ಬಂಟ್ವಾಳ: ಯುವಕರನ್ನು ಒಗ್ಗೂಡಿಸಿ ಶಿಕ್ಷಣ, ಆರೋಗ್ಯ, ಸಮಾಜಸೇವೆ, ಸಂಸ್ಕೃತಿ ಹಾಗೂ ಮಾನವೀಯ ಮೌಲ್ಯಗಳ ಮೂಲಕ ಸಮಾಜದ ಅಭಿವೃದ್ಧಿಗೆ ನಿರಂತರವಾಗಿ ಕೊಡುಗೆ ನೀಡುತ್ತಿರುವ ಯುವವಾಹಿನಿಯ ಕಾರ್ಯ ಶ್ಲಾಘನೀಯವಾಗಿದೆ. ಯುವವಾಹಿನಿ ಯುವ ಜನಾಂಗದ ಕಣ್ಮಣಿಯಾಗಿ, ಸಮಾಜದ ಆಶಾಕಿರಣವಾಗಿ ಬೆಳೆದು ನಿಂತಿದೆ ಎಂದು ಯುವ ಉದ್ಯಮಿ ಪ್ರಕಾಶ್ ಕುಂಪಲ ಹೇಳಿದರು.

ಯುವವಾಹಿನಿ (ರಿ.) ಬಂಟ್ವಾಳ ಘಟಕದ ಆಶ್ರಯದಲ್ಲಿ ಬಿ.ಸಿ.ರೋಡ್‌ನ ನಾರಾಯಣಗುರು ಸಭಾಭವನದಲ್ಲಿ ಭಾನುವಾರ ನಡೆದ ‘ಆಟಿಡೊಂಜಿ ಕೂಟ’, ತಾಲೂಕು ಮಟ್ಟದ ಜಾನಪದ ವೈಭವ ಹಾಗೂ ಚೆನ್ನೆಮನೆ ಸ್ಪರ್ಧೆಯನ್ನು ಅಕ್ಕಿ ಮುಡಿಯಿಂದ ಅಕ್ಕಿಯನ್ನು ತೆಗೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಸಂಘಟನೆಯ ಪ್ರತಿಯೊಬ್ಬ ಸದಸ್ಯನ ಸೇವಾ ಮನೋಭಾವ ಹಾಗೂ ಒಗ್ಗಟ್ಟು ಯುವವಾಹಿನಿಯ ನಿಜವಾದ ಶಕ್ತಿ. ಬಂಟ್ವಾಳ ಘಟಕದ ನೂತನ ಆಡಳಿತ ಕಟ್ಟಡದ ಕನಸು ಶೀಘ್ರದಲ್ಲೇ ನನಸಾಗಿ, ಮುಂದಿನ ದಿನಗಳಲ್ಲಿ ಇನ್ನಷ್ಟು ಸಮಾಜಮುಖಿ ಕಾರ್ಯಗಳಿಗೆ ಇದು ಪ್ರೇರಣೆಯ ಕೇಂದ್ರವಾಗಲಿ” ಎಂದು ಅವರು ಹಾರೈಸಿದರು.

ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಉಪಾಧ್ಯಕ್ಷ ಜಯಪ್ರಕಾಶ್ ಜೆ.ಎಸ್. ಅವರು ಚೆನ್ನೆಮನೆ ಸ್ಪರ್ಧೆಗೆ ಚಾಲನೆ ನೀಡಿದರು. ಉದ್ಯಮಿ ರಾಜಶೇಖರ ಕೋಟ್ಯಾನ್ ಅವರು ಜಾನಪದ ವೈಭವ ಸ್ಪರ್ಧೆಯನ್ನು ಉದ್ಘಾಟಿಸಿದರು.
ತಾಲೂಕು ಮಟ್ಟದ ಜಾನಪದ ವೈಭವ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಬಂಟ್ವಾಳ ತಾಲೂಕಿನ ಆಯ್ದ 10 ತಂಡಗಳು ಭಾಗವಹಿಸಿದವು. ಈ ಸಂದರ್ಭದಲ್ಲಿ ನಡೆದ ಚೆನ್ನೆಮನೆ ಸ್ಪರ್ಧೆಯಲ್ಲಿ 100ಕ್ಕೂ ಅಧಿಕ ಸ್ಪರ್ಧಿಗಳು ಪಾಲ್ಗೊಂಡರು.

ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ಪಡ್ಪು, ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸಂಜೀವ ಪೂಜಾರಿ ಕುಚ್ಚಿಗುಡ್ಡೆ, ರಾಷ್ಟ್ರೀಯ ಹೆದ್ದಾರಿ ಸಹಾಯಕ ಇಂಜಿನಿಯರ್ ಗುರುಪ್ರಸಾದ್ ಎಂ. ಹಾಗೂ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಶಾಂತ್ ಪುಂಜಾಲಕಟ್ಟೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.

ಯುವವಾಹಿನಿ (ರಿ.) ಬಂಟ್ವಾಳ ಘಟಕದ ಕಾರ್ಯದರ್ಶಿ ಗೀತಾ ಜಗದೀಶ್, ಕೋಶಾಧಿಕಾರಿ ಪ್ರಜಿತ್ ಅಮೀನ್, ಕ್ರೀಡಾ ನಿರ್ದೇಶಕ ವಿಕ್ರಮ್ ಶಾಂತಿ, ಸಾಂಸ್ಕೃತಿಕ ನಿರ್ದೇಶಕ ನವೀನ್ ಕುಡ್ಮೇರ್, ವಿದ್ಯಾರ್ಥಿ ನಿರ್ದೇಶಕಿ ಕಾವ್ಯ ಸೊರ್ನಾಡ್, ಸಂಚಾಲಕರಾದ ಯಶೋಧರ ಕಡಂಬಳಿಕೆ ಹಾಗೂ ತ್ರಿವೇಣಿ ನೈನಾಡ್ ಉಪಸ್ಥಿತರಿದ್ದರು.

ಯುವವಾಹಿನಿ (ರಿ.) ಬಂಟ್ವಾಳ ಘಟಕದ ಅಧ್ಯಕ್ಷ ಕಿರಣ್‌ರಾಜ್ ಪೂಂಜರೆಕೋಡಿ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ನಿಕಟಪೂರ್ವ ಅಧ್ಯಕ್ಷ ನಾಗೇಶ್ ಪೂಜಾರಿ ನೈಬೇಲು ಪ್ರಸ್ತಾವನೆಗೈದರು. ಸಂಚಾಲಕ ರಂಜಿತ್ ಪೂಜಾರಿ ವಂದಿಸಿದರು. 

By Suddi9

Leave a Reply

Your email address will not be published. Required fields are marked *