ಬಂಟ್ವಾಳ:ವಿದ್ಯುತ್‌ ಟ್ರಾನ್ಸ್‌ಫಾರ್ಮ‌ ರ್ ಗಳಲ್ಲಿ ಕೃಷಿ ಮಾಡಲು ಅನುಮತಿ ನೀಡಿ ಎಂಬ ಮನವಿ ಬಂಟ್ವಾಳದಲ್ಲಿ  ನಡೆದ ಮೆಸ್ಕಾಂ ಜನಸಂಪರ್ಕ ಸಭೆಯಲ್ಲಿ  ವಿಶೇಷ ಗಮನಸೆಳೆಯಿತು.


ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪನಿಯ ಬಂಟ್ವಾಳ ನಂ.1, ನಂ.2 ಉಪವಿಭಾಗ ವ್ಯಾಪ್ತಿಯ ಜನಸಂಪರ್ಕ ಸಭೆಯಲ್ಲಿ ಲಕ್ಷ್ಮೀನಾರಾಯಣ ಜಕ್ರಿಬೆಟ್ಟು ಅವರು ಮನವಿ ನೀಡಿ ,ಈಗಾಗಲೇ ಈ ವಿಭಾಗ ವ್ಯಾಪ್ತಿಗೆ ಬರುವ ಉಪವಿಭಾಗ, ಶಾಖಾ ವ್ಯಾಪ್ತಿಯ ಕಂಬಗಳಲ್ಲಿ, ಟ್ರಾನ್ಸ್‌ಫಾರ್ಮರ್ ಗಳು ಪೊದೆಯಿಂದ ಅವರಿಸಿದ್ದು, ಕೃಷಿ ಉತ್ಪನ್ನಗಳಾದ ಕರಿಮೆಣಸು ಬಳ್ಳಿಗಳನ್ನು ಕಂಬಗಳಿಗೆ ಹಾಗೂ ಹರಿವೆಸೊಪ್ಪುಗಳನ್ನು ಟಿ.ಸಿ ಕುಂಟದಲ್ಲಿ ನೆಡಲು ಅನುಮತಿ ನೀಡಬೇಕಾಗಿ ಕೋರಿದರು.


ಹಿಂದಿನ ಸಭೆಯಲ್ಲಿ ಕಂಬಗಳಲ್ಲಿ ಬಳ್ಳಿ ಹಾಗೂ ಟಿಸಿಗಳ ಸಮೀಪ ಪೊದೆಗಳು ಇರುವುದರ ಕುರಿತು ಅವರು ಗಮನ ಸೆಳೆದಿದ್ದು, ಅದಿನ್ನೂ ತೆರವಾಗದ ಹಿನ್ನೆಲೆಯಲ್ಲಿ ಮತ್ತೊಮ್ಮೆ  ಅಧಿಕಾರಿಗಳ ಗಮನಸೆಳೆಯಲು ಲಕ್ಷ್ಮೀ ನಾರಾಯಣ ಅವರು  ಜನಸಂಪರ್ಕ ಸಭೆಯಲ್ಲಿ ಮನವಿ ಮಾಡಿದರು.


ಸರಪಾಡಿಯಲ್ಲಿ ಇಕ್ಕಟ್ಟಾದ ರಸ್ತೆ, ಶಾಲೆ ಇರುವ ಜಾಗ ಹಾಗೂ ವಾಹನಗಳು ತಿರುಗಲೂ ಸಾಧ್ಯವಾಗದಂತೆ ವಿದ್ಯುತ್ ಕಂಬಗಳನ್ನು ಹಾಕುವುದರಿಂದ ಸಮಸ್ಯೆ ಉಂಟಾಗುತ್ತದೆ. ಕಂಬ ಹಾಕುವ ಮೊದಲೇ ಸಂಬಂಧಪಟ್ಟವರಿಗೆ ಮಾಹಿತಿ ನೀಡಿ ಎಂದು ಸರಪಾಡಿ ಧನಂಜಯ ಶೆಟ್ಟಿ ಹೇಳಿದರು.ಸೂಪರಿಂಟೆಂಡೆಂಟ್ ಎಂಜಿನಿಯರ್ ಕೃಷ್ಣರಾಜ್ ಮಾತನಾಡಿ, ಪೊದೆ, ಬಳ್ಳಿ ತೆರವು ಮಾಡಲು ಶ್ರೀಘ್ರ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಸರಪಾಡಿಗೆ ಪವರ್‌ಮ್ಯಾನ್ ನೀಡಿ:

ಸರಪಾಡಿಗೆ ಪವರ್‌ಮ್ಯಾನ್ ಒದಗಿಸುವಂತೆ ಹಾಗೂಸರಪಾಡಿಯಲ್ಲಿ ಈಗಾಗಲೇ ಮೆಸ್ಕಾಂಗೆ ಜಾಗ ಕಾದಿರಿಸಿ ಹಲವು ವರ್ಷಗಳು ಕಳೆದರೂ ಅದನ್ನು ಉಳಿಸಿಕೊಳ್ಳಿ ಎಂದು ಧನಂಜಯ ಶೆಟ್ಟಿ ಹಾಗೂ ಶಶಿಕಾಂತ ಶೆಟ್ಟಿ ಮನವಿ ಮಾಡಿದರು.

ಬೋಳಂಗಡಿ ಕೋಡಿ ಎಂಬಲ್ಲಿ ವೋಲ್ಟೇಜ್ ಕೊರತೆ ಇರುವ ಕುರಿತು ಸತೀಶ್ ಮೆಲ್ಕಾರ್ ಗಮನ ಸೆಳೆದರು. ಮೆಲ್ಕಾರಿನ ರೆಂಗೇಲು ಎಂಬಲ್ಲಿ ತಂತಿಗಳು ದುರ್ಬಲವಾಗಿವೆ. ಇಲ್ಲಿಯೂ ಮೆಸ್ಕಾಂಗೆ ಸ್ವಂತ ಕಟ್ಟಡವಾಗಬೇಕು ಎಂದು ಸತೀಶ್ ಹೇಳಿದರು.

ಅಮ್ಮೂರು ಚರ್ಚ್ ಹಾಲ್ ಬಳಿ ಟಿಸಿಯನ್ನು ಸ್ಥಳಾಂತರ ಮಾಡಬೇಕು ಎಂದು ಸ್ಥಳೀಯರಾದ ಮೊಹಮ್ಮದ್ ಒತ್ತಾ ಯಿಸಿದರು. ತಲಪಾಡಿ ಬೈಕಂಡಿ ಬಳಿ ಪದೇಪದೆ ಅಪಘಾತವಾಗುತ್ತಿರುವ ಕುರಿತು ಸಲೀಂ ಗಮನ ಸೆಳೆದು, ತನ್ನ ತಾಯಿಯೂ ಅಲ್ಲಿ ಮೃತಪಟ್ಟಿರುವ ಕುರಿತು ತಿಳಿಸಿದರು. ಅಲ್ಲಿ ರಸ್ತೆ ಸ್ಪೀಡ್ ಬ್ರೇಕರ್ ಜತೆಗೆ ವಿದ್ಯುದ್ದೀಪವೂ ಬೇಕಾ ಗಿದೆ. ವಿದ್ಯುತ್ ಕಂಬ ಅಳವಡಿಸಲು ವಿಳಂಬ ಮಾಡದಂತೆ ಸಲೀಂ ಮನವಿ ಮಾಡಿದರು. ಕಚೇರಿಗೆ ಬಯೋಮೆಟ್ರಿಕ್, ಸಿಸಿ ಟಿವಿ ಅಳವಡಿಕೆ, ಸಿಬ್ಬಂದಿ ಕೊರತೆ, ವಾಹನಗಳಲ್ಲಿ ಮೆಸ್ಕಾಂ ಎಂಬ ಹೆಸರು ಹಾಕಿ ದುರ್ಬಳಕೆ ಮಾಡುವ ಕುರಿತು ಲಕ್ಷ್ಮೀನಾರಾಯಣ ಗಮನ ಸೆಳೆದರು.
ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಜಯಂತಿ ವಿ. ಪೂಜಾರಿ, ಎಕ್ಸಿಕ್ಯುಟಿವ್ ಎಂಜಿನಿಯರ್ ಸಂತೋಷ್ ನಾಯಕ್, ಎಇಇಗಳಾದ ನಾರಾಯಣ ಭಟ್, ಸುಬ್ರಹ್ಮಣ್ಯ ಪ್ರಸಾದ್ ಉಪಸ್ಥಿತರಿದ್ದರು

By Suddi9