ಬಂಟ್ವಾಳ:ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ಕೆ 2020, ‘ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣಾ ಕಾಯ್ದೆ-2022’ ನ್ನು ಮುಂಬರುವ ಬೆಳಗಾವಿ ಅಧಿವೇಶನದಲ್ಲಿ ಸರಕಾರ ಹಿಂಪಡೆಯುವ ನಿರ್ಧಾರ ಕೈಗೊಂಡಲ್ಲಿ ವಿಶ್ವ ಹಿಂದೂ ಪರಿಷದ್,ಬಜರಂಗದಳ ಬೃಹತ್ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಲ್ಲದೆ ಜೊತೆಗೆ ಅಲ್ಪಸಂಖ್ಯಾತರ ನಿರ್ದೇಶನಾಲಯದಿಂದ ಕರೆಯಲಾಗಿರುವ ಪ್ರತ್ಯೇಕ ಸೇನಾ ತರಬೇತಿ ಟೆಂಡರ್ ಅನ್ನು ತಕ್ಷಣವೇ ರದ್ದುಗೊಳಿಸಬೇಕೆಂದು ಆಗ್ರಹಿಸಿದೆ.

ಈ ಕುರಿತು ಸೋಮವಾರ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ವಿ.ಹಿಂ.ಪ.ಬಂಟ್ವಾಳ ಪ್ರಖಂಡದ ಅಧ್ಯಕ್ಷರು,ನ್ಯಾಯವಾದಿ ಪ್ರಸಾದ್ ಕುಮಾರ್ ರೈ ಅವರು ಮತಾಂತರ ನಿಷೇಧ ಕಾಯ್ದೆ, ಗೋಹತ್ಯೆ ನಿಷೇಧ ಪ್ರತಿಬಂಧಕ ಕಾನೂನು ವಾಪಸು ಪಡೆಯದಂತೆ ಹಾಗೂ ಅಲ್ಪಸಂಖ್ಯಾತರ ನಿರ್ದೇಶನಾಲಯದಿಂದ ಕರೆಯಲಾಗಿರುವ ಪ್ರತ್ಯೇಕ ಸೇನಾ ತರಬೇತಿ ಟೆಂಡರ್ ಅನ್ನು ತಕ್ಷಣವೇ ರದ್ದುಗೊಳಿಸುವಂತೆ ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್ ವತಿಯಿಂದ ಜಿಲ್ಲಾಧಿಕಾರಿಗಳು, ತಹಶೀಲ್ದಾರ್ ಮೂಲಕ ರಾಜ್ಯಪಾಲರು, ಮುಖ್ಯಮಂತ್ರಿಗಳು ಮತ್ತು ರಾಜ್ಯ ಸರ್ಕಾರದ ಮುಖ ಕಾರ್ಯದರ್ಶಿಗಳಿಗೆ ಮನವಿಯನ್ನು ಸಲ್ಲಿಸಲಾಗಿದೆ ಎಂದರು.
ನ. 12 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಕೆಲವು ಸಂಘಟನೆಗಳು ರಾಜ್ಯದಲ್ಲಿ ಜಾರಿಯಲ್ಲಿರುವ ಮತಾಂತರ ನಿಷೇಧ ಕಾಯ್ದೆ ಮತ್ತು ಗೋಹತ್ಯೆ ನಿಷೇಧ ಕಾಯ್ದೆಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ನಡೆದ ಪ್ರತಿಭಟನೆಗೆ ಮಣಿದು ಕೆಪಿಸಿಸಿ ಅಧ್ಯಕ್ಷರು ಡಿ. 2ರಿಂದ ಬೆಳಗಾವಿಯಲ್ಲಿ ಆರಂಭವಾಗಲಿರುವ ವಿಧಾನಮಂಡಲದ ಚಳಿಗಾಲದ ಅಧಿವೇಶನದಲ್ಲಿ ಮತಾಂತರ ವಿಷೇದ ಕಾಯ್ದೆಯನ್ನು ಹಿಂಪಡೆಯುವ ಹೇಳಿಕೆಯನ್ನು ನೀಡಿದ್ದು, ಇದನ್ನು ವಿಶ್ವ ಹಿಂದೂ ಪರಿಷತ್ ,ಬಜರಂಗದಳ ತೀವ್ರವಾಗಿ ಖಂಡಿಸುತ್ತದೆ ಎಂದರು.
