ಉಜಿರೆ: ನಮ್ಮ ಸನಾತನ ಸಂಸ್ಕ್ರತಿ ಮತ್ತು ಪರಂಪರೆಯೊಂದಿಗೆ ವಿಶ್ವಕ್ಕೆ ಭಾರತ ನೀಡಿದ ಅಮೂಲ್ಯ ಕೊಡುಗೆ `ಯೋಗ’ ಆಗಿದ್ದು ಜಾಗತಿಕ ಮಟ್ಟದಲ್ಲಿ ಇದಕ್ಕೆ ಹೆಚ್ಚಿನ ಪ್ರಚಾರ ಅಗತ್ಯವಿದೆ ಎಂದು ವಿಧಾನ ಪರಿಷತ್ ಸದಸ್ಯ ಕೆ.ಪ್ರತಾಪಸಿಂಹ ನಾಯಕ್ ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಅವರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಸಾಂಕೇತಿಕವಾಗಿ ಚಾಲನೆಯನ್ನಿತ್ತರು. ನಾಯಕ್ ಅವರು ಭಾನುವಾರ ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾಭವನದಲ್ಲಿ ೧೨ನೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಉದ್ಘಾಟನಾ ಸಮಾರಂಭದಲ್ಲಿ ಶುಭಾಶಂಸನೆಗೈದು, ನಮ್ಮ ಪಂಚೇಂದ್ರಿಯಗಳ ನಿಯಂತ್ರಣದೊಂದಿಗೆ ದೈಹಿಕ ಹಾಗೂ ಮಾನಸಿಕ ಆರೋಗ್ಯಭಾಗ್ಯ ರಕ್ಷಣೆಗೆ ಯೋಗ ಸಹಕಾರಿಯಾಗಿದೆ. ಆಧುನಿಕ ಜೀವನಶೈಲಿ, ಆಹಾರ-ವಿಹಾರ ವಿಧಾನದಿಂದಾಗಿ ನಾವು ಅನೇಕ ಒತ್ತಡಗಳಿಗೆ ಒಳಗಾಗುತ್ತಿದ್ದು ಸುಖ-ಶಾಂತಿ, ನೆಮ್ಮದಿಯ ಜೀವನಕ್ಕೆ ಯೋಗ ಸಹಕಾರಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಜಾಗತಿಕ ಮಟ್ಟದಲ್ಲಿ ಯೋಗಕ್ಕೆ ಪ್ರಚಾರ ನೀಡುವಲ್ಲಿ ಅಮೂಲ್ಯ ಕೊಡುಗೆ ನೀಡಿದ್ದಾರೆ ಎಂದರು.

ರಾಜೀವ್‌ಗಾಂಧಿ ಆರೋಗ್ಯ ವಿವಿ ಉಪಕುಲಪತಿ ಡಾ| ಭಗವಾನ್ ಬಿ.ಸಿ ಆನ್‌ಲೈನ್ ಮೂಲಕ ಸಂದೇಶ ನೀಡಿ, ಯೋಗಾಭ್ಯಾಸ ನಮ್ಮ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಬೇಕೆಂದು ಸಲಹಿ, ರಾಜೀವ್‌ಗಾಂಧಿ ಆರೋಗ್ಯ ವಿವಿಯ ೪೦೦ ಕಾಲೇಜುಗಳಲ್ಲಿ ೪೫೦೦೦ ವಿದ್ಯಾಥಿüðಗಳು ಯೋಗಾಭ್ಯಾಸ ಮಾಡುತ್ತಿದ್ದಾರೆ ಎಂದರು.
ರಾಜೀವ್‌ಗಾಂಧಿ ಆರೋಗ್ಯ ವಿವಿಯ ಪಠ್ಯಕ್ರಮ ಅಭಿವೃದ್ಧಿ ಕೇಂದ್ರದ ಪ್ರಭಾರ ನಿರ್ದೇಶಕ ಡಾ| ಷಣ್ಮುಖಪ್ಪ ಮಾತನಾಡಿ, ಉಜಿರೆಯ ಎಸ್‌ಡಿಎಂ ಪ್ರಕೃತಿಚಿಕಿತ್ಸಾ ಮತ್ತು ಯೋಗವಿಜ್ಞಾನಗಳ ಕಾಲೇಜು ಆಶ್ರಯದಲ್ಲಿ ವರ್ಷಕ್ಕೊಂದು ಗ್ರಾಮವನ್ನು ದತ್ತು ತೆಗೆದುಕೊಂಡು ಗ್ರಾಮೀಣ ಪ್ರದೇಶದ ಜನರಿಗೆ ಯೋಗಾಭ್ಯಾಸದ ತರಬೇತಿ ನೀಡಬೇಕು ಎಂದು ಸಲಹೆ ನೀಡಿದರು ಹಾಗೂ ರಾಜ್ಯದಲ್ಲಿ ೧೮ ಯೋಗವಿಜ್ಞಾನ ಮತ್ತು ಪ್ರಕೃತಿಚಿಕಿತ್ಸಾ ಪದವಿ ಕಾಲೇಜುಗಳಿದ್ದು ಉಜಿರೆ ಕಾಲೇಜು ಮತ್ತು ಶಾಂತಿವನ ಪ್ರಕೃತಿಚಿಕಿತ್ಸಾ ಆಸ್ಪತ್ರೆಯ ಸೇವೆ ಮತ್ತು ಸಾಧನೆಗೆ ಅಭಿನಂದಿಸಿದರು. ಹಾಗೂ ಉಜಿರೆಯ ಕಾಲೇಜ್‌ನಲ್ಲಿ ಅನಸ್ತೇಶಿಯಾ ಮತ್ತು ಅಕ್ಯುಪಂಕ್ಚರ್‌ನಲ್ಲಿ ಸ್ನಾತಕೋತ್ತರ ಪದವಿ ತರಗತಿಗಳಿಗೆ ಅನುಮತಿ ಕೋರಿದ್ದು ಸದ್ಯದಲ್ಲೆ ಅನುಮೋದನೆ ನೀಡಲಾಗುವುದು ಎಂದು ಅವರು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಬೆಂಗಳೂರಿನ ಕುಮಾರಿ ಚಿನ್ಮಯಿ ಅವರಿಗೆ `ಯೋಗರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಶಾಂತಿವನ ಪ್ರಕೃತಿಚಿಕಿತ್ಸಾ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ| ಶಿವಪ್ರಸಾದ ಶೆಟ್ಟಿ ವರದಿ ಸಾದರಪಡಿಸಿ ಶಾಲಾ-ಕಾಲೇಜುಗಳಲ್ಲಿ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಯೋಗ ಶಿಬಿರ ನಡೆಸಿ, ಆರೋಗ್ಯ ರಕ್ಷಣೆ ಬಗ್ಯೆ ಅರಿವು, ಜಾಗೃತಿ ಮೂಡಿಸಲಾಗುತ್ತದೆ ಎಂದರು.

ಸಾಮೂಹಿಕ ಯೋಗ ಪ್ರದರ್ಶನ ನಡೆಸಲಾಗಿದ್ದು ಎಸ್‌ಡಿಎಂ ಯೋಗವಿಜ್ಞಾನಗಳ ಮತ್ತು ಪ್ರಕೃತಿಚಿಕಿತ್ಸಾ ಕಾಲೇಜ್‌ನ ಪ್ರಾಂಶುಪಾಲ ಡಾ| ಪ್ರಶಾಂತ ಶೆಟ್ಟಿ ಸ್ವಾಗತಿಸಿದರು. ಡಾ| ಅನನ್ಯ ಕಾರ್ಯಕ್ರಮ ನಿರ್ವಹಿಸಿದರು. ಉಪಪ್ರಾಂಶುಪಾಲೆ ಡಾ| ಸುಜಾತ ಕೆ.ಜೆ ಧನ್ಯವದಿಸಿದರು.

