ಸುಬ್ರಹ್ಮಣ್ಯ: ಸುಬ್ರಹ್ಮಣ್ಯ-ಸುಳ್ಯ ರಸ್ತೆ ಇಂಜಾಡಿ ಎಂಬಲ್ಲಿ ಮಂಗಳವಾರ ಕಾರು ಡಿಕ್ಕಿ ಹೊಡದು ಕಡವೆಯೊಂದು ಮೃತಪಟ್ಟಿದೆ. ಬನ್ನೇರು ಘಟ್ಟ ಸಮೀಪದ ಬಿಳೇಕಾ ಹಳ್ಳಿಯ ಯೋಗೇಂದ್ರಯ್ಯ ಕುಟುಂಬ ಸಮೇತರಾಗಿ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬಂದು ಮರಳುತ್ತಿದ್ದ ವೇಳೆ ಕ್ಷೇತ್ರದಿಂದ 2 ಕಿ.ಮೀ. ದೂರದ ಇಂಜಾಡಿ ಎಂಬಲ್ಲಿ ಕಡವೆಗೆ ಡಿಕ್ಕಿ ಹೊಡೆದಿದೆ. ಕಡವೆ ಕುಂಟುತ್ತಾ ಹೋಗಿ ಕಾಡಿನೊಳಗೆ ಸಾವನ್ನಪ್ಪಿದೆ. ಕಾರು ಹಾಗೂ ಚಾಲಕನನ್ನು ವಶಕ್ಕೆ ತೆಗೆದುಕೊಂಡು 1972ನೇ ವನ್ಯ ಜೀವಿ ಸಂರಕ್ಷಣಾ ಕಾಯ್ದೆಯಂತೆ ಅರಣ್ಯ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ. 
ಇದನ್ನು ಕಂಡ ಪ್ರತ್ಯಕ್ಷದರ್ಶಿಗಳು ಸುಬ್ರಹ್ಮಣ್ಯ ವಲಯ ಅರಣ್ಯ ಕಚೇರಿಗೆ ಮಾಹಿತಿ ನೀಡಿದ್ದು, ಅರಣ್ಯ ಸಿಬ್ಬಂದಿ ಸುಳ್ಯ ರಸ್ತೆ ಮಾವಿನಕಟ್ಟೆ ಕಾರನ್ನು ತಡೆದರು. ಆತನನ್ನು ಸ್ಥಳಕ್ಕೆ ಕರೆದುಕೊಂಡು ಬಂದಾಗ ತಪ್ಪೊಪ್ಪಿಕೊಂಡಿದ್ದು, 1972ನೇ ವನ್ಯಜೀವಿ ಸಂರಕ್ಷಣಾ ಕಾಯ್ದೆ ಕಲಂ 9 ಮತ್ತು 39ರಂತೆ ಪ್ರಕರಣ ದಾಖಲಿಸಲಾಯಿತು.
ಸುಬ್ರಹ್ಮಣ್ಯ ವಲಯ ಅರಣ್ಯ ಅಧಿಕಾರಿ ಮಂಜುನಾಥ ಎನ್. ಅವರು ಸುಳ್ಯ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದರು. ನ್ಯಾಯಾಲಯದ ಆದೇಶದಂತೆ ಶವವನ್ನು ಗುತ್ತಿಗಾರು ಪಶುವೈದ್ಯಾಧಿಕಾರಿಗಳು ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಕಲ್ಲಾಜೆ ಸಸ್ಯ ಕ್ಷೇತ್ರದ ಸಮೀಪ ಗ್ರಾಪಂ ಸಮಕ್ಷಮದಲ್ಲಿ ಕಡವೆಯನ್ನು ದಹನ ಮಾಡಲಾಗಿದೆ.
