ಬಂಟ್ವಾಳ: ಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಸಚಿವಾಲಯದಿಂದ ಮಂಜೂರಾದ ಬಿ.ಸಿ.ರೋಡಿನ ಗಾಣದಪಡ್ಪುವಿನಿಂದ ಪುಂಜಾಲಕಟ್ಟೆವರೆಗಿನ ರಸ್ತೆಯ ನಿರ್ವಹಣೆಗಾಗಿ 34.53 ಕೋ.ರೂ.ಹಾಗೂ
ರಾ.ಹೆ 73 ರ ಬಿ.ಸಿ.ರೋಡು ವೃತ್ತದಿಂದ ನಾರಾಯಣಗುರು ಮಂದಿರದವರೆಗೆ 22.59 ಕೋ.ರೂ.ವೆಚ್ಚದಲ್ಲಿ ನಾಲ್ಕು ಪಥ ರಸ್ತೆ ನಿರ್ಮಾಣ ಸಹಿತ ಒಟ್ಟು 57.12 ಕೋ.ರೂ.ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಬುಧವಾರ ಗಾಣದಪಡ್ಪು ನಾರಾಯಣಗುರು ಮಂದಿರದ ಬಳಿ ಗುದ್ದಲಿ ಪೂಜೆ ನೆರವೇರಿಸಲಾಯಿತು.

ದ.ಕ.ಸಂಸದ ಕ್ಯಾ.ಬ್ರಿಜೇಶ್ ಚೌಟ,ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಗುದ್ದಲಿ ಪೂಜೆ ನೆರವೇರಿಸಿದರು. ಬಳಿಕ ಮಾತನಾಡಿದ ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರುದಕ್ಷಿಣ ಕನ್ನಡ ಜಿಲ್ಲೆಯ ಹೆದ್ದಾರಿ ಕೆಲಸಗಳಿಗೆ ವೇಗ ದೊರಕಿದ್ದು, ಮುಂದಿನ 15 ವರ್ಷಗಳನ್ನು ದೃಷ್ಟಿಯಾಗಿರಿಸಿಕೊಂಡು ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಬ್ರಹ್ಮಶ್ರೀ ನಾರಾಯಣಗುರು ವೃತ್ತದಿಂದ ನಾರಾಯಣಗುರು ಮಂದಿರವರೆಗೆ ಹಲವಾರು ವರ್ಷಗಳಿಂದ ಬಾಕಿಯಾಗಿದ್ದ ಚತುಷ್ಪಥ ರಸ್ತೆಯ ಕನಸು ಇದೀಗ ನನಸಾಗುತ್ತಿದೆ. 22.59 ಕೋಟಿ ರೂ ವೆಚ್ಚದಲ್ಲಿ ಇದು ಚತುಷ್ಪಥ ರಸ್ತೆಯ ನಿರ್ಮಾಣವಾಗಲಿದೆ. ಇದಕ್ಕಾಗಿ ಈಭಾಗದ ಜನರ ಪರವಾಗಿ ಕೇಂದ್ರದ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದೇನೆ ಎಂದರು.

ಅದೇ ರೀತಿ 34.53 ಕೋಟಿ ರೂಗಳನ್ನು ಪುಂಜಾಲಕಟ್ಟೆ ಹೆದ್ದಾರಿಯ ನಿರ್ವಹಣೆಗೆ ಮಂಜೂರಾಗಿದ್ದು, ಈ ಕಾಮಗಾರಿಗಳಿಗೂ ಶಿಲಾನ್ಯಾಸ ಮಾಡಲಾಗಿದೆ ಎಂದ ಕ್ಯಾ. ಚೌಟ ಅವರು ಇಂದು ಭಾರತಕ್ಕೆ ವಿಶೇಷ ದಿನವಾಗಿದೆ.ಪ್ರಧಾನಿ ನರೇಂದ್ರ ಮೋದಿ ಅವರು 25 ವರ್ಷಗಳನ್ನು ಗುಜರಾತ್ ಸಿಎಂ ಮತ್ತು ಭಾರತದ ಪ್ರಧಾನಿಯಾಗಿ ಪೂರೈಸಿದ್ದು, ಅವರ ನೇತೃತ್ವದಲ್ಲಿ ದೇಶದಾದ್ಯಂತ ಅಭಿವೃದ್ಧಿ ಆಗುತ್ತಿದೆ ಎಂದರು.
