ಬಂಟ್ವಾಳ: ಪ್ರಕೃತಿಯ ಪ್ರತಿಯೊಂದು ಜೀವಿಯೂ ಪುಕೃತಿಪೂರಕವಾಗಿ ಬದುಕುತ್ತದೆ. ಮನುಷ್ಯ ಮಾತ್ರ ಪಕೃತಿಗೆ ಸವಾಲಾಗಿದ್ದಾನೆ. ಮನುಷ್ಯನಿಂದ ಹಾನಿಯಾದ ಪ್ರಕೃತಿಯನ್ನು ಮನುಷ್ಯನೇ ಸರಿಪಡಿಸಬೇಕಾಗಿದೆ. ನಿಸರ್ಗದ ಪ್ರತಿಯೊಂದು ಜೀವಿಗೂ ಬದುಕುವ ಹಕ್ಕಿದ್ದು, ಇತರ ಜೀವಿಗಳನ್ನು ಕೊಂದು ಮನುಷ್ಯ ಉಳಿಯಲು ಸಾಧ್ಯವಿಲ್ಲ’ ಎಂದು ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪನಾ ಟ್ರಸ್ಟಿ ವಿವೇಕ್ ಆಳ್ವ ಹೇಳಿದ್ದಾರೆ

ಶನಿವಾರ ಸಿದ್ಧಕಟ್ಟೆ ಸರಕಾರಿ ಪ್ರೌಢಶಾಲೆಯಲ್ಲಿ ಆಳ್ವಾಸ್ ಕಾಲೇಜಿನ ಕನ್ನಡ ವಿಭಾಗ, ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ಘಟಕ ಹಾಗೂ ರೋಟರಿ ಕ್ಲಬ್ ಸಿದ್ದಕಟ್ಟೆಯ ಸಹಯೋಗದಲ್ಲಿ ಪರಿಸರ ಪ್ರೀತಿ (ಪರಿಸರ ಪ್ರಜ್ಞೆ ಮತ್ತು ಸಾಹಿತ್ಯ ಜಾಗೃತಿ) ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪಶ್ಚಿಮ ಘಟ್ಟ ಮತ್ತು ಸಮುದ್ರದ ಮಧ್ಯೆ ಇರುವ ಈ ಸುಂದರ ನಾಡನ್ನು ಮನುಷ್ಯ ತನ್ನ ಸ್ವಾರ್ಥಕ್ಕೆ ಇದೇ ರೀತಿ ಉಪಯೋಗಿಸುತ್ತಾ ಹೋದರೆ ಭವಿಷ್ಯದಲ್ಲಿ ಈ ಭಾಗದ ಜನರು ದೊಡ್ಡ ಅಪಾಯಗಳನ್ನು ಎದುರಿಸಬೇಕಾಗುತ್ತದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂಟ್ವಾಳ ತಾಲೂಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿಶ್ವನಾಥ ಬಂಟ್ವಾಳ ವಹಿಸಿ ಮಾತನಾಡಿ, “ಕಾರಂತರು, ಕುವೆಂಪು, ತೇಜಸ್ವಿ ಮೊದಲಾದ ಕವಿಗಳ ಬರಹಕ್ಕೆ ಪ್ರಕೃತಿಯೇ ಪ್ರೇರಣೆ, ಪ್ರಕೃತಿಗೆ ಸಾಹಿತ್ಯ ಸೃಷ್ಟಿಸುವ ಗುಣವಿದೆ. ಓದು ಮತ್ತು ಪ್ರಕೃತಿಯನ್ನು ರಕ್ಷಿಸುವ ಕೆಲಸವನ್ನು ಶ್ರದ್ಧೆಯಿಂದ ನಿರ್ವಹಿಸಬೇಕಾಗಿದೆ ಎಂದು ತಿಳಿಸಿದರು.


ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಗುರುರಾಜ ಸನಿಲ್ ಮಾತನಾಡಿ, “ಹಾವು ತಾನಾಗಿ ಕಚ್ಚುವುದಿಲ್ಲ. ಹಾವು ನಮ್ಮ ಶತ್ರುವಲ್ಲ, ಅದೊಂದು ಸಹಜೀವಿ ಸಮಾಜದಲ್ಲಿ ಹಾವಿನ ಕುರಿತಾದ ನಂಬಿಕೆ ಹಾಗೂ ಅಪನಂಬಿಕೆಗಳೆರಡೂ ಇದ್ದು, ಪರಿಸರ ಸಮತೋಲನವನ್ನು ಕಾಪಾಡುವಲ್ಲಿ ಹಾವಿನ ಪಾತ್ರ ಹಿರಿದು” ಎಂದು ತಿಳಿಸಿದರು.


ಈ ಸಂದರ್ಭ ಹಾವು ಕಚ್ಚಿದಾಗ ನಿರ್ವಹಿಸಬೇಕಾದ ಪ್ರಥಮ ಚಿಕಿತ್ಸೆಯ ಕುರಿತು ಅವರು  ಮಾಹಿತಿ ನೀಡಿದರು.
ಇದೇ ವೇಳೆ ಅಳ್ವಾಸ್ ಕಾಲೇಜಿನ ಹಾಗೂ ಸಿದ್ಧಕಟ್ಟೆ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ಪರಿಸರ ಜಾಗೃತಿಯ ಹಾಡು, ಪರಿಸರ ಚಿತ್ತಾರ, ಪರಿಸರ ಸಂಬಂಧಿ ರಸಪ್ರಶ್ನೆ ಮತ್ತು ಪರಿಸರ ಕುರಿತ ಕವಿಗೋಷ್ಠಿ ನಡೆಯಿತು.


ರೋಟರಿ ಕ್ಲಬ್ ಫಲ್ಗುಣಿ ಸಿದ್ದಕಟ್ಟೆಯ ಅಧ್ಯಕ್ಷೆ ಟೀನಾ ಡಿಕೋಸ್ತಾ ಎಸ್‌ಡಿಎಂಸಿ ಉಪಾಧ್ಯಕ್ಷ ಉಮೇಶ್ ಗೌಡ, ಪಾಣೆಮಂಗಳೂರು ಹೋಬಳಿ ಸಾಹಿತ್ಯ ಪರಿಷತ್ತಿನ ಘಟಕಾಧ್ಯಕ್ಷ ಮಹಮ್ಮದ್, ಸಾಹಿತ್ಯ ಪರಿಷತ್ತಿನ ರಜನಿ ಚಿಕ್ಕಯ್ಯ ಮಠ, ಪಂಚಾಯತ್ ಅಭಿವೃದ್ಧಿ ಅಧಿಕಾರಿ  ಗಣೇಶ್ ಶೆಟ್ಟಿ, ರೋಟರಿ ಕಾರ್ಯದರ್ಶಿ ಪ್ರಮೀಳಾ ದುರ್ಗಾದಾಸ್ ಶೆಟ್ಟಿ, ಗುರು ಚೈತನ್ಯ ಸೇವಾಶ್ರಮದ ಹೊನ್ನಯ್ಯ ಕಾಟಿಪಳ್ಳ, ರೋಟರಿ ಕ್ಲಬ್ ಸಿದ್ಧಕಟ್ಟೆಯ ಮಾಜಿ ಅಧ್ಯಕ್ಷ ಮೈಕಲ್ ಡಿಕೋಸ್ತಾ ಹಾಗೂ ದುರ್ಗಾದಾಸ್ ಶೆಟ್ಟಿ ಉಪಸ್ಥಿತರಿದ್ದರು.
ಡಾ. ಯೋಗೀಶ್ ಕೈರೋಡಿ ಸ್ವಾಗಡಿಸಿ, ಉಪಪ್ರಾಂಶುಪಾಲೆ ಲೋನಾ ಲೋಬೊ ವಂದಿಸಿದರು. ಶಿಕ್ಷಕ ಮಹೇಶ್ ಕರ್ಕೇರ ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *