ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಆಗ ರಸ್ತೆ ಬದಿಯಲ್ಲಿ ತಡೆಗೋಡೆ ಇಲ್ಲದ ಪಾಳು ಕೆರೆಗೆ ಇಬ್ಬರು ಎಸೆಯಲ್ಪಟ್ಟು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಕೆರೆಯಲ್ಲಿ ಸುಮಾರು ಏಳು ಅಡಿಯಷ್ಟು ನೀರಿದ್ದು, ಬೈಕಿನಿಂದ ಎಸೆಯಲ್ಪಟ್ಟ ರಭಸಕ್ಕೆ ನೇರವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿರಬಹುದು ಎಂದು ಅಂದಾಜಿ ಸಲಾಗಿದೆ. ಮೃತ ಸುಂದರ ಈಜು ಕೂಡ ಬಲ್ಲವನಾಗಿದ್ದು, ಕೆಸರಿನಲ್ಲಿ ಮುಳುಗಿದ ಕಾರಣ ಮೇಲೆ ಬರಲು ಸಾಧ್ಯವಾಗಿಲ್ಲ ಎಂದು ಅಂದಾಜಿಸಲಾಗಿದೆ.

