ಬಂಟ್ವಾಳ:ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಿ.ಸಿ.ರೋಡಿನ ರಾಜಾರಸ್ತೆಯಲ್ಲಿ ವಾಹನಸಂಚಾರ ದಟ್ಟಣೆಯಿಂದಾಗಿ ಉಂಟಾಗುತ್ತಿರುವ ಟ್ರಾಫಿಕ್ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಂತೆ ಶನಿವಾರ ದ.ಕ.ಪ್ರಜಾಸೌಧ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರ ಅಧ್ಯಕ್ಷತೆಯಲ್ಲಿ ನಡೆದ ದಿಶಾ ಸಮಿತಿ ಸಭೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಪ್ರಸ್ತಾಪಿಸಿ ಗಮನಸೆಳೆದರು.

ಬಿ.ಸಿ.ರೋಡಿನ ಪೊಳಲಿ ದ್ವಾರ ಕೈಕಂಬ ಜಂಕ್ಷನ್ ನಿಂದ  ಬ್ರಹ್ಮಶ್ರೀ ನಾರಾಯಣಗುರು ವೃತ್ತದವರೆಗೆ ಪ್ರತಿನಿತ್ಯ ವಾಹನ ಸಂಚಾರ ದಟ್ಟಣೆಯಿಂದಾಗಿ ಉಂಟಾಗುತ್ತಿರುವ ಟ್ರಾಫಿಕ್ ಜಾಮ್ ಸಮಸ್ಯೆಯಿಂದಾಗಿ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ರಸ್ತೆ ದಾಟಲು ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.ಈ ನಿಟ್ಟಿನಲ್ಲಿ  ರಸ್ತೆ ಅಗಲೀಕರಣ ಸೇರಿದಂತೆ ಅಗತ್ಯ ಕ್ರಮಗಳನ್ನು ಕೈಗೊಂಡು ಸಮಸ್ಯೆ ಪರಿಹರಿಸಬೇಕು ಎಂದು ಶಾಸಕ ರಾಜೇಶ್ ನಾಯ್ಕ್ ಒತ್ತಾಯಿಸಿದರು.


ಇದಕ್ಕೆ ಸ್ಪಂದಿಸಿದ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಯವರಿಗೆ ಸೂಚಿಸಿದರು.
ರಾಷ್ಟ್ರೀಯ ಹೆದ್ದಾರಿ ಇಲಾಖೆ ಹಾಗೂ ಸಂಬಂಧಿಸಿದಂತೆ ಇತರೆ ಇಲಾಖಾ ಧಿಕಾರಿಗಳೊಂದಿಗೆ ಶೀಘ್ರವೇ ಜಂಟಿ ಸರ್ವೆ ನಡೆಸಿ, ಸಮಸ್ಯೆ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಈ ಸಂದರ್ಭದಲ್ಲಿ ಅಧಿಕಾರಿಗಳು ಭರವಸೆ ನೀಡಿದರು.


400 ಕೆ.ವಿ. ವಿದ್ಯುತ್ ಮಾರ್ಗ: ಕೃಷಿಕರಿಗೆ ಸೂಕ್ತ ಪರಿಹಾರಕ್ಕೆ ಒತ್ತಾಯ
ಉಡುಪಿ–ಕಾಸರಗೋಡು ನಡುವೆ ಹಾದುಹೋಗುವ 400 ಕೆ.ವಿ. ವಿದ್ಯುತ್ ಪ್ರಸರಣ ಮಾರ್ಗದಿಂದ ಬಂಟ್ವಾಳ ತಾಲೂಕಿನ ಹಲವು ಕೃಷಿಕರ ಜಮೀನುಗಳು ಬಾಧಿತವಾಗಿರುವ ವಿಚಾರವನ್ನು  ಸಭೆಯಲ್ಲಿ ಪ್ರಸ್ತಾವಿಸಿದ ಶಾಸಕ ರಾಜೇಶ್ ನಾಯ್ಕ್ ವಿದ್ಯುತ್ ಮಾರ್ಗಕ್ಕಾಗಿ ಜಮೀನು ಕಳೆದುಕೊಳ್ಳುತ್ತಿರುವ ಕೃಷಿಕರಿಗೆ ಅವರ ಜಮೀನಿನ ಮೌಲ್ಯಕ್ಕೆ ಅನುಗುಣವಾಗಿ ಸೂಕ್ತ ಪರಿಹಾರ ನೀಡುವಂತೆ  ಜಿಲ್ಲಾಧಿಕಾರಿಯವರನ್ನು ಆಗ್ರಹಿಸಿದರು.


ಇದೇ  ವೇಳೆ ಮಧ್ಯಪ್ರವೇಶಿಸಿದ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು, ವಿದ್ಯುತ್ ಮಾರ್ಗ ಕಾಮಗಾರಿಗೆ ಸಂಬಂಧಿಸಿದಂತೆ ಕೆಲವು ಪ್ರದೇಶಗಳಲ್ಲಿ ಪೊಲೀಸ್ ಭದ್ರತೆಯನ್ನು ಬಳಸಿಕೊಂಡು ಕೃಷಿಕರ ಮೇಲೆ ಒತ್ತಡ ಹೇರುತ್ತಿರುವ ಬಗ್ಗೆ ದೂರುಗಳು ಬಂದಿವೆ ಎಂದು ತಿಳಿಸಿದರಲ್ಲದೆ ಕೃಷಿಕರನ್ನು ಬೆದರಿಸುವ  ರೀತಿಯ ಕ್ರಮಗಳು ಸರಿಯಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.


ಅಗತ್ಯವಿದ್ದ ಸಂದರ್ಭಗಳಲ್ಲಿ,ಕಾನೂನು ಬದ್ದವಾಗಿ  ಕಂದಾಯ ಅಧಿಕಾರಿಗಳು ಪೊಲೀಸ್ ಇಲಾಖೆಯ ಸಹಕಾರವನ್ನು ಕೋರಿದಲ್ಲಿ ಮಾತ್ರ ಪೊಲೀಸ್ ಮಧ್ಯಪ್ರವೇಶವಾಗುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಸೂಚನೆ ನೀಡಲಾಗಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು.


ಕೃಷಿಕರ ಹಿತಾಸಕ್ತಿಗೆ ಧಕ್ಕೆಯಾಗದಂತೆ ಹಾಗೂ ಕಾನೂನುಬದ್ಧ ಪ್ರಕ್ರಿಯೆಯಂತೆ ಕಾಮಗಾರಿ ಮುಂದುವರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಡಳಿತದ ವತಿಯಿಂದ ಭರವಸೆ ನೀಡಲಾಯಿತು.

By Suddi9

Leave a Reply

Your email address will not be published. Required fields are marked *