ಗುರುಪುರ : ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮಂಗಳೂರು ದಕ್ಷಿಣ ವಲಯ ಹಾಗೂ ಎಸ್‌ಡಿಎಂ ಮಂಗಳಜ್ಯೋತಿ ಸಮಗ್ರ ಶಾಲೆ ಸಹಯೋಗದಲ್ಲಿ ಗುರುಪುರ ಹೋಬಳಿ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ೧೪ರ ವಯೋಮಿತಿಯ ಬಾಲಕ-ಬಾಲಕಿಯರ ವಾಲಿಬಾಲ್ ಮತ್ತು ತ್ರೋಬಾಲ್ ಪಂದ್ಯಾಟದ ಉದ್ಘಾಟನಾ ಸಮಾರಂಭ ಸೆ. ೯ರಂದು ನಡೆಯಿತು.

ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಜಯಶ್ರೀ ಅವರು ಮಾತನಾಡಿ, ವಿದ್ಯಾರ್ಥಿಗಳು ಕ್ರೀಡಾ ನಿಯಮಗಳಿಗೆ ಬದ್ಧರಾಗಿ ಶಿಸ್ತಿನಿಂದ ಕ್ರೀಡೆಯಲ್ಲಿ ಭಾಗವಹಿಸಬೇಕು. ಕ್ರೀಡೆಯ ಮೂಲಕ ತಾನು ಸಾಧನೆಗೈಯಬೇಕೆನ್ನುವ ಮನೋಭಾವ ಮತ್ತು ಛಲ ಇದ್ದವರಿಗೆ ಇಂತಹ ಕ್ರೀಡಾಕೂಟಗಳು ನೆರವಾಗಲಿದೆ. ಉತ್ತಮ ರೀತಿಯಲ್ಲಿ ಕ್ರೀಡಾಕೂಟ ಆಯೋಜಿಸಿರುವ ಶಾಲಾ ಆಡಳಿತ ಮಂಡಳಿಗೆ ಅಭಿನಂದನೆ. ಎಲ್ಲರೂ ಕ್ರೀಡಾಸ್ಫೂರ್ತಿ ಮೆರೆಯಬೇಕು ಎಂದು ಹಾರೈಸಿದರು.

ಅಧ್ಯಕ್ಷತೆ ವಹಿಸಿದ್ದ ಶಾಲಾ ಆಡಳಿತಾಧಿಕಾರಿ ನರೇಶ್ ಮಲ್ಲಿಗೆಮಾಡು ಅವರು ಮಾತನಾಡಿ, ಸಾಮಾನ್ಯ ಮಕ್ಕಳ ಜೊತೆಯಲ್ಲಿ ವಿಶೇಷ ಚೇತನ ಮಕ್ಕಳಿರುವ ಈ ಶಾಲೆಯಲ್ಲಿ ಕ್ರೀಡಾಕೂಟ ನಡೆಸಲು ಹೆಮ್ಮೆ ಎನಿಸುತ್ತಿದೆ. ಎಲ್ಲರೂ ಪ್ರೀತಿ ಮತ್ತು ಆತ್ಮವಿಶ್ವಾಸದಿಂದ ಆಡಿದಾಗ ಗೆಲುವು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ ಎಂದರು.
ಪ್ರೌಢಶಾಲಾ ಮುಖ್ಯಶಿಕ್ಷಕ ರಮೇಶ್ ಆಚಾರ್ಯ ಅವರು ಸ್ವಾಗತಿಸಿದರು. ಶಿಕ್ಷಕ ಗಂಗಾಧರ ನಿರೂಪಿಸಿದರು. ತಿರುವೈಲು ಸಿಆರ್‌ಪಿ ಅನಿತಾ, ನೀರುಮಾರ್ಗ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ಉದಯ ಕುಮಾರ್ ಕುಡುಪು, ರೋಸಾ ಮಿಸ್ತಿಕಾ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಲ್ಯಾನ್ಸಿ ಸಿಕ್ವೇರ ಉಪಸ್ಥಿತರಿದ್ದರು. ಎಸ್‌ಡಿಎಂ ಮಂಗಳಜ್ಯೋತಿ ಸಮಗ್ರ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಶೇಖರ ಕಡ್ತಲ ಅವರು ವಂದಿಸಿದರು.
ಕ್ರೀಡಾಕೂಟದಲ್ಲಿ ಗುರುಪುರ ಹೋಬಳಿಯ ೧೫ಕ್ಕೂ ಹೆಚ್ಚು ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಶಾಲೆಗಳ ೧೫ ಬಾಲಕ-ಬಾಲಕಿಯರ ತಂಡಗಳು ಪಾಲ್ಗೊಂಡಿದ್ದವು.
