ಬಂಟ್ವಾಳ :ಬಂಟ್ವಾಳ ತಾಲೂಕು ಮಟ್ಟದ ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿಯ ವತಿಯಿಂದ‌ ತಾಲೂಕಿನ ಮೂಡುಪಡುಕೋಡಿ ಗ್ರಾಮದ ಕೊಳಲ ಬಾಕಿಮಾರು ದ.ಕ.ಜಿ.ಪ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜು.25 ರಂದು ಬೆಳಿಗ್ಗೆ ವನಮಹೋತ್ಸವ ಹಾಗೂ ಅಪರಾಹ್ನ 1.30 ಕ್ಕೆ ವಾಮದಪದವು  ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಾದಕ ದ್ರವ್ಯ ವ್ಯಸನ ಮುಕ್ತ ಸಮಾಜ ಜನ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಮಿತಿಯ ಅಧ್ಯಕ್ಷೆ ಜಯಂತಿ ವಿ.ಪೂಜಾರಿ ತಿಳಿಸಿದ್ದಾರೆ.


ಬಂಟ್ವಾಳ ತಾಲೂಕು ಪಂಚಾಯತಿ ಕಟ್ಟಡದಲ್ಲಿರುವ  ಸಮಿತಿಯ ಕಚೇರಿಯಲ್ಲಿ ಬುಧವಾರ ನಡೆದ  ಪಂಚ ಗ್ಯಾರಂಟಿ ತಾಲೂಕು ಮಟ್ಟದ ಅನುಷ್ಠಾನ ಸಮಿತಿಯ ಪ್ರಗತಿಪರಿಶೀಲನಾ ಸಭೆಯ  ಅಧ್ಯಕ್ಷತೆ ವಹಿಸಿ ಅವರು ಮಾಹಿತಿ ನೀಡಿದರು.
ಅದೇ ರೀತಿ ಆಗಸ್ಟ್ 02 ರಂದು ಸಮಿತಿಯಿಂದ “ಆಟಿದ ಗಮ್ಮತ್ತು”  ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ ಅವರು‌ ಹಿಂದಿನ ಸಭೆಯಲ್ಲಿ ಫ್ಲೈಓವರ್ ನಿರ್ಮಾಣದ ಬಳಿಕ ಉಪ್ಪಿನಂಗಡಿಯಿಂದ ಬರುವ ಬಸ್ಸುಗಳು ಮಾಣಿ ಜಂಕ್ಷನ್ ನಲ್ಲಿ ನಿಲುಗಡೆ ಗೊಳಿಸುವಂತೆ ಸಮಿತಿ ಕೈಗೊಂಡ  ನಿರ್ಣಯಕ್ಕೆ ಕೆಎಸ್ ಆರ್ ಟಿಸಿಯ ಅಧಿಕಾರಿಗಳು ಸ್ಪಂದಿಸಿದ್ದು,ಇದೀಗ  ಮೊದಲಿನಂತೆ ಮಾಣಿ ಬಸ್ಸು ತಂಗುದಾಣದಲ್ಲಿ ಬಸ್ಸು ನಿಲುಗಡೆಗೊಳಿಸುತ್ತಿದೆ ಎಂದು  ಸಭೆಗೆ ತಿಳಿಸಲಾಯಿತು.
ರಾಜ್ಯದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ  ಫಲಾನುಭವಿಗಳ ಸಂಖ್ಯೆ 500 ಕೋಟಿ ದಾಟಿದ ಹಿನ್ನಲೆಯಲ್ಲಿ  “ಶಕ್ತಿ ಸಂಭ್ರಮ” ಕಾರ್ಯಕ್ರಮವನ್ನು ಬಿ.ಸಿ.ರೋಡ್‌ ಕೆ.ಎಸ್‌.ಆರ್.ಟಿ.ಸಿ. ಡಿಪೋದಲ್ಲಿ ಕಾರ್ಯಕ್ರಮ ಆಯೋಜಿಸಿದ ಡಿಪೋ ಅಧಿಕಾರಿಯವರನ್ನು ಸಭೆಯಲ್ಲಿ  ಅಭಿನಂದಿಸಲಾಯಿತು.
ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ, ತಾಲೂಕು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿಯ ಕಾರ್ಯದರ್ಶಿಯಾದ ಸಚಿನ್ ಕುಮಾರ್, ಪಂಚ ಗ್ಯಾರಂಟಿ ಅನುಷ್ಠಾನಕ್ಕೆ ಸಂಬಂಧಿಸಿದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಮಿತಿಯ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು. 

By suddi9

Leave a Reply

Your email address will not be published. Required fields are marked *