ಬಂಟ್ವಾಳ: ಹಿಂದೂ ಧರ್ಮ, ಶ್ರೀರಾಮ ಹಾಗೂ ಹಿಂದೂ ದೇವತೆಗಳ ಕುರಿತು ಅವಹೇಳನಕಾರಿ ಮತ್ತು ಪ್ರಚೋದನಕಾರಿ ಹೇಳಿಕೆ ನೀಡಿರುವ ಪ್ರೊ. ಕೆ. ಎಸ್. ಭಗವಾನ್ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿ ಹಾಗೂ ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ ವತಿಯಿಂದ ಜಂಟಿಯಾಗಿ ಬಂಟ್ವಾಳ ತಹಶೀಲ್ದಾರರ ಮಂಜುನಾಥ್ ಅವರ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಪ್ರೊ. ಕೆ. ಎಸ್. ಭಗವಾನ್ , ಪ್ರಭು ಶ್ರೀರಾಮನ ಜನನ, ಹಿಂದೂ ಧರ್ಮದ ಶ್ರದ್ಧಾಕೇಂದ್ರಗಳು ಹಾಗೂ ಆಚರಣೆಗಳ ಕುರಿತು ಅತ್ಯಂತ ಅಶ್ಲೀಲ, ಧರ್ಮದ್ರೋಹಿ, ಆಧಾರರಹಿತ ಹೇಳಿಕೆಗಳನ್ನು ನೀಡಿದ್ದು, ಈ ವಿವಾದಾತ್ಮಕ ಹೇಳಿಕೆ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿದ್ದು, ಕೋಟ್ಯಂತರ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ತೀವ್ರ ನೋವುಂಟುಮಾಡಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಇಂತಹ ಪ್ರಚೋದನಾತ್ಮಕ ಹೇಳಿಕೆಗಳು ಸಮಾಜದಲ್ಲಿ ಶಾಂತಿ-ಸುವ್ಯವಸ್ಥೆಯನ್ನು ಕದಡುವ ಹಾಗೂ ಸಮುದಾಯಗಳ ನಡುವೆ ವೈಮನಸ್ಸು ಬೆಳೆಸುವ ವ್ಯವಸ್ಥಿತ ಸಂಚಾಗಿದೆ ಎಂದು ಸಮಿತಿ ಮನವಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದೆ.
ಪ್ರೊ. ಕೆ. ಎಸ್. ಭಗವಾನ್ ಈ ಹಿಂದೆಯೂ ಹಲವು ಬಾರಿ ಹಿಂದೂ ಧರ್ಮಗ್ರಂಥಗಳು, ಪುರಾಣಗಳು ಮತ್ತು ದೇವ-ದೇವತೆಗಳ ಕುರಿತು ಇಂತಹದ್ದೇ ವಿಕೃತ ಹಾಗೂ ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಸಾರ್ವಜನಿಕ ಶಾಂತಿಗೆ ಧಕ್ಕೆ ತಂದ ಇತಿಹಾಸ ಹೊಂದಿದ್ದಾರೆ. ಭಾರತೀಯ ಸಂವಿಧಾನವು ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯವು ವೈಚಾರಿಕತೆಯ ಹೆಸರಿನಲ್ಲಿ ಯಾವುದೇ ಧರ್ಮ, ಶ್ರದ್ಧೆ ಅಥವಾ ಕೋಟ್ಯಂತರ ಜನರ ನಂಬಿಕೆಯನ್ನು ಹೀಯಾಳಿಸುವ ಮತ್ತು ಅವಹೇಳನ ಮಾಡುವ ಹಕ್ಕನ್ನು ಯಾರಿಗೂ ನೀಡಿಲ್ಲ,ಸರ್ಕಾರವು ಈ ಪ್ರಚೋದನಾತ್ಮಕ ಭಾಷಣದ ಸಂಪೂರ್ಣ ವಿಡಿಯೋ ಮತ್ತು ಧ್ವನಿಮುದ್ರಣ ಸಾಕ್ಷ್ಯಗಳನ್ನು ಗಂಭೀರವಾಗಿ ಪರಿಶೀಲಿಸಿ, ಅವರ ವಿರುದ್ಧ ಸೂಕ್ತ ಕಾನೂನು ಪ್ರಕರಣ ದಾಖಲಿಸಿ ತಕ್ಷಣವೇ ಬಂಧಿಸಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯು ಒತ್ತಾಯಿಸಿದೆ.
ತಹಶೀಲ್ದಾರರಿಗೆ ಮನವಿ ಸಲ್ಲಿಸಿದ ವೇಳೆ ಹಿಂದೂ ಮುಖಂಡರಾದ ಅಶೋಕ್ ಶೆಟ್ಟಿ ಸರಪಾಡಿ, ಪ್ರಭಾಕರ ಪ್ರಭು, ಲೋಹಿತ್ ಪನೊಲಿಬೈಲ್, ರಂಜಿತ್ ರಾವ್, ಶೇಖರ ಕೊಟ್ಟಾರಿ, ರಾಜಮಾಣಿ, ರಾಜರಾಮ ಐತಾಳ್, ನಾಗೇಶ್ ಕುದನೆ, ಪ್ರಣಾಮ್ ರಾಜ್, ರಾಮಣ್ಣ, ಗಿರೀಶ್ ಹೆಗ್ಗಡೆ, ಸುರೇಶ್ ರೈ, ಗಣೇಶ್, ನಾರಾಯಣ, ಜಯಾನಂದ, ರಾಧಾಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.
