ಬಂಟ್ವಾಳ:ತಾಲೂಕಿನ ಅಮ್ಟೂರುಶ್ರೀಕೃಷ್ಣ ಮಂದಿರದ ವತಿಯಿಂದ ೩೮ನೇ ವರ್ಷದ ಮೊಸರು ಕುಡಿಕೆ ಉತ್ಸವ ಶ್ರೀಕೃಷ್ಣ ಮಂದಿರದ ವಠಾರದಲ್ಲಿ ನಡೆಯಿತು. ಮಂದಿರದ ಅರ್ಚಕರಾದ ಮೋಹನ ಆಚಾರ‍್ಯ ಅವರು ದೀಪ ಬೆಳಗಿಸಿ, ತೆಂಗಿನ ಕಾಯಿ ಒಡೆಯುವ ಮೂಲಕ ಕಾರ‍್ಯಕ್ರಮವನ್ನು ಉದ್ಘಾಟಿಸಿ, ಆಟೋಟ ಸ್ಪರ್ಧೆಗಳಿಗೆ ಚಾಲನೆ ನೀಡಿದರು. ಮಧ್ಯಾಹ್ನದ ಬಳಿಕ  ಭವ್ಯವಾದ ಶೋಭಾಯಾತ್ರೆಯು ನಡೆಯಿತು. 

ಬಳಿಕ ಅಮ್ಟೂರು ಮೈದಾನದಲ್ಲಿ ನಡೆದ ಸಭಾ ಕಾರ‍್ಯಕ್ರಮದಲ್ಲಿ ಬಂಟ್ವಾಳ ವೆಂಕಟ್ರಮಣ ಸ್ವಾಮಿ ದೇವಳ ಪ.ಪೂ ಕಾಲೇಜಿನ ಉಪಾನ್ಯಾಸಕರಾದ ಜಯಾನಂದ ಪೆರಾಜೆ ಮಾತನಾಡಿ ನಾವೆಲ್ಲರೂ ಹುಲಿಗಳಂತೆ ವೀರರು, ಶೂರರು ಆಗಬೇಕು, ಸಂಘಟಕರಾಗಿ ಸಮಾಜದ ಬೆಳವಣಿಗೆಗೆ,  ದೇಶದ ರಕ್ಷಣೆಗೆ ಹೆಚ್ಚೆಚ್ಚು ಕೆಲಸ ಮಾಡಬೇಕು. ಅನ್ಯ ಮತೀಯ, ಅನ್ಯ ಸಂಸ್ಕೃತಿಗಳಿಂದ ನಮ್ಮ ಸಮಾಜದ ಮೇಲಾಗುವ ದಾಳಿಯ ವಿರುದ್ಧ ನಾವು ಒಗ್ಗಟ್ಟಾಗಿ ಹೋರಾಡಬೇಕು,ದೇಶ ಉಳಿದರೆ ಮಾತ್ರ ಇಂತಹ ಕಾರ‍್ಯಕ್ರಮಗಳನ್ನು ಮಾಡಲು ಸಾಧ್ಯ ಎಂದು ತಿಳಿಸಿದರು.

ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ಮಾರ್ನಬೈಲು ಶ್ರೀ ಅಯ್ಯಪ್ಪಸ್ವಾಮಿ ಮಂದಿರ ಆಡಳಿತ ಟ್ರಸ್ಟ್ (ರಿ)ನ ಗೌರವಾಧ್ಯಕ್ಷರಾದ ಸಂಜೀವ ಗುರುಸ್ವಾಮಿ ಅಮ್ಟೂರು  ವಹಿಸಿದ್ದರು.  ಮಂದಿರದ ಅಧ್ಯಕ್ಷರಾದ ರಮೇಶ್ ಕರಿಂಗಾಣ, ಜ್ಯೋತಿ ಮಹಿಳಾ ಮಂಡಳದ ಅಧ್ಯಕ್ಷರಾದ ಲಕ್ಷ್ಮೀ ವಿ. ಪ್ರಭು ಉಪಸ್ಥಿತರಿದ್ದರು. ಮಂದಿರದ ಪ್ರಧಾನ ಕಾರ‍್ಯದರ್ಶಿ ಕುಶಾಲಪ್ಪ ಅಮ್ಟೂರು  ಸ್ವಾಗತಿಸಿದರು. ಕಾರ‍್ಯದರ್ಶಿ ಶೇಖರ ಕೊಟ್ಟಾರಿ ವಂದಿಸಿದರು. 

ಪುಟಾಣಿಗಳ ಕೃಷ್ಣ-ರಾಧೆಯರ ವೇಷ, ಗೋಳ್ತಮಜಲು ಮತ್ತು ಶಂಭೂರಿನ ಕುಣಿತ ಭಜನೆ, ಹುಲಿವೇಷ, ಶ್ರೀ ಕ್ಷೇತ್ರ ಕಟ್ಟೆಮಾರ್‌ನ ಚೆಂಡೆವಾದ್ಯ, ಶಿವಾಜಿ ಫ್ರೆಂಡ್ಸ್ ಅಮ್ಟೂರು ಅವರ ನಾಸಿಕ್ ಬ್ಯಾಂಡ್‌ಗಳು ಶೋಭಾಯಾತ್ರೆಯ ಮೆರುಗು ನೀಡಿತು.

 ಉತ್ಸವದ ನಿಮಿತ್ತ ನಡೆದ ಅಟೋಟ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ಅಂಗನವಾಡಿ ಮಕ್ಕಳಿಗೆ, ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ ಮತ್ತು ಕೃಷ್ಣ-ರಾಧೆ ವೇಷ ಧರಿಸಿದ ಎಲ್ಲಾ ಪುಟಾಣಿಗಳಿಗೆ ಬಹುಮಾನವನ್ನು ವಿತರಿಸಲಾಯಿತು.

By suddi9

Leave a Reply

Your email address will not be published. Required fields are marked *