ಉಡುಪಿ: ಮಡೆಸ್ನಾನದ ಬದಲು ಎಡೆಸ್ನಾನ ಒಳ್ಳೆಯದು, ಈ ವಿವಾದವನ್ನು ಬೆಳೆಸಿಕೊಂಡು ಹೋಗುವುದಕ್ಕಿಂತ ಇದರಿಂದ ಬ್ರಾಹ್ಮಣರೇ ಹಿಂದೆ ಸರಿಯುವುದು ಸೂಕ್ತ ಎಂದು ಉಡುಪಿಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ಮಾಮೀಜಿ ತಿಳಿಸಿದ್ದಾರೆ.
ನಂತರ ಮಾತಾಡಿದ ಅವರು ಮಡೆಸ್ನಾನ ಆಚರಣೆಯಲ್ಲಿ ನನ್ನ ಕೈವಾಡವಿಲ್ಲ, ಇದೆಲ್ಲಾ ಸತ್ಯಕ್ಕೆ ದೂರವಾದ ವಿಚಾರ, ನನ್ನನ್ನು ಊಸರವಳ್ಳಿ ಎಂದು ಕರೆದರೂ ಚಿಂತೆಯಿಲ್ಲ, ಆದರೆ ಈ ವಿಚಾರದಿಂದ ಬ್ರಾಹ್ಮಣರೇ ಹಿಂದೆ ಸರಿಯುವುದು ಸೂಕ್ತ ಎಂಬ ಸಲಹೆ ನೀಡಿದ್ದಾರೆ.
ಹಿನ್ನೆಲೆ: ಕುಕ್ಕೆ ಸುಬ್ರಹ್ಮಣ್ಯ ದೇಗುಲದಲ್ಲಿ ಹಲವು ಕಾಲದಿಂದ ಮಡೆಸ್ನಾನ ಪದ್ಧತಿ ಜಾರಿಯಲ್ಲಿದೆ. ಬ್ರಾಹ್ಮಣರು ತಿಂದುಂಡ ಸಾಲು ಎಂಜಲ ಎಲೆಗಳ ಮೇಲೆ ಭಕ್ತರು ಉರುಳುತ್ತಾರೆ. ಇದರಿಂದ ಭಕ್ತರ ಹರಕೆ ತೀರುವುದರ ಜೊತೆಗೆ ಅವರ ಚರ್ಮದ ಕಾಯಿಲೆಗಳು ವಾಸಿಯಾಗುವುದೆಂಬ ವಾದವೂ ಇದೆ. ಆದರೆ, ಬೇರೆಯವರ ಎಂಜಲ ಮೇಲೆ ಉರುಳುವುದು ಅಮಾನವೀಯ ಎಂದು ಸಾಮಾಜಿಕ ಹೋರಾಟಗಾರರು ವಿರೋಧ ವ್ಯಕ್ತಪಡಿಸಿದ್ದರಿಂದ ಕೆಲ ಕಾಲ ಈ ಪದ್ಧತಿ ನಿಂತಿತ್ತು. ಮೊನ್ನೆಯಷ್ಟೇ ಹೈಕೋರ್ಟ್ ಈ ಮಡೆಸ್ನಾನಕ್ಕೆ ಮತ್ತೆ ಅನುಮತಿ ನೀಡಿದೆ. ಇನ್ನು, ವಿಶ್ವೇಶ್ವರ ತೀರ್ಥರು ಸಲಹೆ ನೀಡಿರುವ ಎಡೆಸ್ನಾನವೆಂದರೆ, ದೇವರಿಗೆ ಅರ್ಪಿಸಿದ ನೈವೇದ್ಯದ ಎಲೆಗಳ ಮೇಲೆ ಭಕ್ತರು ಉರುಳುವುದಾಗಿದೆ. ಇದು ಯಾವುದೇ ಅಪಚಾರಕ್ಕೂ ಎಡೆಮಾಡಿಕೊಡದು ಎಂಬ ನಂಬಿಕೆ ಪೇಜಾವರಶ್ರೀಗಳದ್ದಾಗಿದೆ.

