ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲಿ ತುರ್ತು ವೈದ್ಯಕೀಯ ಸೇವೆ ಒದಗಿಸುವ ಅಂಬ್ಯುಲೆನ್ಸ್ ಗಳಿಗೆ ಚಾಲಕರು ಹಾಗೂ ದಾದಿಯರ ಕೊರತೆಯಿದ್ದು, ಹಲವು ಕಡೆಗಳಲ್ಲಿ ಸ್ಥಗಿತಗೊಂಡಿರುವುದರಿಂದ ತುರ್ತು ಸಂದರ್ಭದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಖಾಲಿ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಿ ಅಂಬ್ಯುಲೆನ್ಸ್ ಸೇವೆಯನ್ನು ಸಮರ್ಪಕ ವಾಗಿ ಒದಗಿಸಬೇಕು ಎಂದು ಬಂಟ್ವಾಳ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಪ್ರಭಾಕರಪ್ರಭು ಆಗ್ರಹಿಸಿದ್ದಾರೆ.

ಈ ಕುರಿತು ರಾಜ್ಯದ ಆರೋಗ್ಯ ಸಚಿವರಿಗೆ ಮನವಿ ಸಲ್ಲಿಸಿರುವ ಅವರು, ದಕ್ಷಿಣಕನ್ನಡದ 28 ಗ್ರಾಮಾಂತರ ಪ್ರದೇಶಗಳಲ್ಲಿ ತುರ್ತು ಸೇವೆಯ ಅಂಬ್ಯುಲೆನ್ಸ್ ಗಳು ಕಾರ್ಯನಿರ್ವಹಿಸುತ್ತಿದ್ದು, ಕಳೆದ ಮೂರು ವರ್ಷಗಳಿಂದ ಚಾಲಕರು ಹಾಗೂ ದಾದಿಯರ ಕೊರತೆಯಿಂದಾಗಿ 24X7 ತುರ್ತು ಸೇವೆ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ. ಬಂಟ್ವಾಳ ತಾಲೂಕಿನ ಸಿದ್ದಕಟ್ಟೆ, ಫರಂಗಿಪೇಟೆ ಸಹಿತ ಕೆಲ ಪ್ರದೇಶಗಳಲ್ಲಿ ಸಿಬ್ಬಂದಿ ಕೊರತೆಯಿಂದಾಗಿ ಅಂಬ್ಯುಲೆನ್ಸ್ ಗಳು ಕಾರ್ಯಾಚರಣೆ ನಡೆಸದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಅಪಘಾತ ಸೇರಿದಂತೆ ವಿವಿಧ ತುರ್ತು ಸಂದರ್ಭಗಳಲ್ಲಿ ರೋಗಿಗಳು ಸರ್ಕಾರಿ ಅಂಬ್ಯುಲೆನ್ಸ್ ಸೇವೆಗಾಗಿ ಕಾಯುವಂತಾಗಿದೆ ಅವರು ತಿಳಿಸಿದ್ದಾರೆ.
