ಬಂಟ್ವಾಳ:   ಬಂಟ್ವಾಳ ಹಾಗೂ ಸುಳ್ಯ ತಾಲೂಕು ವ್ಯಾಪ್ತಿಯಲ್ಲಿ ಸಂಭವಿಸಿದ ಅನಾಹುತಗಳಿಗೆ ಸಂಬಂಧಿಸಿದಂತೆ ಪರಿಹಾರ ನೀಡಲು ಸರಕಾರಕ್ಕೆ ಸಲ್ಲಿಸಿದ ಮನವಿಗೆ ಒಟ್ಟು 25 ಲಕ್ಷ ಪರಿಹಾರ ನೀಡಲು ಅನುಮೋದನೆ ದೊರೆತಿದೆ ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.
ಮುರುಳ್ಯ ಹಾಗೂ ಬರಿಮಾರು ಪ್ರಕರಣಗಳಿಗೆ ಪ್ರಾಕೃತಿಕ ವಿಕೋಪ ಪರಿಹಾರ ಹಾಗೂ ಲಾವಣ್ಯ ಹತ್ಯೆಗೆ ಸಂಬಂಧಿಸಿ ವಿಶೇಷ ಪ್ರಕರಣವೆಂದು ಪರಿಗಣಿಸಿ ಮುಖ್ಯಮಂತ್ರಿಗಳ ವಿವೇಚನೆಯ ಪರಿಹಾರ ನೀಡಲಾಗಿದೆ. ಬರಿಮಾರುನಲ್ಲಿ ಬಸ್ಸಿಗೆ ಮರ ಬಿದ್ದ ಪ್ರಕರಣದಲ್ಲಿ ಗಾಯಾಳುಗಳಿಗೆ ಚಿಕಿತ್ಸಾ ವೆಚ್ಚಕ್ಕೆ ಸಂಬಂಧಿಸಿ ಸಂಪರ್ಕಿಸಿದರೆ ಸ್ಪಂದಿಸುತ್ತೇನೆ ಎಂದು ಹೇಳಿದರು.

ಅನಾಹುತಗಳು ನಡೆದಾಗ ರಾಜಕೀಯ ಪಕ್ಷದವರು ಭೇಟಿ ನೀಡಿ, ಸೋಶಿಯಲ್ ಮೀಡಿಯಾಗಳಲ್ಲಿ ಹೇಳಿಕೆಗಳನ್ನು ಕೊಟ್ಟುಕೊಂಡು ವೈಯಕ್ತಿಕ ಪ್ರಚಾರ ಪಡೆಯುತ್ತಾರೆ. ಕಾಂಗ್ರೆಸ್, ಬಿಜೆಪಿ ಅಥವಾ ಯಾರೇ ಆಗಲಿ ಅಂತಹ ಸಂದರ್ಭದಲ್ಲಿ ಇನ್ನೊಬ್ಬರ ಮೇಲೆ ಗೂಬೆ ಕೂರಿಸದೆ ಸಾಂತ್ವನ ಹೇಳುವ ಜತೆಗೆ ಪರಿಹಾರ ಕೊಡಿಸುವುದು ಮಾನವೀಯತೆ ಎಂದರು.

