ಬಂಟ್ವಾಳ: ಪ್ರಸ್ತುತ ಆಹಾರ ಪದ್ಧತಿಯ ಕಾರಣದಿಂದ ನಮ್ಮ ಆರೋಗ್ಯದಲ್ಲಿ ಏರುಪೇರುಗಳು ಕಂಡುಬರುತ್ತಿದ್ದು, ನಾವು ಕ್ರೀಡೆಯಲ್ಲಿ ನಿರಂತರವಾಗಿ ತೊಡಗಿಕೊಂಡಾಗ ದೈಹಿಕ ಹಾಗೂ ಮಾನಸಿಕ ವ್ಯಾಯಾಯದ ಪರಿಣಾಮ ಆರೋಗ್ಯ ತೊಂದರೆಗಳನ್ನು ದೂರ ಮಾಡುವುದಕ್ಕೆ ಸಾಧ್ಯವಿದೆ. ಹೀಗಾಗಿ ಮಕ್ಕಳು ಕ್ರೀಡೆಯನ್ನು ಬರೀ ಸ್ಪರ್ಧೆಗೆ ಸೀಮಿತಗೊಳಿಸದೆ ಅದನ್ನು ನಿರಂತರವಾಗಿ ಮುಂದುವರಿಸಿಕೊಂಡು ಹೋಗಬೇಕು ಎಂದು ಚಿತ್ರನಟ ನಿತ್ಯಪ್ರಕಾಶ್ ಬಂಟ್ವಾಳ್ ಹೇಳಿದರು.

ಅವರು ಬಂಟ್ವಾಳ ಎಸ್ವಿಎಸ್ ವಿದ್ಯಾಸಂಸ್ಥೆಯ ಕ್ರೀಡಾಂಗಣದಲ್ಲಿ ಮಂಗಳೂರು ಹಾಗೂ ಬಿ.ಸಿ.ರೋಡಿನಲ್ಲಿ ಕಾರ್ಯಾಚರಿಸುತ್ತಿರುವ ಮೈಟ್ ತಾಂತ್ರಿಕ ಹಾಗೂ ವೃತ್ತಿಪರ ಕಾಲೇಜಿನ ೨೫ನೇ ವರ್ಷಾಚರಣೆಯ ಹಿನ್ನೆಲೆಯಲ್ಲಿ ನಡೆದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ಕಾಲೇಜು ಶಿಕ್ಷಣವನ್ನು ಸಂಭ್ರಮಿಸಬೇಕಿದ್ದು, ಅದರಿಂದ ಕಲಿಕೆಯ ಗುಣಮಟ್ಟ ಹೆಚ್ಚುವ ಜತೆಗೆ ಬದುಕಿನ ಪಾಠವೂ ಲಭ್ಯವಾಗುತ್ತದೆ ಎಂದರು.
ಕಾಲೇಜಿನ ಪ್ರಾಂಶುಪಾಲ ರಾಕೇಶ್ಕುಮಾರ್ ಪ್ರಸ್ತಾವನೈಗೈದು, ವೃತ್ತಿಪರ ಶಿಕ್ಷಣವನ್ನು ಮಕ್ಕಳಿಗೆ ಬೋಽಸುವ ನಿಟ್ಟಿನಲ್ಲಿ ಮೈಟ್ ಕಾಲೇಜು ೨೦೦೧ರಲ್ಲಿ ಮಂಗಳೂರಿನ ಪಂಪುವೆಲ್ನಲ್ಲಿ ಆರಂಭಗೊಂಡಿದ್ದು, ಬಳಿಕ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನುಕೂಲದ ದೃಷ್ಟಿಯಿಂದ ೨೦೦೫ರಲ್ಲಿ ಕಾಲೇಜುನ್ನು ಬಿ.ಸಿ.ರೋಡಿಗೂ ವಿಸ್ತರಿಸಲಾಗಿದೆ. ಪ್ರಸ್ತುತ ಸಂಸ್ಥೆಯು ೨೫ನೇ ವರ್ಷದ ಸಂಭ್ರಮದಲ್ಲಿದ್ದು, ಸಾವಿರಾರು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಿದ ಹೆಗ್ಗಳಿಕೆ ಸಂಸ್ಥೆಯದ್ದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಉಪಪ್ರಾಂಶುಪಾಲೆ ನಿಶ್ಮಿತಾ ರಾಕೇಶ್, ಹಿರಿಯ ಉಪನ್ಯಾಸಕ ಮೊಹಮ್ಮದ್ ಆಶ್ರಫ್, ವಿದ್ಯಾರ್ಥಿ ನಾಯಕರಾದ ಯಶವಂತ್, ಶ್ರೇಯಾ, ಉಪನ್ಯಾಸಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕ್ರೀಡಾ ನಾಯಕ ನವಾಜ್ ಅವರು ಕ್ರೀಡಾಜ್ಯೋತಿ ಪಥ ಸಂಚಲನ ನಡೆಸಿದರು. ಕಂಪ್ಯೂಟರ್ ಸಾಫ್ಟ್ವೇರ್ ವಿಭಾಗದ ಉಪನ್ಯಾಸಕಿ ಶಾಂತೇರಿ ಶೆಣೈ ಪ್ರತಿಜ್ಞಾ ವಿಧಿ ಬೋಧಿಸಿದರು. ಮೊಂಟೆಸರಿ ತರಬೇತಿ ವಿಭಾಗದ ಉಪನ್ಯಾಸಕ ಪ್ರತೀಕ್ ಡಿ.ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
