ಬಂಟ್ವಾಳ :ನಿಯಮಬಾಹಿರವಾಗಿ ಕಾರ್ಯಾಚರಿಸುತ್ತಿರುವ ಬ್ರಹ್ಮರಕೂಟ್ಲು ವಿನಲ್ಲಿ ಟೋಲ್ ಗೇಟನ್ನು ಎಲ್ಲರೂ ವಿರೋದಿಸುವವರೇ ಹೊರತು ಸಮರ್ಥಿಸುವವರು ಯಾರೂ ಇಲ್ಲ ಎಂದು ಮಾಜಿ ಸಚಿವ, ಬ್ರಹ್ಮರಕೂಟ್ಲು ಟೋಲ್ ಗೇಟ್ ತೆರವು ಹೋರಾಟ ಸಮಿತಿಯ ಗೌರವಾಧ್ಯಕ್ಷ ಬಿ ರಮಾನಾಥ ರೈ ಹೇಳಿದ್ದಾರೆ.

ಬ್ರಹ್ಮರಕೂಟ್ಲು ಟೋಲ್ ಗೇಟ್ ತೆರವು ಹೋರಾಟ ಸಮಿತಿ ಹಾಗೂ ಸಮಾನ ಮನಸ್ಕ ಸಂಘಟನೆಗಳ ಜಂಟಿ ಆಶ್ರಯದಲ್ಲಿ ಮಂಗಳವಾರ ಬೆಳಿಗ್ಗೆ ಆರಂಭಗೊಂಡ ಹಗಲು-ರಾತ್ರಿ ಧರಣಿಗೆ ಚಾಲನೆ ನೀಡಿ ಮಾತನಾಡಿದ ಅವರು, ನೆರೆ ವಿಮೋಚನಾ ರಸ್ತೆಯಲ್ಲಿ ಸುಂಕ ವಸೂಲಿ ಮಾಡುವ ಜಗತ್ತಿನ ಏಕೈಕ ಟೋಲ್ ಗೇಟ್ ಇದ್ದರೆ ಅದು ಬ್ರಹ್ಮರಕೂಟ್ಲು ಟೋಲ್ ಗೇಟ್ ಮಾತ್ರ ಎಂದು ಲೇವಡಿ ಮಾಡಿದರು.
ಈ ಟೋಲ್ ಗೇಟ್ ಸಂಪೂರ್ಣ ಅವ್ಯವಸ್ಥೆಯಿಂದ ಕೂಡಿದ್ದು, ಟೋಲ್ ವಸೂಲಾತಿ ಕೇಂದ್ರದಲ್ಲಿ ಯಾವುದೇ ವ್ಯವಸ್ಥೆಗಳೂ ಸಮರ್ಪಕವಾಗಿ ಇಲ್ಲ. ಕೇಂದ್ರ ಹೆದ್ದಾರಿ ಇಲಾಖೆಯ ಅಂತರದ ನಿಯಮವೂ ಇಲ್ಲಿ ಪಾಲನೆಯಾಗದಿದ್ದು, ಇದು ಕೇವಲ ವಸೂಲಿ ಕೇಂದ್ರವಾಗಿ ಮಾತ್ರ ಕಾರ್ಯನಿರ್ವಹಿಸುತ್ತಿದೆ ಎಂದು ಆರೋಪಿಸಿದರು.
ಬೆಳ್ತಂಗಡಿ ಹಾಗೂ ಉಪ್ಪಿನಂಗಡಿ ಕಡೆಯಿಂದ ಮಂಗಳೂರಿಗೆ ತೆರಳುವ ಪ್ರಯಾಣಿಕರು ಎರಡು ಕಡೆ ಟೋಲ್ ಕಟ್ಟುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದ ರಮಾನಾಥ ರೈ ಅವರು ಹೆದ್ದಾರಿ ಪ್ರಾಧಿಕಾರದ ದುರ್ನಡತೆ ಹದ್ದು ಮೀರುತ್ತಿದೆ.ಟೋಲ್ ವಿರುದ್ದ ಹೋರಾಟಗಳು ಹೆಚ್ಚುತ್ತಿದ್ದರೂ ಹೆದ್ದಾರಿ ಇಲಾಖೆ ಇನ್ನೂ ಜನರ ತಾಳ್ಮೆ ಪರೀಕ್ಷಿಸುತ್ತಿದೆ. ನಾವು ಕೂಡಾ ಏಕಾ ಏಕಿ ಅನಿರ್ದಿಷ್ಟಾವಧಿ ಹೋರಾಟಕ್ಕೆ ಇಳಿದಿಲ್ಲ. ಕಾನೂನು ಹಾಗೂ ನಿಯಮಗಳಿಗೆ ಗೌರವ ಕೊಟ್ಟು ಹಂತ ಹಂತವಾಗಿ ಹೋರಾಟ ರೂಪಿಸುತ್ತಿದ್ದು, ಹೆದ್ದಾರಿ ಇಲಾಖೆ ಹದ್ದು ಮೀರಿದರೆ ಮುಂದಿನ ದಿನಗಳಲ್ಲಿ ನಮ್ಮ ಹೋರಾಟಗಳು ಇನ್ನಷ್ಟು ತೀವ್ರಗೊಳ್ಳಲಿದೆ ಎಂದು ಎಚ್ಚರಿಸಿದರು.
ಯುವ ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ಮಿಥುನ್ ರೈ ಮಾತನಾಡಿ, ಬ್ರಹ್ಮರಕೂಟ್ಲು ಟೋಲ್ ಗೇಟ್ ನ ಜನನ ಯಾವಾಗ ಆದರೂ ಪರವಾಗಿಲ್ಲ ಆದರೆ ಯಾವಾಗ ಉಪ್ಪಿನಂಗಡಿ – ವಳಾಲಿನಲ್ಲಿ ಸುಂಕ ವಸೂಲಾತಿ ಆರಂಭ ವಾಗುತ್ತದೋ ಅಂದು ಖಂಡಿತಾ ಬ್ರಹ್ಮರಕೂಟ್ಲು ಟೋಲ್ ಗೇಟ್ ನ ಮರಣ ಸಂಭವಿಸುತ್ತದೆ. ಇದಕ್ಕೆ ಯಾವುದೇ ರೀತಿಯ ಸಂಶಯ ಬೇಡ ಎಂದರು.
ರಾಜ್ಯ ರೈತ ಸಂಘದ ರೂಪೇಶ್ ಮಾತನಾಡಿ ಸುಂಕ ವಸೂಲಾತಿ ಕೇಂದ್ರದಲ್ಲಿ ಸುಂಕ ಪಾವತಿ ಮಾಡದೇ ಅಸಹಕಾರ ಚಳುವಳಿಗೆ ಜನತೆ ಮುಂದಾಗಬೇಕು ಎಂದು ಕರೆ ನೀಡಿದರು.
ಬ್ರಹ್ಮರಕೂಟ್ಲು ಟೋಲ್ ಗೇಟ್ ತೆರವು ಹೋರಾಟ ಸಮಿತಿ ಸಂಚಾಲಕ ಮೋಹನ್ ಶೆಟ್ಟಿ ಪಂಜಿಕಲ್ಲು ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಮಮತಾ ಗಟ್ಟಿ, ಶಾಲೆಟ್ ಪಿಂಟೋ, ಚಂದ್ರ ಪ್ರಕಾಶ್ ಶೆಟ್ಟಿ ತುಂಬೆ, ಅಶ್ವಿನಿ ಕುಮಾರ್ ರೈ, ಅಬ್ಬಾಸ್ ಅಲಿ, ಉಷಾ ಅಂಚನ್, ಭಾರತಿ ಪ್ರಶಾಂತ್ ಮೊದಲಾದವರು ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದರು.
ಪಿಯೂಷ್ ಎಲ್ ರೋಡ್ರಿಗಸ್, ಚಂದ್ರಶೇಖರ ಭಂಡಾರಿ, ಬಾಲಕೃಷ್ಣ ಅಂಚನ್, ಪದ್ಮನಾಭ ರೈ, ಲುಕ್ಮಾನ್ ಬಂಟ್ವಾಳ, ಸುದೀಪ್ ಕುಮಾರ್ ಶೆಟ್ಟಿ, ಬೇಬಿ ಕುಂದರ್, ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ,
ಸುಧಾಕರ ಶೆಣೈ ಖಂಡಿಗ, ಸುರೇಶ್ ಕುಮಾರ್ ನಾವೂರ, ಉಮೇಶ್ ಬೋಳಂತೂರು, ಪದ್ಮಶೇಖರ ಜೈನ್, ಮಾಯಿಲಪ್ಪ ಸಾಲ್ಯಾನ್, ಸುದರ್ಶನ ಜೈನ್, ಐಡಾ ಸುರೇಶ್, ಜಯಂತಿ ಪೂಜಾರಿ,ಬೊಂಡಾಲ ಚಿತ್ತರಂಜನ್ ಶೆಟ್ಟಿ, ಸದಾಶಿವ ಬಂಗೇರ, ಮುಹಮ್ಮದ್ ನಂದಾವರ, ವೆಂಕಪ್ಪ ಪೂಜಾರಿ, ಲವೀನಾ ವಿಲ್ಮಾ ಮೊರಾಸ್ ಜೋಸ್ಮಿನ್ ಡಿಸೋಜ ಮೊದಲಾದವರು ಉಪಸ್ಥಿತರಿದ್ದರು.
ಸಮಾನ ಮನಸ್ಕ ಸಂಘಟನೆಗಳ ಸಮನ್ವಯ ಸಮಿತಿ ಕಾರ್ಯದರ್ಶಿ ಸುರೇಶ್ ಕುಮಾರ್ ಸ್ವಾಗತಿಸಿ, ಸಂಚಾಲಕ ಬಿ.ಶೇಖರ್ ಕಾರ್ಯಕ್ರಮ ನಿರೂಪಿಸಿದರು.
