ಬಂಟ್ವಾಳ:ಯುವ ವಕೀಲರು ಕೋರ್ಟು ಕಲಾಪಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದಲ್ಲದೆ ಅಧ್ಯಯನ ಶೀಲರಾದಾಗ ಕಕ್ಷಿದಾರನಿಗೂ ಸಹಾಯವಾಗುತ್ತದೆ.ಜೀವನದಲ್ಲಿ ಉತ್ತಮ ಅವಕಾಶಗಳು ಬಂದಾಗ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕೆ.ಪಿ.ಎಸ್.ಸಿ.ಇಲಾಖೆಯ ಕಾನೂನು ಸಲಹೆಗಾರ , ನಿವೃತ್ತ ಜಿಲ್ಲಾ ನ್ಯಾಯದೀಶ ಯು.ಚಂದ್ರಶೇಖರ್ ಅವರು ಹೇಳಿದರು.

ಬಂಟ್ವಾಳ ನ್ಯಾಯಾಲಯದ ಕಚೇರಿಯಲ್ಲಿ ಬುಧವಾರ ಬಂಟ್ವಾಳ ವಕೀಲರ ಸಂಘ ( ರಿ.)ದ ಆಶ್ರಯದಲ್ಲಿ ನ್ಯಾಯಾಂಗ ಸೇವೆ ಪರೀಕ್ಷೆ ಸಿದ್ದತೆ ಕುರಿತ ಕಾರ್ಯಗಾರದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಅತಿಥಿಯಾಗಿದ್ದ ಬಂಟ್ವಾಳ ಪ್ರಧಾನ ಹಿರಿಯ ಮತ್ತು ಜೆ.ಎಮ್.ಎಫ್.ಸಿ. ನ್ಯಾಯಾಧೀಶರಾದ ಅನಿಲ್ ಪ್ರಕಾಶ್ ಎಂ.ಪಿ. ಅವರು ಮಾತನಾಡಿ,ಇಲ್ಲಿನ ವಕೀಲರುಗಳ ಸಹಕಾರದಿಂದ ಕಳೆದೊಂದು ವರ್ಷದಿಂದ ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ನೂತನ ನ್ಯಾಯದೀಶರಿಗೂ ಸಹಕಾರ ನೀಡುವಂತೆ ಕೋರಿದರು. ಈ ಕಾರ್ಯಗಾರ ತುಂಬಾ ಪ್ರಯೋಜನಕಾರಿಯಾಗಿದೆ. ಯುವ ವಕೀಲರು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದರು.
ಇದೇ ವೇಳೆ ಬಂಟ್ವಾಳ ಪ್ರಧಾನ ಸಿವಿಲ್ ನ್ಯಾಯಾಲಯಕ್ಕೆ ವರ್ಗಾವಣೆಗೊಂಡ ರಾಜೇಂದ್ರಪ್ರಸಾದ್ ಕೆ.ಎಸ್. ಅವರನ್ನು ಸ್ವಾಗತಿಸಲಾಯಿತು.ಹಾಗೆಯೇ ಹೆಚ್ಚುವರಿ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯದೀಶೆಯಾಗಿ ನಿಯುಕ್ತಿಗೊಂಡ ಕು.ಸೌಂದರ್ಯ ಎಮ್ .ಅವರನ್ನು ಸ್ವಾಗತಿಸಲಾಯಿತು.ಸಭಾಧ್ಯಕ್ಷತೆ ವಹಿಸಿದ್ದ ಬಂಟ್ವಾಳ ವಕೀಲರ ಸಂಘದ ಅಧ್ಯಕ್ಷ ರಿಚರ್ಡ್ ಡಿ.ಕೋಸ್ತ ಮಾತನಾಡಿ, ಬಂಟ್ವಾಳ ವಕೀಲರ ಸಂಘ ನಿರಂತರವಾಗಿ ನ್ಯಾಯಾಲಯದ ಜೊತೆ ಸಮನ್ವಯದ ಸೇವೆ ಸಲ್ಲಿಸುತ್ತಿದೆ ಎಂದು ತಿಳಿಸಿದರು.
ಸಂಘದ ಜತೆ ಕಾರ್ಯದರ್ಶಿ ಅಕ್ಷತಾ ಶೆಟ್ಟಿ ನೂತನ ನ್ಯಾಯದೀಶರ ಪರಿಚಯಿದರು. ಕಾರ್ಯದರ್ಶಿ ಕೆ. ನರೇಂದ್ರನಾಥ್ ಭಂಡಾರಿ ಸ್ವಾಗತಿಸಿದರು. ಉಪಾಧ್ಯಕ್ಷ ದಯಾನಂದ ರೈ ವಂದಿಸಿದರು.ಯುವ ವಕೀಲೆ ಮೆಲ್ವಿಶಾ ಪ್ರೀತಿ ಡಿ.ಸೋಜ ಕಾರ್ಯಕ್ರಮ ನಿರೂಪಿಸಿದರು.
