ಬಂಟ್ವಾಳ: ರಾಜ್ಯದ ಯಾವುದೇ ಜಿಲ್ಲೆಯಲ್ಲಿಲ್ಲದ ಕಾನೂನು,ನಿಯಮವನ್ನು ದ.ಕ.ಜಿಲ್ಲೆಯಲ್ಲಿ ಮಾತ್ರ ಹೇರಿ ಕಟ್ಟಡ ಕಾರ್ಮಿಕರು, ಸಾಂಸ್ಕೃತಿಕ ರಂಗದ ಸಹಿತ ಇಡೀ ಕಾರ್ಮಿಕ ಸಮೂಹವನ್ನು ಬೀದಿಪಾಲನ್ನಾಗಿಸುವ ಮೂಲಕ ಜನಸ್ನೇಹಿಯಾಗಬೇಕಾಗಿದ್ದ ಪೊಲೀಸ್ ವ್ಯವಸ್ಥೆಯನ್ನು ಕರ್ನಾಟಕ ಸರಕಾರ ಜನದ್ರೋಹಿಯನ್ನಾಗಿಸಿದೆ ಎಂದು ಖ್ಯಾತ ಯಕ್ಷಗಾನ ಕಲಾವಿದ ದಿನೇಶ್ ಶೆಟ್ಟಿ ಕಾವಳಕಟ್ಟೆ ಆಕ್ರೋಶ ವ್ಯಕ್ತಪಡಿಸಿದ್ದಾರೆ

ಜಿ.ಪಂ.ಮಾಜಿ ಸದಸ್ಯ ತುಂಗಪ್ಪ ಬಂಗೇರ ಅವರ ನೇತೃತ್ವದಲ್ಲಿ ಗುರುವಾರ ಪಿಲತಾಬೆಟ್ಟು ಗ್ರಾ.ಪಂ.ಮುಂಭಾಗ “ಸರಕಾರಕ್ಕೆ ಮತಿಯಿಲ್ಲ- ಕಾರ್ಮಿಕರಿಗೆ ಗತಿಯಿಲ್ಲ” , ” ಭವತಿ ಬಿಕ್ಷಾಂ ದೇಹಿ” ಎಂಬ ಸ್ಲೋಗನ್ ನಡಿ ” ನಡೆದ ವಿನೂತನ ರೀತಿಯ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಕರಾವಳಿ ಜಿಲ್ಲೆಯಲ್ಲಿನ ಸಂಪ್ರದಾಯ, ಸಂಸ್ಕೃತಿ, ದೈವಾರಾಧನೆ, ನಾಗಮಂಡಲ, ದೇವಸ್ಥಾನದ ಜಾತ್ರೆ, ಉತ್ಸಾವಾದಿಗಳು ಅನಾದಿಕಾಲದಿಂದಲೂ ರಾತ್ರಿ ಹೊತ್ತಿನಲ್ಲಿಯೇ ನಡೆಯುವಂತದ್ದು,ಇದನ್ನು ಅಧಿಕಾರಿಗಳು ಮೊದಲಾಗಿ ಆರ್ಥ ಮಾಡಿಕೊಳ್ಳಬೇಕು, ಕೇವಲ ಟ್ಯಾಕ್ಸ್ ವಸೂಲಿಯಿಂದ ಮಾತ್ರ ಸರಕಾರ ನಡೆಸಲು ಸಾಧ್ಯವಿಲ್ಲ, ದೇವಸ್ಥಾನದ ಹುಂಡಿಯ ಹಣವನ್ನು ಕೂಡ ಬಳಸಲಾಗುತ್ತಿದೆ.

ಕೂಲಿ ಕಾರ್ಮಿಕರಿಂದಾಗಿಯೇ ದೇಶದ ಆರ್ಥಿಕ ಸ್ಥಿತಿ ಮೂರನೇ ಸ್ಥಾನಕ್ಕೆ ಬಂದು ನಿಂತಿದೆ ಎಂಬುದು ಗೊತ್ತಿರಲಿ ಎಂದ ಅವರು ಬಡವರ ಮತಪಡೆದು ಆಡಳಿತ ನಡೆಸುವ ಕರ್ನಾಟಕ ಸರಕಾರ ಇದೀಗ ಬಡ ಕೂಲಿಕಾರ್ಮಿಕರನ್ನು ಬೀದಿಗೆ ತಳ್ಳಿ ಮತಿಗೆಟ್ಟವರಂತೆ ವರ್ತಿಸುತ್ತಿದೆ ಎಂದು ಟೀಕಾ ಪ್ರಹಾರಗೈದರು.
