ಬಂಟ್ವಾಳ: ವಿಶ್ವಹಿಂದೂ ಪರಿಷತ್, ಬಜರಂಗದಳ ಬಂಟ್ವಾಳ ಪ್ರಖಂಡದ ವತಿಯಿಂದ ಸಾವಿರ ಸೀಮೆಯ ಒಡತಿ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ” ಅಮ್ಮನೆಡೆಗೆ ನಮ್ಮ ನಡಿಗೆ” ಪಾದಾಯಾತ್ರೆಯನ್ನು ಎ.5 ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ವಿ.ಹಿ.ಪ.ನ ಬಂಟ್ವಾಳ ಪ್ರಖಂಡದ ಅಧ್ಯಕ್ಷ,ನ್ಯಾಯವಾದಿ ಪ್ರಸಾದ್ ಕುಮಾರ್ ರೈ ತಿಳಿಸಿದ್ದಾರೆ.
ಬುಧವಾರ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಪಾದಯಾತ್ರೆಯ ಅಂದು ಬೆಳಗ್ಗೆ 5.30 ಕ್ಕೆ ಬಿ.ಸಿ.ರೋಡಿನ ಕೈಕಂಬ ಪೊಳಲಿ ದ್ವಾರ, ಕಡೆಗೋಳಿ ಪೊಳಲಿ ದ್ವಾರ ಹಾಗೂ ಗುರುಪುರ ಕೈಕಂಬ ಪೊಳಲಿ ದ್ವಾರದ ಬಳಿಯಿಂದ ಏಕಕಾಲಕ್ಕೆ ಪ್ರಾರಂಭವಾಗಲಿದ್ದು,,ಸುಮಾರು 9 ಗಂಟೆಗೆ ಪೊಳಲಿ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಸಂಪನ್ನಗೊಳ್ಳಲಿದೆ ಸಾವಿರಾರು ಸಂಖ್ಯೆಯಲ್ಲಿ ಹಿಂದೂ ಸಮಾಜದ ಬಂಧುಗಳು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ದೇವಳದ ಆಡಳಿತ ಮಂಡಳಿ,ಶಾಸಕ ರಾಜೇಶ್ ನಾಯ್ಕ್,ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ ಅವರಿಗೆ ವಿವಿಧ ಬೇಡಿಕೆಗಳ ಮನವಿಯನ್ನು ಸಲ್ಲಿಸಿ ಅವುಗಳನ್ನು ಕಾರ್ಯರೂಪಕ್ಕೆ ತರುವಂತೆ ಒತ್ತಾಯಿಸಲಾಗುವುದು ಎಂದು ಪ್ರಸಾದ್ ಕುಮಾರ್ ವಿವರಿಸಿದರು. ಹಿಂದೂ ಧರ್ಮದ ಮೇಲೆ ಆಗುತ್ತಿರುವ ಬೇರೆ ಬೇರೆ ರೀತಿಯ ಆಕ್ರಮಣಗಳಿಗೆ ಹಾಗೂ ಧರ್ಮಕ್ಕಾಗುತ್ತಿರುವ ತೊಂದರೆಯಿಂದ ರಕ್ಷಿಸುವ ಕಾರ್ಯ ಆಗಬೇಕು ಎಂಬುದು ಮೂಲ ಉದ್ದೇಶವಾಗಿದೆ.
ಅನೇಕ ಕಡೆಗಳಲ್ಲಿ ದೇವಸ್ಥಾನದ ಪಾವಿತ್ರತೆಯನ್ನು ಹಾಳುಗೆಡಹುವುವ ಪ್ರಯತ್ನಗಳು ನಡೆಯುತ್ತಿವೆ. ಅಲ್ಲದೆ ದೇವಸ್ಥಾನದ ಮೂಲ ನಂಬಿಕೆಗಳು, ಸಂಸ್ಕಾರಗಳು ಮುಂದಿನ ಜನಾಂಗಕ್ಕೆ ಉಳಿಯಬೇಕು ಎಂದು ತಿಳಿಸಿದರು.
ಮನವಿಯಲ್ಲಿ ಏನೇನು ಇರಲಿದೆ..
