ಕೈಕಂಬ: ಸೇವೆ, ಕ್ರೀಡೆ, ಸಂಸ್ಕೃತಿ, ಧಾರ್ಮಿಕ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಕಳೆದ ೨೧ ವರ್ಷಗಳಿಂದ ಸೇವೆಗೈಯುತ್ತ ಬಂದಿರುವ ಶ್ರೀ ವಿಜಯವಾಹಿನಿ ಗಂಜಿಮಠ ಸಂಸ್ಥೆಯು ಜು. ೩೧ರಂದು ಗಂಜಿಮಠದ ಸರ್ಕಾರಿ ಉರ್ದು ಮತ್ತು ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ಎಲ್ಲ ಮಕ್ಕಳಿಗೆ ಉಚಿತ ಬರೆಯುವ ಪುಸ್ತಕ ವಿತರಿಸಿತು.

ಪುಸ್ತಕ ವಿತರಿಸಿದ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ಕಾರ್ಯದರ್ಶಿ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ ಪೂಜಾರಿ ಮಾತನಾಡಿ, ಸರ್ಕಾರವು ಶಿಕ್ಷಣ ಕ್ಷೇತ್ರಕ್ಕಾಗಿ ಹಲವು ಮಹತ್ವದ ಯೋಜನೆ ಕೈಗೊಂಡಿದೆ. ಸಾಮಾಜಿಕ ಸಂಸ್ಥೆಗಳು ಸರ್ಕಾರದೊಂದಿಗೆ ಕೈಜೋಡಿಸಿ ಮಕ್ಕಳ ಶಿಕ್ಷಣಕ್ಕೆ ನೆರವಾಗುವಂತಹ ಮಾದರಿ ಕೆಲಸ ಮಾಡಬೇಕು. ಮಕ್ಕಳ ಶಿಕ್ಷಣದಲ್ಲಿ ಪೋಷಕರ ಜವಾಬ್ದಾರಿ ಹೆಚ್ಚಿದೆ. ಮಕ್ಕಳು ಶಾಲಾ ಶಿಕ್ಷಣದೊಂದಿಗೆ ಬೆಳೆದು ಊರು, ರಾಜ್ಯ, ದೇಶಕ್ಕೆ ಆಧಾರವಾಗಬೇಕು ಎಂದರು.

ಕರ್ನಾಟಕ ರಾಜ್ಯ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಬೂಬ ಪೂಜಾರಿ ಮಾತನಾಡಿ, ಸಂಸ್ಥೆಯು ಪಕ್ಷಬೇಧ ಮರೆತು ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಸೇವೆಗೈಯುತ್ತಿದೆ. ಸಂಸ್ಥೆಯ ಅಧ್ಯಕ್ಷರು ಬ್ರಹ್ಮಶ್ರೀ ನಾರಾಯಣ ಗುರುಗಳ ಚಿಂತನೆ ಮುಂದಿಟ್ಟುಕೊAಡು ಉತ್ತಮ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ಶಾಲೆಗಳಲ್ಲಿ ತುಳು ತರಗತಿ ಆರಂಭಕ್ಕೆ ಆಡಳಿತ ಮಂಡಳಿಗಳು ಮುಂದೆ ಬರಬೇಕು. ಯಾಕೆಂದರೆ ತುಳು ಭಾಷೆ ಸದಾ ಜೀವಂತವಾಗಿರಬೇಕು ಎಂದು ಆಶಿಸಿದರು.

ಅಧ್ಯಕ್ಷತೆ ವಹಿಸಿದ್ದ ಗಂಜಿಮಠ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಾಲತಿ ಅವರು ಮಾತನಾಡಿ, ಸಂಸ್ಥೆಯು ಹಲವು ವರ್ಷಗಳಿಂದ ಸಮಾಜಮುಖಿ ಕೆಲಸ ಮಾಡುತ್ತ ಬಂದಿದೆ. ದಾನಿಗಳು ನೀಡಿರುವ ಪುಸ್ತಕದ ಸದುಪಯೋಗಪಡೆದುಕೊಳ್ಳಬೇಕು.
ಭವಿಷ್ಯದಲ್ಲಿ ನಿಮ್ಮಿಂದಲೂ ಇಂತಹ ಸಮಾಜಸೇವೆ ನಡೆಯುವಂತಾಗಲಿ ಎಂದರು.ನಿವೃತ್ತ ಗ್ರಾಮ ಸಹಾಯಕ ಶಿವರಾಮ ಕೊಟ್ಟಾರಿ ಅವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ನಿವೃತ್ತ ಶಿಕ್ಷಕ ಸುಬ್ರಾಯ ಭಟ್ ಅವರು ದೀಪ ಬೆಳಗಿಸಿ ಪುಸ್ತಕ ವಿತರಣೆ ಕಾರ್ಯಕ್ರಮ ಉದ್ಘಾಟಿಸಿದರು. ಶ್ರೀ ವಿಜಯವಾಹಿನಿ ಸಂಸ್ಥೆಯ ಅಧ್ಯಕ್ಷ ಸುನಿಲ್ ಜಿ. ಅವರು ಪ್ರಸ್ತಾವಿಕ ಮಾತನಾಡಿದರು. ಪುಸ್ತಕ ವಿತರಣೆ ಸಮಾರಂಭಕ್ಕೆ ಆಗಮಿಸಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿನಾಯಕ ಕರ್ಭಾರಿ, ತಾಪಂ ಕಾರ್ಯನಿರ್ವಹಣಾಧಿಕಾರಿ ಮಹೇಶ್ ಹೊಳ್ಳ ಅವರು ಮಕ್ಕಳಿಗೆ ಪುಸ್ತಕ ವಿತರಿಸಿದರು.
ಗಂಜಿಮಠ ಗ್ರಾಪಂ ಸದಸ್ಯ ಮೊಹಮ್ಮದ್ ಸಾದಿಕ್, ಗಂಜಿಮಠ ಗ್ರಾಪಂ ಪಿಡಿಒ ಪ್ರಕಾಶ್, ಗ್ರಾಪಂ ಮಾಜಿ ಸದಸ್ಯ ದಾಮೋದರ ಕುಲಾಲ್, ಅಬಕಾರಿ ಇಲಾಖೆಯ ನಿವೃತ್ತ ಅಧೀಕ್ಷಕ ಅಮರನಾಥ ಎಸ್. ಭಂಡಾರಿ, ಎಸ್‌ಡಿಎಂಸಿ ಅಧ್ಯಕ್ಷ ರಿಯಾಝ್, ಶಾಲೆಯ ಮುಖ್ಯ ಶಿಕ್ಷಕಿಯರಾದ ಗ್ರೆಟ್ಟಾ ಡೊಟ್ಟಿವಾಝ್ ಮತ್ತು ಸಮೀಯಾ ಶೇಖ್, ಮಳಲಿ ಬಿಲ್ಲವ ಸಂಘದ ಸದಸ್ಯ ನೀಲಯ ಪೂಜಾರಿ, ಶ್ರೀ ವಿಜಯವಾಹಿನಿ ಸಂಸ್ಥೆಯ ಗೌರವಾಧ್ಯಕ್ಷ ಚಂದ್ರಶೇಖರ ಪೂಜಾರಿ ಅರ್ಬಿ, ಸಂಸ್ಥೆಯ ಸದಸ್ಯ ಜನಾರ್ದನ ಕುಲಾಲ್, ಶಿಕ್ಷಕಿಯರು, ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು. ನಿರೂಪಿಸಿದ ಶಿಕ್ಷಕ ಪ್ರವೀಣ್ ಕುಟಿನ್ಹೊ ವಂದಿಸಿದರು.