ಬ್ರಹ್ಮರಕೂಟ್ಲು ಟೋಲ್ ತೆರವು
ಬಿ.ಸಿ.ರೋಡ್ ನಿಂದ ಬೆಂಗಳೂರು ಮತ್ತು ಪುಂಜಾಲಕಟ್ಟೆ ರಸ್ತೆ ಒಂದು ಹಂತಕ್ಕೆ ಬಂದ ನಂತರ ಬ್ರಹ್ಮರಕೂಟ್ಲು ಟೋಲ್ ಅನ್ನು ತೆರವು ಮಾಡಲಾಗುತ್ತದೆ. ಆ ವಿಚಾರದಲ್ಲಿ ಯಾರೂ ನಾಟಕ ಮಾಡುವ ಅಗತ್ಯವಿಲ್ಲ.ಈ ಕುರಿತಂತೆ ವರ್ಷಾರಂಭದ ಮೊದಲೇ ತಾನು ಹೆದ್ದಾರಿ ಸಚಿವರೊಂದಿಗೆ ಚರ್ಚಿಸಿದ್ದೇನೆ. ಈ ಸಂಬಂಧ ಅಧಿಕಾರಿಗಳು ಕೂಡ ಪರಿಶೀಲಿಸಿ ಎಲ್ಲಾ ವಿವರಗಳನ್ನು ದಾಖಲಿಸಿ ವರದಿಯನ್ನು ನೀಡಿದ್ದು,ಶೀಘ್ರವೇ ಈ ಟೋಲ್ ಅನ್ನು ತೆರವುಗೊಳಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಮಾಣಿ – ಸಂಪಾಜೆ ರಸ್ತೆ ಚತುಷ್ಪಥ:
ಬಹು ಬೇಡಿಕೆಯ ಮಾಣಿಯಿಂದ ಸಂಪಾಜೆ ವರೆಗಿನ ಚತುಷ್ಪಥ ರಸ್ತೆಯ ಬಗ್ಗೆಯು ಡಿಪಿಆರ್ ಆಗುತ್ತಿದೆ. ಜತೆಜತೆಗೆ ಕಾಮಗಾರಿ ಆಗುವ ವೇಳೆ 50 ಕೋಟಿ ರೂ.ನಿರ್ವಹಣಾ ವೆಚ್ಚವನ್ನೂ ಇರಿಸಲಾಗಿದೆ. ಮುಂದಿನ ಮೂರರಿಂದ ನಾಲ್ಕು ವರ್ಷದಲ್ಲಿ ಸುಸಜ್ಜಿತವಾಗಿ ಮಾಣಿಯಿಂದ ಸಂಪ್ಯದವರೆಗೆ ಸರ್ವೀಸ್ ರಸ್ತೆ ಹಾಗೂ ಮಾಣಿ-ಸಂಪಾಜೆ ಚತುಷ್ಪಥ ರಸ್ತೆ ನಿರ್ಮಾಣಗೊಳ್ಳಲಿದೆ ಎಂದವರು ಮಾಹಿತಿ ನೀಡಿದರು.
ತಲಪಾಡಿಯಿಂದ ಕುಂದಾಪುರ ಸರ್ವೀಸ್ ರಸ್ತೆ:
ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ದೃಷ್ಟಿಯಿಂದ ಎಲ್ಲ ಹೆದ್ದಾರಿಗಳ ಕೆಲಸಗಳೂ ಆಗಲಿದ್ದು, ರಾ.ಹೆ.66 ತಲಪಾಡಿಯಿಂದ ಕುಂದಾಪುರವರೆಗೆ ಪೂರ್ತಿ ರಸ್ತೆಗೆ ಸರ್ವೀಸ್ ರಸ್ತೆ ನಿರ್ಮಾಣವಾಗಲಿದೆ.ಕೆಲವೆಡೆ ಈಗಾಗಲೇ ಹಂತ,ಹಂತವಾಗಿ ಸರ್ವಿಸ್ ರಸ್ತೆ ಕಾಮಗಾರಿ ನಡೆಯುತ್ತಿದೆ ಎಂದವರು ಹೇಳಿದರು..
ಮಂಗಳೂರು ನಗರಕ್ಕೆ ಬೈಪಾಸ್:
ಎನ್.ಎಂ.ಪಿ.ಟಿ. ಪೋರ್ಟ್ ಟ್ರಾಫಿಕ್ ನಿಯಂತ್ರಣಕ್ಕೆ ಎಲಿವೇಟೆಡ್ ಫ್ಲೈಓವರ್ ನಿರ್ಮಾಣವಾಗಲಿದೆ. ಕೂಳೂರು ಸೇತುವೆಯಿಂದ ಬೈಕಂಪಾಡಿವರೆಗೆ ಫ್ಲೈಓವರ್ ನಿರ್ಮಾಣವಾಗಲಿದೆ. ನಂತೂರು- ಕೆಪಿಟಿ ಮತ್ತು ಪದುವಾ ಹೈಸ್ಕೂಲ್ ಮಧ್ಯೆ ಇರುವ ಸಮಸ್ಯೆಗೆ ಸಂಬಂಧಿಸಿ ಫ್ಲೈಓವರ್ ಮಾಡಲು ಅವಕಾಶ ಇಲ್ಲದ ಕಾರಣ ಕೆಳಗಿನಿಂದಲೇ ಹೋಗುವ ರಸ್ತೆ (ಅಂಡರ್ ಪಾಸ್) ಕಾಮಗಾರಿ ನಡೆಯಲಿದೆ.ಮಂಗಳೂರು ನಗರಕ್ಕೆ ಬೈಪಾಸ್ ರಸ್ತೆಯ ಬಗ್ಗೆಯು ಬೇಡಿಕೆ ಇದೆ. ಸುರತ್ಕಲ್ ನಿಂದ ಬಿ.ಸಿ.ರೋಡ್ ಬೈಪಾಸ್ ರಸ್ತೆ ನಿರ್ಮಾಣದ ಯೋಚನೆಗಳಿವೆ ಎಂದು ಸಂಸದ ಕ್ಯಾ.ಚೌಟ ಹೇಳಿದರು.
