ಬಂಟ್ವಾಳ: ತಾಲೂಕಿನ ಇತಿಹಾಸ ಪ್ರಸಿದ್ದ ಪಣೋಲಿಬೈಲು ಶ್ರೀ ಕಲ್ಲುರ್ಟಿ-ಕಲ್ಕುಡ ದೈವಸ್ಥಾನದಲ್ಲಿ ಪಾಕಶಾಲೆ, ಕಚೇರಿ ,ಅತಿಥಿಗೃಹ ವನ್ನೊಳಗೊಂಡ ಸುಮಾರು 2.01  ಕೋ.ರೂ.ವೆಚ್ಚದ ನೂತನ” ಶ್ರೀ ಪಣೋಲಿಬೈಲು ಕಲ್ಲರ್ಟಿ ಸಾನಿಧ್ಯ ಅನ್ನದಾನ ಸೇವಾ ಛತ್ರ” ಕಟ್ಟಡದ ಲೋಕಾರ್ಪಣೆ ಕಾರ್ಯಕ್ರಮವು ಸೋಮವಾರ ನಡೆಯಿತು.

ಶ್ರೀಧಾಮ ಮಾಣಿಲದ ಮೋಹನದಾಸ ಸ್ವಾಮೀಜಿ ಆಶೀರ್ವಚನಗೈದು, ಮನುಷ್ಯನ ಬದುಕು ಶಾಶ್ವತವಲ್ಲ, ಆದರೆ ಪಣೋಲಿಬೈಲು ತಾಯಿಯ ಶಕ್ತಿ ಮತ್ತು ಕ್ಷೇತ್ರದ ಮಹಿಮೆ ಶಾಶ್ವತವಾದುದು. ತುಳುನಾಡಿನಲ್ಲಿ ಆಚರಣೆಯಲ್ಲಿರುವ ಕಟ್ಟುಕಟ್ಟಳೆ, ಸಂಪ್ರದಾಯವನ್ನು ಉಳಿಸಿ,ಬೆಳೆಸುವ ಕಾರ್ಯ ಆಗಬೇಕು ಎಂದರು.

ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ,ಇತಿಹಾಸ ಪ್ರಸಿದ್ಧ ಪಣೋಲಿಬೈಲು ಕ್ಷೇತ್ರಕ್ಕಾಗಮಿಸುವ ಭಕ್ತರಿಗೆ ಊಟೋಪಚಾರ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ ನಿರ್ಮಿಸಿರುವ ಈ ಕಟ್ಟಡ ಕ್ಷೇತ್ರದ ಮೂಲಸೌಕರ್ಯ ಅಭಿವೃದ್ಧಿಗೆ ಮತ್ತೊಂದು ಮಹತ್ವದ ಸೇರ್ಪಡೆಯಾಗಿದೆ ಎಂದರು.

ಶಾಸಕ ರಾಜೇಶ್ ನಾಯ್ಕ ಉಳಿಪ್ಪಾಡಿಗುತ್ತು  ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಕ್ಷೇತ್ರಕ್ಕೆ ಆಗಮಿಸುವ ಭಕ್ತಾದಿಗಳ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಅನ್ನಛತ್ರವನ್ನು ನಿರ್ಮಿಸಲಾಗಿದೆ. ಪಣೋಲಿಬೈಲು ಪ್ರಸಿದ್ಧ ‘ಎ’ ದರ್ಜೆಯ ಧಾರ್ಮಿಕ ಕ್ಷೇತ್ರವಾಗಿದ್ದು, ಇಲ್ಲಿಗೆ ಬರುವ ಭಕ್ತರಿಗೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸುವುದು ನಮ್ಮ ಆದ್ಯತೆಯಾಗಿದೆ ಎಂದರು.

ಮಾಜಿ ಸಚಿವ ಬಿ. ರಮಾನಾಥ ರೈ ,ಕರ್ನಾಟಕ ಗೇರು ನಿಗಮದ ಅಧ್ಯಕ್ಷೆ ಡಿ.ಎಸ್  ಮಮತಾ ಗಟ್ಟಿ,ರಾಜ್ಯ ಧಾರ್ಮಿಕ ಪರಿಷತ್  ಸದಸ್ಯೆ ಮಲ್ಲಿಕಾ ಪಕ್ಕಳ,ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ದೇವಪ್ಪ ಕುಲಾಲ್ ಅವರು ಮಾತನಾಡಿದರು.

 ಗ್ಯಾರಂಟಿ ಯೋಜನಾ ಅನುಷ್ಠಾನ ಬಂಟ್ವಾಳ ತಾಲೂಕು ಸಮಿತಿ ಅಧ್ಯಕ್ಷೆ ಜಯಂತಿ ಪೂಜಾರಿ, ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬೇಬಿ ಕುಂದರ್,ಸಜೀಪ ಮಾಗಣೆ ತಂತ್ರಿಗಳಾದ ಎಂ. ಸುಬ್ರಹ್ಮಣ್ಯ ಭಟ್ ,ಕ್ಷೇತ್ರದ‌ಮೂಲ್ಯಣ್ಣರಾದ ವಾಸುದೇವ ಮೂಲ್ಯ, ಪಣೋಲಿಬೈಲು  ದೈವಸ್ಥಾನದ ಆಡಳಿತಾಧಿಕಾರಿ,ತಹಶೀಲ್ದಾರ್ ಜಿ.ಮಂಜುನಾಥ್ , ಕಾರ್ಯನಿರ್ವಹಣಾಧಿಕಾರಿ ದಿವಾಕರ ಮುಗುಳ್ಯ ,  ವೇದಿಕೆಯಲ್ಲಿದ್ದರು.

ಇದೇ ವೇಳೆ ಕಟ್ಟಡ ನಿರ್ಮಾಣದಲ್ಲಿ ಸಹಕರಿಸಿದ ಹಾಗೂ ದಾನಿಗಳನ್ನು ಅಭಿನಂದಿಸಲಾಯಿತು. ಮಾಗಣೆಯ ಗುತ್ತುಮನೆತನದವರು ಉಪಸ್ಥಿತರಿದ್ದರು.

ಉದ್ಯಮಿ ನಗ್ರಿಗುತ್ತು ವಿವೇಕಶೆಟ್ಟಿ ಪ್ರಸ್ತಾವಿಸಿ, ಸ್ವಾಗತಿಸಿದರು.ಗಿರೀಶ್ ಪೂಜಾರಿ ಪೆರ್ವ ವಂದಿಸಿದರು.ಶಿಕ್ಷಕ ಶಿವಪ್ರಸಾದ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ನ.25 ರಂದು ಕ್ಷೇತ್ರದಲ್ಲಿ ರಾತ್ರಿ ವರ್ಷಾವಧಿ ದೈವಗಳ ಕೋಲ ನಡೆಯಲಿದೆ.

By Suddi9