ಮಡಂತ್ಯಾರು ಪ್ರಾ.ಕೃ.ಸ.ಸಂಘದ ಅಧ್ಯಕ್ಷ ಜೋಯಲ್ ಮೆಂಡೋನ್ಸ್ ಜಾಥಕ್ಕೆ ಚಾಲನೆ ನೀಡಿ ಮಾತನಾಡಿ, ಕೆಂಪುಕಲ್ಲು,ಮರಳಿನ ಅಭಾವದಿಂದಾಗಿ ಕೂಲಿಕಾರ್ಮಿಕರು ಬೀದಿಗೆ ಬಂದಿದ್ದು, ಸಿದ್ದರಾಮಯ್ಯ ನೇತೃತ್ವದ ದರಿದ್ರ ಸರಕಾರದಿಂದಾಗಿ ವಸತಿ ಸಹಿತ ವಿವಿಧ ಕಟ್ಟಡ ಕಾಮಗಾರಿಗಳು ಸ್ಥಗಿತಗೊಂಡಿದೆ.ಗ್ಯಾರಂಟಿ ಯೋಜನೆಯ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಸರಕಾರ ಜನರ ಜೇಬಿಗೆ ಕತ್ತರಿ ಹಾಕಿ ಲೂಟಿ ಹೊಡೆಯುತ್ತಿದೆ.ಇಂತಹ ಭ್ರಷ್ಟ,ಜನವಿರೋಧಿ ಸರಕಾರವನ್ನು ಕಿತ್ತೊಗೆಯಬೇಕು ಎಂದು ಕಿಡಿಕಾರಿದರು.
ಬಿಜೆಪಿ ಬಂಟ್ವಾಳ ಮಂಡಲದ ಪ್ರ.ಕಾರ್ಯದರ್ಶಿ ಸುದರ್ಶನ್ ಬಜ ಮಾತನಾಡಿ,ದ.ಕ.ಜಿಲ್ಲೆಯ ಜನರು ದುಡಿದು ತಿನ್ನುವವರೇ ಹೊರತು ಬೇಡಿ ತಿನ್ನುವವರಲ್ಲ ಎಂಬುದು ಅಧಿಕಾರಿಗಳ ಗಮನದಲ್ಲಿರಲಿ,ರಾಜ್ಯದ ಯಾವುದೇ ಜಿಲ್ಲೆಯಲ್ಲಿಲ್ಲದ ಕಾನೂನು,ನಿಯಮವನ್ನು ಇಲ್ಲಿನ ಅಧಿಕಾರಿಗಳು ಜಾರಿಗಾಗಿ ದ.ಕ.ಜಿಲ್ಲೆಯನ್ನು ಪ್ರಯೋಗಶಾಲೆಯನ್ನಾಗಿಸಲು ಹೊರಟಿರುವುದು ಖಂಡನೀಯವಾಗಿದೆ.ಜಿಲ್ಲೆಯ ಅಧಿಕಾರಿಗಳು ತಾವು ಕೂಡ ಕೆಲವೊಂದು ಕಾನೂನು, ನಿಯಮವನ್ನು ಪಾಲಿಸುವಲ್ಲಿ ಎಡುವುತ್ತಿರುವುದು ಎಚ್ಚರವಿರಲಿ,ಈ ಬಗ್ಗೆ ನ್ಯಾಯಾಲಯದಲ್ಲಿ ಪ್ರಶ್ನಿಸಿದರೆ ತಮಗೆ ತಿರುಗುಬಾಣವಾಗಬಹುದು ಎಂದರು.
ಜಿ.ಪಂ.ಮಾಜಿ ಸದಸ್ಯ ತುಂಗಪ್ಪ ಬಂಗೇರ ಅವರು ಪ್ರಸ್ತಾವನೆಗೈದು ಕಳೆದ 5 ತಿಂಗಳಿನಿಂದ ಮರಳು,ಕೆಂಪು ಕಲ್ಲು ಲಭ್ಯವಿಲ್ಲದೆ ದ.ಕ.ಜಿಲ್ಲೆಯ ಕೂಲಿ ಕಾರ್ಮಿಕರು,ಮೇಸ್ತ್ರೀಗಳು ಸಹಿತ ಇದಕ್ಕೆ ಸಂಬಂಧಿಸಿದ ಕಾರ್ಮಿಕರು ಕೆಲಸವಿಲ್ಲದೆ ಕಂಗಾಲಾಗಿದ್ದು, ಒಂದು ಹೊತ್ತಿನ ಊಟಕ್ಕು ಪರದಾಡುವಂತಾಗಿದೆ.