ಸಿಂಗಲ್ ಫ್ಲೈಓವರ್ ಸಮಸ್ಯೆ:
ನಗರದ ಒಳಗಿರುವ ಹೆದ್ದಾರಿಗೆ ಕಾಯಕಲ್ಪ ನೀಡಲಾಗುವುದು. ಹೆದ್ದಾರಿಯ ಸಮಗ್ರ ಅಭಿವೃದ್ಧಿಗೆ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ನಗರ ವ್ಯಾಪ್ತಿ ಒಳಗೆ ಮತ್ತು ಹೊರಗಿನ ಕಡೆಗಳಿಗೆ ಮುಂದಿನ 15 ವರ್ಷಗಳ ಯೋಜನೆ ರೂಪಿಸಲಾಗುವುದು ಕಾಂಗ್ರೆಸ್ ನವರು ಇಡೀ ದೇಶದಲ್ಲಿ ಎಲ್ಲೂ ಇಲ್ಲದಂಥ ಹೆದ್ದಾರಿ ರಚಿಸಿದ್ದಾರೆ. ಎಲ್ಲೂ ಸಿಂಗಲ್ ಫ್ಲೈಓವರ್ ಇಲ್ಲ.ಯಾರನ್ನೋ ಉಳಿಸಲು ಏಕಮುಖ ಫ್ಲೈಓವರ್ ಮಾಡಿದ್ದಾರೆ. ರಸ್ತೆಯನ್ನು ಎಲ್ಲೆಲ್ಲೂ ತಿರುಗಿಸಿಕೊಂಡು ಹೋಗಿದ್ದಾರೆ. ಒಳಒಪ್ಪಂದ ಮಾಡಿ ಪ್ರತಿಭಟನೆ ಮಾಡಿದರೆ ಏನೂ ಪ್ರಯೋಜನವಿಲ್ಲ,ಜಿಲ್ಲೆಯ ಜನರು ದಡ್ಡರಲ್ಲ ಎಂದು ಸಂಸದರು ತಿಳಿಸಿದರು.
ಮೂಲಸೌಕರ್ಯ ಅಭಿವೃದ್ದಿ: ಶಾಸಕ ನಾಯ್ಕ್
ಬಂಟ್ವಾಳದ ಈ ಮುಖ್ಯಭಾಗಕ್ಕೆ ಸೂಕ್ತ ದಿವಸವನ್ನು ಆಯ್ಕೆ ಮಾಡಿ ಶಿಲಾನ್ಯಾಸ ಮಾಡಿದ್ದೇವೆ. ಬಹುಬೇಡಿಕೆಯ ಯೋಜನೆ ಈಡೇರಿಸುವ ಕಾರ್ಯ ನಡೆಯುತ್ತಿದೆ.ಅದಷ್ಟ ಶೀಘ್ರ ಗುಣಮಟ್ಟದ ರಸ್ತೆ ನಿರ್ಮಾಣವಾಗಲಿ ಎಂದು ಶಾಸಕ ರಾಜೇಶ್ ನಾಯ್ಕ್ ಅಶಯವ್ಯಕ್ತಪಡಿಸಿದರು.
ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ಬಿಜೆಪಿ ಕ್ಷೇತ್ರಾಧ್ಯಕ್ಷ ಆರ್. ಚೆನ್ನಪ್ಪ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿಗಳಾದ ಸುದರ್ಶನ ಬಜ, ಶಿವಪ್ರದಾಸ್ ಶೆಟ್ಟಿ, ಪಕ್ಷ ಪ್ರಮುಖರಾದ ಹರಿಕೃಷ್ಣ ಬಂಟ್ವಾಳ, ಸಂದೇಶ್ ಶೆಟ್ಟಿ ಅರೆಬೆಟ್ಟು, ವಿಕಾಸ್ ಪುತ್ತೂರು, ಸುಲೋಚನಾ ಜಿ.ಕೆ. ಭಟ್, ದಿನೇಶ್ ಅಮ್ಟೂರು, ಮಾಧವ ಮಾವೆ, ಗೋವಿಂದ ಪ್ರಭು, ದಿನೇಶ್ ಭಂಡಾರಿ, ಆರ್. ಸಿ.ನಾರಾಯಣರೆಂಜ,ಹರ್ಷಿಣಿ,ಹಿರಣ್ಮಯಿ