ದೇವಳಕ್ಕಾಗಮಿಸುವ ಭಕ್ತರಿಗೆ ಹಿಂದೂ ಸಂಸ್ಕೃತಿಗೆ ಪೂರಕವಾದ ವಸ್ತ್ರ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದು, ದೇವಸ್ಥಾನದ ವಠಾರದಲ್ಲಿ ಇಲ್ಲವೇ ಯೋಗ್ಯ ಸ್ಥಳದಲ್ಲಿ ಸುಸಜ್ಜಿತವಾದ ಗೋ ಶಾಲೆಯ ನಿರ್ಮಾಣ ಮತ್ತು ನಿರ್ವಹಣೆಯನ್ನು ಮಾಡುವುದು,
ಬಾಲಕ-ಬಾಲಕಿಯರಿಗೆ ಹಿಂದೂ ಸಂಪ್ರದಾಯದ ಧಾರ್ಮಿಕ ಸಂಸ್ಕಾರ ನೀಡುವ ವಿಚಾರಗಳನ್ನು ಬೋಧಿಸುವ ನಿಟ್ಟಿನಲ್ಲಿ ದೇವಸ್ಥಾನದ ವತಿಯಿಂದ ಹಿಂದೂ ಬಾಲ ಸಂಸ್ಕಾರ ಕೇಂದ್ರವನ್ನು ತೆರೆದು ಹಿಂದೂ ಧಾರ್ಮಿಕ ಶಿಕ್ಷಣವನ್ನು ನೀಡುವುದು,ದೇವಸ್ಥಾನದಲ್ಲಿ ವರ್ಷದಲ್ಲಿ ಒಂದು ಬಾರಿಯಾದರೂ ಹಿಂದೂ ಬಂಧುಗಳಿಗೆ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಏರ್ಪಡಿಸುವುದು,
ಜಾತ್ರಾ ಮಹೋತ್ಸವ,ಉತ್ಸವಾದಿಗಳ ಸಂದರ್ಭದಲ್ಲಿ ಹಿಂದೂ ಧಾರ್ಮಿಕ ದತ್ತಿ ಕಾಯ್ದೆಯನುಸಾರ ಹಿಂದೂಗಳಿಗೆ ಮಾತ್ರ ವ್ಯಾಪಾರ ವ್ಯವಹಾರ ಕೇಂದ್ರಗಳನ್ನು ತೆರೆಯಲು ಅವಕಾಶ ಮಾಡಿಕೊಡುವುದು ಮತ್ತು ಉತ್ಸವಾದಿಗಳ ಸಂದರ್ಭದಲ್ಲಿ ರಾತ್ರಿ ಭೋಜನದ ವ್ಯವಸ್ಥೆಯನ್ನು ಕಲ್ಪಿಸುವುದು ಹಾಗೂ ದೇವಳದ ವತಿಯಿಂದ ಸುವ್ಯವಸ್ಥಿತವಾದ ಭೋಜನ ಶಾಲೆ ನಿರ್ಮಿಸುವುದು,ದೇವಸ್ಥಾನದಲ್ಲಿ ಕಾಣಿಕೆ ರೂಪದಲ್ಲಿ ಹಾಗೂ ಸೇವಾ ರೂಪದಲ್ಲಿ ಸಂಗ್ರಹವಾದ ಹಣವನ್ನು ಹಿಂದೂ ಧಾರ್ಮಿಕ ಹಾಗೂ ಧರ್ಮದಾಯ ಧತ್ತಿ ಕಾಯ್ದೆಗನುಗುಣವಾಗಿ ಹಿಂದೂ ಧರ್ಮ ಮತ್ತು ಸಂಸ್ಕೃತಿಯ ರಕ್ಷಣೆಗೆ ಅವಶ್ಯಕವಾದ ಪೂರಕ ಕ್ರಮಗಳಿಗೆ ವಿನಿಯೋಗಿಸುವಂತೆ ಒತ್ತಾಯಿಸಲಾಗುವುದು ಎಂದು ಅವರು ತಿಳಿಸಿದರು.
ಪೊಳಲಿ ಶ್ರೀರಾಜರಾಜೇಶ್ವರೀ ದೇವಾಲಯವು “ಎ” ಮಾನ್ಯತೆ ಪಡೆದ ದೇವಸ್ಥಾನವಾಗಿದ್ದು,ಇದರ ಮೂಲಕ ಸಾಮಾಜಿಕ,ಧಾರ್ಮಿಕ ಪರಿವರ್ತನೆಗಳ ಕಾರ್ಯ ಆಗಬೇಕಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ಪ್ರಮುಖರಾದ ದೀಪಕ್ ಅಜೆಕಲ,ಲೋಹಿತ್ ಪಣೋಲಿಬೈಲ್, ಸಂತೋಷ್ ಸರಪಾಡಿಉಪಸ್ಥಿತರಿದ್ದರು.