ಇದೀಗ ಯಕ್ಷಗಾನ,ನಾಟಕ,ಜನಪದಕಲೆಗೂ ಅಡ್ಡಿಪಡಿಸಿ ಕಿರುಕುಳ ನೀಡಲಾಗುತ್ತಿದೆ.ಇದಕ್ಕೆಲ್ಲ ಕಡಿವಾಣ ಹಾಕಬೇಕಾದರೆ ಕರಾವಳಿಜಿಲ್ಲೆ ತುಳು ರಾಜ್ಯವಾಗಬೇಕು,ಈ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಹೋರಾಡಬೇಕಾಗಿದೆ ಎಂದರು.ಕೂಲಿಕಾರ್ಮಿಕರ ಈ ಸಮಸ್ಯೆಗೆ ಸರಕಾರ,ಜಿಲ್ಲಾಡಳಿತ ಸ್ಪಂದಿಸದಿದ್ದಲ್ಲಿ ಶೀಘ್ರವೇ ಮತ್ತೊಂದು ಸಭೆ ನಡೆಸಿ ತಾಲೂಕು ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.
ಮಡಂತ್ಯಾರಿನಿಂದ ಜಾಥ:
ಇದಕ್ಕು ಮೊದಲು ಪ್ರತಿಭಟನಾಕಾರರುಮಡಂತ್ಯಾರು ಪೇಟೆಯಿಂದ ಪಿಲಾತಬೆಟ್ಟು ಗ್ರಾಮಪಂಚಾಯತ್ ಕಚೇರಿವರೆಗೆ ಜಾಥದ ಮೂಲಕ ಸಾಗಿ ಬಂದರು. ಬಳಿಕ ಪಿಲಾತಬೆಟ್ಟು ಗ್ರಾ.ಪಂ.ಎದುರು ಪ್ರತಿಭಟನಾ ಸಭೆ ನಡೆಯಿತು.
ಈ ಸಂದರ್ಭದಲ್ಲಿ ಕೂಲಿಕಾರ್ಮಿಕರು ಬಟ್ಟಲು ಹಿಡಿದು ಬೀಕ್ಷೆ ಬೇಡಿದರು.ಉಪತಹಶೀಲ್ದಾರ್ ನವೀನ್ ಬೆಂಜನಪದವು ಅವರು ಪ್ರತಿಭಟನಾಕಾರರ ಬಳಿ ಅಗಮಿಸಿ ಮನವಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಪಿಲಾತಬೆಟ್ಟು ಗ್ರಾ.ಪಂ.ಅಧ್ಯಕ್ಷೆ ಶಾರದಾ ,ಸದಸ್ಯೆ ಹರ್ಷಿಣಿ, ಪುರುಷೋತ್ತಮ ಶೆಟ್ಟಿ ವಾಮದಪದವು,ಹರೀಂದ್ರ ಪೈ, ತಾರಾನಾಥ ಕಜೆಕಾರು,ಪಿ.ಎಂ.ಪ್ರಭಾಕರ,ಮಾಧವ ಬಂಗೇರ,ಪ್ರಶಾಂತ್ ಪುಂಜಾಲಕಟ್ಟೆ,ಶಂಕರ ಶಡಟ್ಟಿ ಬೆದ್ರಮಾರ್,ಚಂದ್ರಶೇಖರಶೆಟ್ಟಿ, ಹನೀಫ್ ಪುಂಜಾಲಕಟ್ಟೆ, ಹರೀಶ್ ಪ್ರಭು, ಪುಷ್ಪಾನಂದ,ಅಬ್ದುಲ್ ರಹಿಮಾನ್,ರಮೇಶ್ ಶೆಟ್ಟಿ ಮಜಲೋಡಿ, ನಾರಾಯಣ ಪೂಜಾರಿ, ಸುಂದರ ನಾಯ್ಕ ,ರವಿಶಂಕರ ಹೊಳ್ಳ,ಶೇಖರ ಬದ್ಯಾರು, ಕಾಂತಪ್ಪ ಕರ್ಕೇರ,ದಯಾನಂದ ನಾಯ್ಕ , ಮೆಲ್ವಿನ್ ಕೊರ್ಯ, ಭವಾನಿ ಮಧ್ವ, ದಿನೇಶ್ ಜೇಂಕ್ಯಾರು, ಬೇಬಿರೇಖಾ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಇದೇ ವೇಳೆ ಸರಕಾರದ ವಿರುದ್ಧ ಪ್ರತಿಭಟನಾಕಾರರು ದಿಕ್ಕಾರ ಕೂಗಿದರು