ಬಿ.ಸಿ. ರೋಡು ಬಸ್ಸು ನಿಲ್ದಾಣದಲ್ಲಿ ನಡೆದ ಯುವತಿ ಲಾವಣ್ಯ ಅವರ ಅಮಾನುಷ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸರಕಾರದ ಮಟ್ಟದಲ್ಲಿ ಮಾತನಾಡಿ ಪರಿಹಾರ ನೀಡುವ ಭರವಸೆ ನೀಡಿದ್ದೆವು. 6 ದಿನಗಳಲ್ಲಿ 10 ಲಕ್ಷ ಪರಿಹಾರದ ಆದೇಶ ಮುಖ್ಯಮಂತ್ರಿಗಳಿಂದ ಆಗಿದೆ. ಸುಳ್ಯ ತಾಲೂಕಿನ ಮುರುಳ್ಯದಲ್ಲಿ 5 ವರ್ಷ ಪ್ರಾಯದ ಅವಳಿ ಮಕ್ಕಳು ನೀರಿಗೆ ಬಿದ್ದು ಮೃತಪಟ್ಟ ಘಟನೆ ನಡೆದಿದ್ದು, 10-15 ಮಂದಿ ನನ್ನನ್ನು ಭೇಟಿ ಮಾಡಿ ಪರಿಹಾರಕ್ಕೆ ಮನವಿ ಮಾಡಿದ್ದರು. ಸಿಎಂ ಜತೆ ಮಾತುಕತೆ ಮಾಡಿ ಇಬ್ಬರು ಮಕ್ಕಳ ಪರವಾಗಿ ತಲಾ 5 ಲಕ್ಷ ಬಿಡುಗಡೆಗೆ ಆದೇಶ ಆಗಿದೆ. ಬರಿಮಾರಿನಲ್ಲಿ ಬಸ್ಸಿನ ಮೇಲೆ ಮರ ಬಿದ್ದ ಪರಿಣಾಮ ಮೃತಪಟ್ಟ 5 ವರ್ಷದ ಬಾಲಕಿಗೆ ರೂ. 5 ಲಕ್ಷ ಪರಿಹಾರ ಸರಕಾರದಿಂದ ಮಂಜೂರಾಗಿದೆ ಎಂದರು.
ಪರಿಹಾರ ಪತ್ರ ವಿತರಣೆ
ಸುಳ್ಯ ತಾಲೂಕಿನ ಮುರುಳ್ಯದಲ್ಲಿ ಮೃತಪಟ್ಟ ಅವಳಿ ಮಕ್ಕಳ ಸಂಬಂಧಿಕರಿಗೆ ಶಾಸಕರ ಮನೆಯಲ್ಲಿ ಪರಿಹಾರದ ಚೆಕ್ ವಿತರಿಸಲಾಯಿತು. ಬಳಿಕ ಮೃತ ಲಾವಣ್ಯ ಅವರ ಮನೆಗೆ ತೆರಳಿದ ಶಾಸಕರು 10 ಲಕ್ಷ ಪರಿಹಾರದ ಅನುಮೋದನೆ ಪತ್ರ ನೀಡಿ ಮನೆಯವರಿಗೆ ಸಾಂತ್ವನ ಹೇಳಿದರು. ಮೃತ ಲಾವಣ್ಯ ಅವರ ಸಹೋದರಿಗೆ ಮುಂದಿನ ದಿನಗಳಲ್ಲಿ ಮೆಡಿಕಲ್ ಕಾಲೇಜಿಗೆ ಸಂಬಂಧಿಸಿದ ವ್ಯವಸ್ಥೆಯಲ್ಲಿ ಉದ್ಯೋಗ ಕೊಡಿಸುವ ಭರವಸೆಯನ್ನು ಶಾಸಕರು ನೀಡಿದರು. ಅನಂತರ ಪೆರ್ನೆಯಲ್ಲಿನ ಬಾಲಕಿ ಚಿರನ್ವಿ ಅವರ ಮನೆಗೆ ತೆರಳಿಗೆ ತಂದೆ-ತಾಯಿಗೆ 5 ಪರಿಹಾರದ ಅನುಮೋದನೆ ಪತ್ರವನ್ನು ಶಾಸಕ ಅಶೋಕ್ ರೈ ನೀಡಿದರು.
ಈ ಸಂದರ್ಭದಲ್ಲಿ ಉಮಾನಾಥ ಶೆಟ್ಟಿ ಪೆರ್ನೆ, ಕೃಷ್ಣಪ್ರಸಾದ್ ಆಳ್ವ, ಯು.ಟಿ. ತೌಸಿಫ್, ಡಾ.ರಾಜಾರಾಂ ಕೆ.ಬಿ., ಜಯಪ್ರಕಾಶ್ ಬದಿನಾರು ಮೊದಲಾದವರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *