ಕೈಕಂಬ: ಮಂಗಳೂರು ಪಡುಪೆರಾರ ಗ್ರಾಮ ಪಂಚಾಯತ್‌ನ 2026-27ನೇ ಸಾಲಿನ ಮಹಿಳಾ ಗ್ರಾಮಸಭೆ ಆಡಳಿತಾಧಿಕಾರಿ ವೀಣಾ ಅವರ ಅಧ್ಯಕ್ಷತೆಯಲ್ಲಿ ಜು. 8 ರಂದು ಪಂಚಾಯತ್ ಸಭಾಗೃಹದಲ್ಲಿ ನಡೆಯಿತು.

ಪಡುಪೆರಾರ ಪಿಎಚ್‌ಸಿ ವ್ಯಾಪ್ತಿಯ ಎಎನ್‌ಎಂ ಮುಮ್ತಾಝ್ ಮಾತನಾಡಿ, ಮಳೆಗಾಲದಲ್ಲಿ ಮನೆಗಳ ಸುತ್ತಲ ಪ್ರದೇಶದಲ್ಲಿ ನೀರು ಜಮೆ ಆಗದಂತೆ ನೋಡಿಕೊಳ್ಳಬೇಕು. ಕೊಳಚೆ ನೀರು ಶೇಖರಣೆ ಜಾಗದಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿ ಡೆಂಗ್ಯೂ ಮತ್ತಿತರ ಕಾಯಿಲೆಗಳು ಹರಡುತ್ತವೆ. ಸಾಂಕ್ರಾಮಿಕ ರೋಗಗಳ ಬಗ್ಗೆ ಗ್ರಾಮೀಣ ಜನರು ಹೆಚ್ಚು ಜಾಗೃತೆ ವಹಿಸಬೇಕು ಎಂದರು.

ಸಂಪನ್ಮೂಲ ವ್ಯಕ್ತಿ, ವಕೀಲೆ ಲೊಲೀನಾ ವಿ. ಲೋಬೊ ಮಾತನಾಡಿ, ಕೆಲವು ಪ್ರಕರಣಗಳಿಗೆ ಸಂಬಂಧಿಸಿದಂತೆ ಉಚಿತ ಕಾನೂನು ನೆರವು ಲಭ್ಯವಿದೆ. ಕೆಲಸ ಮಾಡುವ ಜಾಗದಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಲ್ಲಿ ಆಂತರಿಕ ಸಮಿತಿಗೆ ದೂರು ನೀಡಲು ಅವಕಾಶವಿದೆ. ಸಮಿತಿಯು ವಿಚಾರಣೆ ನಡೆಸಿ, 60 ದಿನದಲ್ಲಿ ಸೂಕ್ತ ಕ್ರಮ ಜರುಗಿಸುತ್ತದೆ ಎಂದವರು, ಪೋಕ್ಸೊ ಕಾಯ್ದೆ ಬಗ್ಗೆ ಮಾಹಿತಿ ನೀಡಿದರು.

ಪಂಚಾಯತ್ ಪಿಡಿಒ ಅನಿತಾ ಕ್ಯಾಥರಿನ್ ಅವರು ಮಾತನಾಡಿ, ಪಂಚಾಯತ್ ವ್ಯಾಪ್ತಿಯಲ್ಲಿ ಘನತ್ಯಾಜ್ಯ ವಿಲೇವಾರಿ, ಹಸಿ ಮತ್ತು ಒಣ ಕಸ ಬೇರ್ಪಡಿಸುವಿಕೆ, ಕಾನೂನು ಉಲ್ಲಂಘಿಸುವವರ ಮೇಲೆ ಹದ್ದಿನ ಕಣ್ಣಿಡಲು ಆಯಕಟ್ಟಿನ ಜಾಗಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲು ಕ್ರಮ ಜರುಗಿಸಲಾಗುವುದು. ಎಲ್ಲೆಂದರಲ್ಲಿ ಕಸ ಎಸೆಯುವವರ ವಿರುದ್ಧ ಕ್ರಮ ಜರುಗಿಸುವಲ್ಲಿ ಸಾರ್ವಜನಿಕರು ಪಂಚಾಯತ್‌ನೊಂದಿಗೆ ಸಹಕರಿಸಬೇಕು ಎಂದರು.

ಸಭೆಯಲ್ಲಿ ಆಡಳಿತಾಧಿಕಾರಿ ವೀಣಾ, ಪಿಡಿಒ ಅನಿತಾ ಕ್ಯಾಥರಿನ್, ಅಡ್ವಕೇಟ್ ಲೊಲಿನೊ ವಿ. ಲೋಬೊ, ಪಂಚಾಯತ್ ದ್ವಿತೀಯ ದರ್ಜೆ ಲೆಕ್ಕ ಸಹಾಯಕಿ(ಎಸ್‌ಡಿಎ) ರೇವತಿ, ಎಎನ್‌ಎಂ ಮುಮ್ತಾಝ್ ಹಾಗೂ ಪಡೆಪೆರಾರ ಮತ್ತು ಮೂಡುಪೆರಾರ ಗ್ರಾಮಗಳ ಮಹಿಳೆಯರು, ಪಂಚಾಯತ್ ಸಿಬ್ಬಂದಿ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಸಿಬ್ಬಂದಿ ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *