ಪೊಳಲಿ:ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ದ.ಕ. ಜಿಲ್ಲೆ ಹಾಗೂ ದ.ಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಮಂಗಳೂರು ಇವರ ಸಹಭಾಗಿತ್ವದಲ್ಲಿ ಅ. ೨೪ರಂದು ಪೊಳಲಿ ದೇವಸ್ಥಾನದ ವಠಾರದಲ್ಲಿ ಮಿಶ್ರತಳಿ ಹೆಣ್ಣು ಕರುಗಳ ಪ್ರದರ್ಶನ ಮತ್ತು ಮಾಹಿತಿ ಕಾರ್ಯಗಾರ ನಡೆಯಿತು.

ದೇವಸ್ಥಾನದಲ್ಲಿ ನಡೆದ ಗೋಪೂಜೆ ಬಳಿಕ ಆಯೋಜಿಸಲಾದ ಸಭಾ ಕಾರ್ಯಕ್ರಮ ಉದ್ಘಾಟಿಸಿದ ಬಂಟ್ವಾಳ ಶಾಸಕ ರಾಜೇಶ್ ನಾÊಕ್ ಅವರು ಮಾತನಾಡಿ, ಕೃಷಿಯಿಂದ ದೂರವಾಗುತ್ತಿರುವ ಈ ಕಾಲಘಟ್ಟದಲ್ಲಿ ದ.ಕ ಜಿಲ್ಲೆಯಲ್ಲಿ ಹೈನುಗಾರಿಕೆಗೆ ಪ್ರೋತ್ಸಾಹ ನೀಡುವ ಕೆಲಸಗಳಾಗಬೇಕಿದೆ. ಗ್ರಾಮೀಣ ಪ್ರದೇಶದ ಪ್ರತಿಯೊಂದು ಮನೆಯಲ್ಲಿ ಕಿನಿಷ್ಠ ಒಂದಾದರೂ ಹಸು ಸಾಕಬೇಕು. ಹೈನುಗಾರಿಕೆಯಿಂದ ಆದಾಯವಿದೆ ; ನಷ್ಟವಿಲ್ಲ ಎಂದರು.

ಬೆಳ್ತಂಗಡಿಯ ಪಶು ಆಸ್ಪತ್ರೆಯ ಮುಖ್ಯ ಪಶುವೈದ್ಯಾಧಿಕಾರಿ(ಆಡಳಿತ) ಡಾ. ರವಿ ಕುಮಾರ್ ಎಂ., ಅವರು `ವೈಜ್ಞಾನಿಕ ರೀತಿಯಲ್ಲಿ ಕರುಗಳ ಪೋಷಣೆ ಮತ್ತು ಹೈನುಗಾರಿಕೆಯಲ್ಲಿ ಹಸಿರು ಮೇವಿನ ಮಹತ್ವ’ ಕುರಿತು ಹಾಗೂ ಬಂಟ್ವಾಳ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರೂ ಆಗಿರುವ ಜೋ. ಪ್ರದೀಪ್ ಡಿ’ಸೋಜ ಅವರು ರೈತರಿಗೆ ತೋಟಗಾರಿಕೆ ಮಾಹಿತಿ ನೀಡಿದರು.
ವಿಟ್ಲದ ಮುಖ್ಯ ಪಶು ವೈದ್ಯಾಧಿಕಾರಿ ಡಾ. ಅವಿನಾಶ್ ಭಟ್ ಸ್ವಾಗತಿಸಿದರು. ಕಳ್ಳಿಗೆಯ ಪಶು ಸಖಿ ಪ್ರಾರ್ಥನೆಗೈದರು. ದಕ ಹಾಲು ಒಕ್ಕೂಟ ನಿರ್ದೇಶಕಿ ಸವಿತಾ ಎನ್. ಶೆಟ್ಟಿ, ದಕ ಹಾಲು ಒಕ್ಕೂಟದ ನಿರ್ದೇಶಕ ನಂದರಾಮ ರೈ, ಶ್ರೀ ಕ್ಷೇತ್ರ ಪೊಳಲಿಯ ಆಡಳಿತ ಮೊಕ್ತೇಸರ ಡಾ. ಎಂ. ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು, ಕರಿಯಂಗಳ ಗ್ರಾಪಂ ಆಡಳಿತಾಧಿಕಾರಿ ಜೋ. ಪ್ರದೀಪ್ ಡಿ’ಸೋಜ, ಶ್ರೀ ಕ್ಷೇತ್ರ ಪೊಳಲಿಯ ಕಾರ್ಯನಿರ್ವಹಣಾಧಿಕಾರಿ ಚಂದ್ರಮೋಹನ್, ಕರಿಯಂಗಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ವೆಂಕಟೇಶ ನಾವಡ, ಮುಖ್ಯ ಪಶು ವೈದ್ಯಾಧಿಕಾರಿ ಉಪನಿರ್ದೇಶಕರು ಮಂಗಳೂರು ಡಾ. ವಸಂತ ಕುಮಾರ್ ಶೆಟ್ಟಿ ,ಪುಂಚಮೆ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ವಾಮನ ಪೂಜಾರಿ, ಅಮ್ಮುಂಜೆ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಎ. ಎಚ್. ರಂಗನಾಥ ಶೆಟ್ಟಿ, ಮತ್ತಿತರರು ಇದ್ದರು. ಬೆಂಜನಪದವು ಪಶುಚಿಕಿತ್ಸಾಲಯದ ಹಿರಿಯ ಪಶು ವೈದ್ಯಾಧಿಕಾರಿ ಡಾ. ಕಾರ್ತಿಕ್ ಪಿ. ಸ್ವಾಗತಿಸಿ ವಂದಿಸಿದರು., ಮಂದಾರ ಕೆ. ಇ ಅವರು ನಿರೂಪಿಸಿದರು.
ಹೆಣ್ಣು ಕರುಗಳ
ಪ್ರದರ್ಶನ-ಸ್ಪರ್ಧೆ :
ಮಿಶ್ರತಳಿ ಹೆಣ್ಣು ಕರುಗಳ ಪ್ರದರ್ಶನದಲ್ಲಿ ಪುಂಚಮೆ, ಅಮ್ಮುಂಜೆ, ಬಡಗಬೆಳ್ಳೂರು ಹಾಲು ಉತ್ಪಾದಕರ ಸಹಕಾರ ಸಂಘಕ್ಕೆಒಳಪಟ್ಟ ೧೦೦ಕ್ಕೂ ಮಿಕ್ಕ ಕರುಗಳು ಪಾಲ್ಗೊಂಡಿದ್ದವು. ಪ್ರದರ್ಶನದಲ್ಲಿ ಭಾಗವಹಿಸಿದ ಕರುಗಳಲ್ಲಿ ೩ ತಿಂಗಳು, ೩-೬ ತಿಂಗಳು, ೬-೧೨ ತಿಂಗಳ ಕರುಗಳ ವಿಂಗಡಿಸಿ ಪ್ರತಿ ವಿಭಾಗದಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನ ಹಾಗೂ ಪ್ರದರ್ಶನದಲ್ಲಿ ಭಾಗವಹಿಸಿದ ಎಲ್ಲ ಕರುಗಳಿಗೂ ಪ್ರೋತ್ಸಾಹಕರ ಬಹುಮಾನ ಹಾಗೂ ಆಹಾರ ಕಿಟ್ ವಿತರಿಸಲಾಯಿತು.