‘ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣಾ ಕಾಯ್ದೆ-2022’ ಯಾವುದೇ ನಿರ್ದಿಷ್ಟ ಧರ್ಮವನ್ನು ಗುರಿಯಾಗಿಸಿಕೊಂಡಿಲ್ಲ ಬಲವಂತ, ವಂಚನೆ, ಆಮಿಷ ಅಥವಾ ದಾರಿ ತಪ್ಪಿಸಿ ಮಾಡುವ ಕಾನೂನುಬಾಹಿರ ಮತಾಂತರಗಳನ್ನು ಮಾತ್ರ ತಡೆಯುತ್ತದೆ. ಮಧ್ಯಪ್ರದೇಶ ಸರ್ಕಾರದ ಮೊಕದ್ದಮೆಯಲ್ಲಿ ಸುಪ್ರೀಂ ಕೋರ್ಟು ಕೂಡ ಬಲವಂತವಾಗಿ ಮತಾಂತರ ಮಾಡುವ ಹಕ್ಕು ಮೂಲಭೂತ ಹಕ್ಕಲ್ಲ ಎಂದು ತೀರ್ಪು ನೀಡಿದೆ. ಈ ಹಿಂದೆ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರವೇ ಈ ಕಾಯ್ಕೆ ತಂದಿತ್ತು, ಹೀಗಿರುವಾಗ ಕರ್ನಾಟಕ ಸರ್ಕಾರ ಸಂಘಟನೆಗಳ ಒತ್ತಡಕ್ಕೆ ಮಣಿದು ಸಮಾಜದ ಸಾಮರಸ್ಯ ಕದಡುವ ನಿರ್ಧಾರ ಕೈಗೊಳ್ಳಬಾರದು ಎಂದು ಅವರು ಆಗ್ರಹಿಸಿದರು.
ಭಾರತೀಯ ಕೃಷಿ ಪದ್ಧತಿಯ ಬೆನ್ನೆಲುಬಾಗಿರುವ ಗೋವು ಬಹುಸಂಖ್ಯಾತ ಹಿಂದೂಗಳ ಪವಿತ್ರ ಭಾವನೆ-ಪ್ರತೀಕವಾಗಿದೆ. ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ-2020 ರೈತರ ಹಿತಾಸಕ್ತಿ ಹಾಗ ಪಶುಸಂಪತ್ತಿನ ರಕ್ಷಣೆಗೆ ಅತ್ಯಗತ್ಯವಾಗಿದೆ. ಪ್ರಸ್ತುತ ರಾಜ್ಯದಲ್ಲಿ ಜಾರಿಯಲ್ಲಿರುವ ಈ ಕಾಯ್ಕೆಯಿಂದ ಸಾವಿರಾದ ಗೋವುಗಳ ರಕ್ಷಣೆಯಾಗಿದ್ದು ಗೋಕಳ್ಳರು ಹಾಗೂ ಅಕ್ರಮ ಗೋಸಾಗಾಟಗಾರರಿಗೆ ಕಡಿವಾಣ ಬಿದ್ದಿದೆ. ಆದರೆ ಕೇವಲ ತುಷ್ಠೀಕರಣದ ರಾಜಕಾರಣಕ್ಕಾಗಿ ಈ ಕಾಯ್ದೆಯನ್ನು ದುರ್ಬಲಗೊಳಿಸಲು ಸರ್ಕಾರ ಹುನ್ನಾರ ನಡೆಸುತ್ತಿರುವುದನ್ನು ವಿ.ಹಿಂ.ಪ ತೀವ್ರವಾಗಿ ಖಂಡಿಸುತ್ತದೆಯಲ್ಲದೆ ಈ ಕಾಯ್ದೆಯನ್ನು ಹಿಂಪಡೆಯುವುದು ಅಥವಾ ದುರ್ಬಲಗೊಳಿಸುವುದರಿಂದ ರಾಜ್ಯದಲ್ಲಿ ಅನಗತ್ಯ ಕೋಮು ಸಂಘರ್ಷಕ್ಕೆಕ್ಕೆ ದಾರಿ ಮಾಡಿಕೊಟ್ಟಾಂತಾಗುತ್ತದೆ ಎಂದು ಪ್ರಸಾದ್ ಕುಮಾರ್ ಎಚ್ಚರಿಸಿದರು.
ಈ ನಡುವೆ ರಾಜ್ಯ ಸರ್ಕಾರದ ಅಲ್ಪಸಂಖ್ಯಾತರ ನಿರ್ದೇಶನಾಲಯವು 2026-27ನೇ ಸಾಲಿನಲ್ಲಿ ಕೇವಲ ಅಲ್ಪ ಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಮಾತ್ರ 60 ದಿನಗಳ ಸೇನಾ ತರಬೇತಿ ನೀಡಲು ಅಲ್ಪಾವಧಿ ಟೆಂಡರ್ ಕರೆದಿರುವುದನ್ನು ವಿ.ಹಿಂ.ಪ. ತೀವ್ರವಾಗಿ ಖಂಡಿಸುತ್ತದೆ. ಸಾರ್ವಜನಿಕರ ತೆರಿಗೆ ಹಣವನ್ನು ಬಳಸಿ ಕೇವಲ ಒಂದು ಧಾರ್ಮಿಕ ಗುಂಪಿಗೆ ತರಬೇತಿ ನೀಡಿ, ಹಿಂದೂ ಸೇರಿದಂತೆ ಇತರೆ ಸಮುದಾಯಗಳ ಅರ್ಹ ಬಡ ವಿದ್ಯಾರ್ಥಿಗಳನ್ನು ಹೊರಗಿಡುವುದು ಸಂವಿಧಾನದ ವಿಧಿ 14 ಹಾಗೂ ವಿಧಿ 15(1)ಸ್ಪಷ್ಟ ಉಲ್ಲಂಘನೆಯಾಗಿದೆ. ಭಾರತೀಯ ಸೇನೆಯ ಹೆಸರಿನಲ್ಲಿ ಯುವಜನರನ್ನು ಧಾರ್ಮಿಕ ಆಧಾರದ ಮೇಲೆ ವಿಭಜಿಸುವುದು ಹಾಗೂ ಸೇನೆಯ ಮೇಲ್ವಿಚಾರಣೆ ಇಲ್ಲದೆ ಖಾಸಗಿ ಸಂಸ್ಥೆಗಳ ಮೂಲಕ ತರಬೇತಿ ನೀಡುವುದು ರಾಷ್ಟ್ರೀಯ ಭದ್ರತೆಗೆ ಗಂಭೀರ ಅಪಾಯ ತಂದೊಡ್ಡುವ ಸಾಧ್ಯತೆ ಇದೆ ಎಂದರು.
ಸರ್ಕಾರಕ್ಕೆ ನಿಜವಾಗಿಯೂ ಬಡ ವಿದ್ಯಾರ್ಥಿಗಳಿಗೆ ನೆರವಾಗುವ ಉದ್ದೇಶವಿದ್ದಲ್ಲಿ, ಧರ್ಮದ ಬದಲಾಗಿ ‘ಆರ್ಥಿಕ ಹಿಂದುಳಿದಿರುವ ಮಾನದಂಡದ ಅಧಾರದಲ್ಲಿ ಶಾಲಾ-ಕಾಲೇಜುಗಳ ಹಾಗೂ ಅಧಿಕೃತ ಎನ್ ಸಿ ಸಿ ಮೂಲಕ ಎಲ್ಲಾ ಸಮುದಾಯದ ವಿದ್ಯಾರ್ಥಿಗಳಿಗೆ ಸಮಾನವಾದ ತರಬೇತಿ ನೀಡಬೇಕು ಎಂದು ಪ್ರಸಾದ್ ಕುಮಾರ್ ರೈ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಸಂತೋಷ್ ಸರಪಾಡಿ,ಲೋಹಿತ್ ಪಣೋಲಿಬೈಲ್,ಕೇಶವ ದೈಪಲ,ಸಂದೇಶ್ ಕಾಡಬೆಟ್ಟು ಉಪಸ್ಥಿತರಿದ್ದರು.
